

ಹಟ್ಟಿಚಿನ್ನದಗಣಿ: ಮಹಿಳಾ ಸಬಲೀಕರಣ ಉದ್ದೇಶದಿಂದ ಗೃಹ ಲಕ್ಷ್ಮೀ ಯೋಜನೆಯಡಿ ಮನೆ ಯಜಮಾನಿಯ ಖಾತೆಗೆ 2 ಸಾವಿರ ನೀಡಲಾಗುತ್ತಿದ್ದು, ಸರ್ಕಾರ ನೀಡುವ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ತಾಪಂ ಇಒ ಅಮರೇಶ ಯಾದವ್ ಹೇಳಿದರು.
ಹಟ್ಟಿಚಿನ್ನದಗಣಿಗೆ ಸಮೀಪದ ರೋಡಲಬಂಡಾ(ತವಗ) ಗ್ರಾಮದ ಶಾದಿಮಹಲ್‌ನಲ್ಲಿ ಆಯೋಜಸಿದ್ದ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.
ತಾಲೂಕಿನಲ್ಲಿ ಶೇ. 80 ಮಹಿಳೆಯರು ಯೋಜನೆಯಡಿ ನೋಂದಣಿಯಾಗಿದ್ದು, ಬ್ಯಾಂಕ್ ಖಾತೆ, ಆಧಾರ್ ಕಾರ್ಡ್ ಆಧರಿಸಿ ಅರ್ಹ ಫಲಾನುಭವಿಗಳಿಗೆ ಹಣ ಜಮೆ ಮಾಡಲಾಗುತ್ತಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ಉದ್ಯೋಗಸ್ಥರನ್ನಾಗಿ ನಿರ್ಮಿಸುವಲ್ಲಿ ಮನೆಯಲ್ಲಿ ತಾಯಂದಿರ ಪಾತ್ರ ಮಹತ್ತರವಾಗಿದೆ. ಸರ್ಕಾರ ನೀಡಿರುವ ಉಚಿತ ಭಾಗ್ಯಗಳ ಸದ್ವಿನಿಯೋಗಕ್ಕೆ ಪ್ರತಿಯೊಬ್ಬರೂ ಕೈಜೋಡಿಸಿದಾಗ ಯೋಜನೆ ಸಾಫಲ್ಯ ಕಾಣಲಿದೆ ಎಂದರು.
ಹಟ್ಟಿ ಪಪಂ ವ್ಯಾಪ್ತಿಯಲ್ಲಿ ಕಾರ್ಮಿಕ ಸಂಘ ಪೈಭವನದಲ್ಲಿ ಆಯೋಜಸಿದ್ದ ಕಾರ್ಯಕ್ರಮಕ್ಕೆ ತಹಸೀಲ್ದಾರ್ ಶಂಶಾಲಂ ಹಾಗೂ ನಾಡ ತಹಸೀಲ್ದಾರ್ ರಂಗಪ್ಪ ನಾಯಕ್ ದೊರೆ ಫಲಾನುಭವಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸುವ ಮೂಲಕ ಚಾಲನೆ ನೀಡಿದರು.
ಹಟ್ಟಿಚಿನ್ನದಗಣಿ ವ್ಯಾಪ್ತಿಯ ಆನ್ವರಿ, ಗೆಜ್ಜಲಗಟ್ಟಾ, ಕೋಠಾ, ಗೌಡೂರು, ಪೈದೊಡ್ಡಿ ಸೇರಿ 6 ಗ್ರಾಪಂ ವ್ಯಾಪ್ತಿಯಲ್ಲಿ ಉದ್ಘಾಟನಾ ಸಮಾರಂಭದ ನೇರಪ್ರಸಾರವನ್ನು ಪರದೆಯಲ್ಲಿ ಬಿತ್ತರಿಸಲಾಯಿತು.
ಪಿಡಿಒ ಸಂಗಪ್ಪ, ಕರವಸೂಲಿಗಾರ ಭೀಮರಾಯ್ ಜೆ. ಮುಷ್ಠೂರ್, ಸದಸ್ಯರಾದ ಗಿರಿಜಮ್ಮ, ರಾಘವೇಂದ್ರ ಇತರರಿದ್ದರು.