

ಕೈಲಾಂಚ: ರಾಮನಗರ ತಾಲೂಕು ಆಡಳಿತ ಸಾರ್ವಜನಿಕರ ಮನೆ ಬಾಗಿಲಿಗೆ ಸೇವೆ ಒದಗಿಸುತ್ತಿದ್ದು ಸಾರ್ವಜನಿಕರು ತಾಲೂಕು ಆಡಳಿತಕ್ಕೆ ಉತ್ತಮ ಸಹಕಾರ ನೀಡಬೇಕೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ರಾಮನಗರ ತಾಲೂಕು ಕಛೇರಿ ಮಿನಿ ವಿಧಾನಸೌಧದ ಆವರಣದಲ್ಲಿ ಮಂಗಳವಾರ ನಡೆದ ಕೈಲಾಂಚ ಹೋಬಳಿ ಕೆಜಿ. ಹೊಸಹಳ್ಳಿ ಗ್ರಾಮದ ನಮೂನೆ 53 ರ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದ ಫಲಾನುಭವಿಗಳಿಗೆ ಜಮೀನಿನ ಹಕ್ಕು ಪತ್ರ ವಿತರಣೆ ಮಾಡಿ ಮಾತನಾಡಿದರು.
ಅರ್ಹ ಬಡವರ ಮನೆ ಬಾಗಿಲಿಗೆ ತಾಲೂಕು ಆಡಳಿತದ ಅಧಿಕಾರಿಗಳು ಖಾತೆ- ಪಹಣಿ ನೀಡಲು ಸಿದ್ಧತೆ ಮಾಡಿಕೊಂಡಿದ್ದು, ಎಲ್ಲರೂ ಸಹಕಾರ ನೀಡಬೇಕು ತಾಲೂಕು ಆಡಳಿತ ಉತ್ತಮವಾಗಿ ಕೆಲಸ ಮಾಡುತ್ತಿದೆ. ತಹಶೀಲ್ದಾರರು ಮುತುವರ್ಜಿಯಿಂದ ಅರ್ಹ ಬಡವರಿಗೆ ಖಾತೆ- ಪಹಣಿ ಪತ್ರಗಳನ್ನು ವಿತರಿಸಲು ಸಿದ್ಧತೆ ಮಾಡಿಕೊಂಡಿದ್ದು, ಇನ್ನ ಐದಾರು ತಿಂಗಳಲ್ಲಿ ನಿಮ್ಮ ಮನೆ ಬಾಗಿಲಿಗೆ ಬಂದು ವಿತರಣೆ ಮಾಡಲಿದ್ದಾರೆ ಎಂದರು.
ಸಾಗುವಳಿ ಚೀಟಿ ಕೊಡಿಸುತ್ತೇನೆ ಎಂದು ಯಾರಾದರೂ ಹಣ ಕೇಳಿದರೆ ನೀಡಬೇಡಿ. ಖಾತೆ- ಪಹಣಿ ಪಡೆಯಲು ಯಾರಿಗೂ ಹಣ ನೀಡಬೇಕಾಗಿಲ್ಲ. ಅರ್ಹರೆಲ್ಲರಿಗೂ ಉಚಿತವಾಗಿ ನೀಡಲಾಗುವುದು. ಯಾವುದೇ ಸಮಸ್ಯೆ ಇದ್ದರೂ ತಾಲೂಕು ಆಡಳಿತವನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಿ. ಇಂದು ಕೆ.ಜಿ. ಹೊಸಹಳ್ಳಿಯ ಲಾನುಭವಿಗಳಿಗೆ ಸಾಗುವಳಿ ಚೀಟಿ ಜತೆಗೆ ಖಾತೆ-ಪಹಣಿಯನ್ನು ಸಹ ಮಾಡಿಕೊಡಲಾಗುತ್ತಿದೆ. ಇಪ್ಪತ್ತು 20 ವರ್ಷಗಳ ಹಿಂದೆ ಪಡೆದಿದ್ದ ಸಾಗುವಳಿ ಚೀಟಿ ಪಡೆದವರು ಖಾತೆಯಾಗದೆ ಕಚೇರಿಗೆ ಅಲೆದಾಡುತ್ತಿದ್ದಾರೆ. ಈ ರೀತಿ ಆಗಬಾರದು ಎಂದು ಈಗ ದೊಡ್ಡ ಮಟ್ಟದಲ್ಲಿ ಖಾತೆ- ಪಹಣಿ ವಿತರಿಸುವ ಕಾರ್ಯ ನಡೆಯುತ್ತಿದೆ ಎಂದರು.
ತಾರತಮ್ಯ ಇಲ್ಲ: ಹಕ್ಕು ಪತ್ರ ವಿತರಣೆಗೆ ಸಂಬಂಧಿಸಿದಂತೆ ಯಾವುದೇ ರಾಜಕೀಯ ಇಲ್ಲ. ಕಾಂಗ್ರೆಸ್- ಬಿಜೆಪಿ ಕಾರ್ಯಕರ್ತರು ಎಂದು ಭೇದಭಾವ ಮಾಡುವುದಿಲ್ಲ. ಅರ್ಹ ಬಡವರೆಲ್ಲರಿಗೂ ನೀಡಲಾಗುತ್ತಿದೆ. ಈ ವಿಷಯದಲ್ಲಿ ಯಾರು ಗೊಂದಲ ಉಂಟು ಮಾಡಬಾರದು ಎಂದು ಕುಮಾರಸ್ವಾಮಿ ಸಲಹೆ ನೀಡಿದರು.
ಶಾಸಕಿ ಅನಿತಾ ಕುಮಾರಸ್ವಾಮಿ ಮಾತನಾಡಿ, ಇನ್ನು ಮುಂದೆ ರೈತರು ಕಚೇರಿಗಳಿಗೆ ಅಲೆಯಬೇಕಾಗಿಲ್ಲ. ಎರಡು ಹಳ್ಳಿಗಳಲ್ಲಿನ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ರೈತರಿಗೆ, ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು ಎಂಬುದು ಉದ್ದೇಶವಾಗಿದ್ದು, ಸಾರ್ವಜನಿಕರ ಸಹಕಾರವೂ ಮುಖ್ಯವಾಗಿದೆ ಎಂದರು.
ತಹಸೀಲ್ದಾರ್ ಎಂ. ವಿಜಯಕುಮಾರ್ ಮಾತನಾಡಿ, ಕೆ.ಜಿ. ಹೊಸಹಳ್ಳಿಯ 33 ಜನರಿಗೆ ಸಾಗುವಳಿ ಚೀಟಿ, ವಡೇರಹಳ್ಳಿ ಬಳಿಯ ಇರುಳಿಗರ ಕಾಲನಿಯ 19 ಹಾಗೂ ಕೆಂಪನಹಳ್ಳಿಯ 24 ಜನರಿಗೆ ಮನೆಗಳ ಹಕ್ಕುಪತ್ರ ವಿತರಿಸಲಾಗಿದೆ. ತಾಲೂಕು ಆಡಳಿತ ಜನಸ್ನೇಹಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಹಂತ ಹಂತವಾಗಿ ಸಾಗುವಳಿ ಚೀಟಿ ನೀಡಲು ತಾಲೂಕು ಆಡಳಿತ ಕ್ರಮ ಕೈಗೊಂಡಿದೆ. ಅನಧಿಕೃತವಾಗಿ ಸರ್ಕಾರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿರುವವರಿಗೆ 94 ಸಿಸಿಯಲ್ಲಿ ಅರ್ಜಿ ಸಲ್ಲಿಸಲು ಮಾ.31ರವರೆಗೆ ಅವಕಾಶನ ಈಡಲಾಗಿದೆ ಎಂದರು.
ಉಪವಿಭಾಗಾಧಿಕಾರಿ ಮಂಜುನಾಥ್, ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸದಸ್ಯೆ ಸವಿತಾ ದೇವರಾಜು, ಹರೀಸಂದ್ರ ಗ್ರಾಪಂ ಅಧ್ಯಕ್ಷೆ ಆಶಾ ಮಂಚೇಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ ರಾಜಶೇಖರ್, ಪ್ರಧಾನ ಕಾರ್ಯದರ್ಶಿ ಬಿ. ಉಮೇಶ್, ಜೆಡಿಎಸ್ ಪ್ರಚಾರ ಸಮಿತಿ ಅಧ್ಯಕ್ಷ ಆರ್. ಪಾಂಡುರಂಗ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಂಆರ್. ಶಿವಕುಮಾರಸ್ವಾಮಿ, ಜಿಪಂ ಮಾಜಿ ಅಧ್ಯಕ್ಷ ಎಚ್.ಸಿ. ರಾಜಣ್ಣ, ಗ್ರಾಪಂ ಮಾಜಿ ಅಧ್ಯಕ್ಷ ಎಚ್.ಎಸ್. ದೇವರಾಜು, ಮುಖಂಡರಾದ ಕೆ.ಜಿ. ಹೊಸಹಳ್ಳಿ ರಾಜು, ಬೆಟ್ಟೇಗೌಡ, ದೊರೆಸ್ವಾಮಿ, ಪಿ. ಅಶ್ವಥ್, ಅಜಯ್ ದೇವೇಗೌಡ, ಬೈರಯ್ಯ, ನಂದೀಶ್‌ಗೌಡ, ರಾಮಕೃಷ್ಣಯ್ಯ, ಗುರುಲಿಂಗಯ್ಯ, ಗೋಪಾಲನಾಯ್ಕ, ವೆಂಕಟೇಶ್, ವಾಸು, ಶ್ರೀನಿವಾಸಮೂರ್ತಿ, ಜೈಕುಮಾರ್, ಶಿವಲಿಂಗಯ್ಯ, ತಮ್ಮಣ್ಣ, ರೇವಣ್ಣ, ಭಾಸ್ಕರ್ ರಾಜಸ್ವ ನಿರೀಕ್ಷಕರಾದ ಪುಟ್ಟರಾಜು, ರಾಜಶೇಖರ್ ಮುಂತಾದವರಿದ್ದರು.