ಅರ್ಹ ಮೀಸಲಾತಿಗಾಗಿ ಹೋರಾಟವೊಂದೇ ಅಸ್ತ್ರ

21KUDLIGI1
Published on

ಕೂಡ್ಲಿಗಿ: ಸಂವಿಧಾನದ ಆಶಯದಂತೆ ಹಿಂದುಳಿದ ವರ್ಗಗಳಿಗೆ ನ್ಯಾಯಯುತ ಸ್ಥಾನಮಾನ ಸಿಗಬೇಕಿದ್ದು, ಅದಕ್ಕಾಗಿ ಒಗ್ಗಟ್ಟು ಪ್ರದರ್ಶನ ಮಾಡಬೇಕೆಂದು ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಎಚ್.ಕಾಂತರಾಜ ತಿಳಿಸಿದರು.

ಪಟ್ಟಣದ ಚಂದ್ರಶೇಖರ ಆಜಾದ್ ರಂಗಮಂದಿರದಲ್ಲಿ ಹಿಂದುಳಿದ ಜಾತಿಗಳ ಒಕ್ಕೂಟದ ತಾಲೂಕು ಸಮಿತಿಯಿಂದ ಆಯೋಜಿಸಿದ್ದ ಹಿಂದುಳಿದ ಜಾತಿಗಳ ಜಾಗೃತ ಸಮಾವೇಶ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಭಾನುವಾರ ಮಾತನಾಡಿದರು. 1950ರಲ್ಲಿ ಸಂವಿಧಾನ ಈ ದೇಶದ ಸರ್ವರಿಗೂ ಸಮನಾದ ಅವಕಾಶ ಕಲ್ಪಿಸಿದೆ. ಆದರೆ ಅತಿ ಹಿಂದುಳಿದ ಜಾತಿಗಳು ಸಂವಿಧಾನ ಕಲ್ಪಿಸಿದ ಅವಕಾಶ ಪಡೆಯಲು 12 ವರ್ಷ ಕಾಯಬೇಕಾಯಿತು ಎಂದರು.

1993 ರಲ್ಲಿ ಕೇಂದ್ರದ ವಿ.ಪಿ.ಸಿಂಗ್ ಸರ್ಕಾರ ಮಂಡಲ ಆಯೋಗದ ಮೂಲಕ ರಾಜಕೀಯ ಸ್ಥಾನಮಾನ ಕಲ್ಪಿಸಿತು. ಆದರೆ, ಹಿಂದುಳಿದ ಜಾತಿಗಳ ಶೇ.27 ಮೀಸಲಾತಿ ಸಮರ್ಪಕವಾಗಿ ಜಾರಿಯಾಗದಿರುವುದು ದುರಂತ. ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಅರ್ಹ ಮೀಸಲಾತಿ ಪಡೆಯಲು ಅತಿ ಹಿಂದುಳಿದ ಜಾತಿಗಳಿಗೆ ಹೋರಾಟವೊಂದೇ ಮಾನದಂಡವಾಗಿದೆ ಎಂದು ತಿಳಿಸಿದರು.

ಪ್ರಸ್ತುತ ಗ್ರಾಪಂನಿಂದ ಜಿಪಂವರೆಗೆ ರಾಜಕೀಯ ಮೀಸಲಾತಿ ನೀಡಿದ್ದು, ವಿಧಾನಸಭೆ ಹಾಗೂ ಲೋಕಸಭೆಯಲ್ಲೂ ಮೀಸಲಾತಿ ನೀಡಿದರೆ ನಾವು ಪ್ರಬಲವಾಗಿ ಬದುಕಲು ಸಾಧ್ಯ. ಇದಕ್ಕಾಗಿ ನಾವು ಸಂಘಟಿತ ಹೋರಾಟ ಮಾಡಬೇಕಿದೆ. ಅತಿ ಹಿಂದುಳಿದ ಜಾತಿಗಳ ಜನರು ಸಂವಿಧಾನ ಅರಿಯಬೇಕು. ನಮಗೆ ಯಾವ ವಿಧವಾದ ಸ್ಥಾನಮಾನ ಕಲ್ಪಿಸಲಾಗಿದೆ ಎಂಬುದನ್ನು ತಿಳಿಯಬೇಕು. ಜಾತಿ ಸಮೀಕ್ಷೆ ಮೂಲಕ ನಿಮ್ಮ ಸಮಗ್ರ ಮಾಹಿತಿಯನ್ನು ಕಡ್ಡಾಯವಾಗಿ ನಮೂದು ಮಾಡಿ ಸರ್ಕಾರದ ಎಲ್ಲ ಸೌಲಭ್ಯಗಳನ್ನು ಪಡೆಯುವಂತಾಗಬೇಕು ಎಂದು ಎಚ್.ಕಾಂತರಾಜ ತಿಳಿಸಿದರು.

ಹೊಸದುರ್ಗ ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಚಿತ್ರದುರ್ಗ ಮಾಚಿದೇವ ಸಂಸ್ಥಾನ ಪೀಠದ ಡಾ.ಬಸವ ಮಾಚಿದೇವ ಸ್ವಾಮೀಜಿ, ಚಿತ್ರದುರ್ಗ ಕೃಷ್ಣಯಾದವ ಸಂಸ್ಥಾನದ ಕೃಷ್ಣಯಾದವಾನಂದ ಸ್ವಾಮೀಜಿ, ಚಿತ್ರದುರ್ಗ ಕುಂಬಾರ ಗುಂಡಯ್ಯ ಸಂಸ್ಥಾನದ ಬಸವಮೂರ್ತಿ ಕುಂಬಾರ ಗುಂಡಯ್ಯ ಸ್ವಾಮೀಜಿ, ಹಾವೇರಿ ಜಿಲ್ಲಾ ನರಸೀಪುರ ಅಂಬಿಗರ ಚೌಡಯ್ಯ ಪೀಠದ ಶಾಂತ ಭೀಷ್ಮ ಚೌಡಯ್ಯ ಸ್ವಾಮೀಜಿ ಹಾಗೂ ಇತರ ವಿವಿಧ ಪೀಠದ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಿದ್ದರು.

ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಸಿ.ವೇಣುಗೋಪಾಲ, ಜಿಲ್ಲಾ ಗೌರವಾಧ್ಯಕ್ಷ ಗುರುಲಿಂಗಪ್ಪ, ಜಿಲ್ಲಾಧ್ಯಕ್ಷ ಬುಡ್ಡಿ ಬಸವರಾಜ, ಕೋಶಾಧ್ಯಕ್ಷ ಮಡಿವಾಳ ಮಾರೇಶ್, ಪ್ರಧಾನ ಕಾರ್ಯದರ್ಶಿ ಲಕ್ಕಜ್ಜಿ ಮಲ್ಲಿಕಾರ್ಜುನ, ಕುರಿ ಶಿವಮೂರ್ತಿ, ಪಪಂ ಅಧ್ಯಕ್ಷ ಕಾವಲಿ ಶಿವಪ್ಪನಾಯಕ, ಸ್ಥಾಯಿ ಸಮಿತಿ ಅಧ್ಯಕ್ಷ ಸೈಯ್ಯದ್ ಶುಕೂರ್, ಉದಯ ಜನ್ನು, ಎಚ್.ಮರುಳಸಿದ್ದಪ್ಪ, ಕೆ.ಟಿ.ರಾಜಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net