

ಅರಸೀಕೆರೆ: ಎಲ್ಲರಿಗೂ ಸೂರು ಯೋಜನೆಯಯಡಿ ಅರ್ಹ ಫಲಾನುಭವಿಗಳಿಗೆ ಶೀಘ್ರವೇ ವಸತಿ ಭಾಗ್ಯ ಕಲ್ಪಿಸಲಾಗುವುದು ಎಂದು ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.
ನಗರಸಭೆ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಾಲಮೇಳ ಹಾಗೂ ವಿವಿಧ ಸವಲತ್ತುಗಳ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಕೇಂದ್ರ, ರಾಜ್ಯ ಹಾಗೂ ಫಲಾನುಭವಿಗಳ ವಂತಿಕೆ ಸಂಗ್ರಹಿಸಿ ಮನೆ ನಿರ್ಮಾಣ ಮಾಡಿಕೊಡಬೇಕು ಎನ್ನುವ ನಿಯಮವಿದೆ. ಉಭಯ ಸರ್ಕಾರಗಳು ಅನುದಾನ ಮೀಸಲಿಟ್ಟಿದ್ದು, ಬ್ಯಾಂಕ್ ಸಾಲ ಸೌಲಭ್ಯ ಕಲ್ಪಿಸುವ ಮೂಲಕ ಮೊದಲ ಹಂತದಲ್ಲಿ ಅಂದಾಜು 300 ಫಲಾನುಭವಿಗಳಿಗೆ ಮನೆಗಳನ್ನು ವಿತರಿಸುವ ಗುರಿ ಹೊಂದಲಾಗಿದೆ. ಹಕ್ಕು ಪತ್ರ ಪಡೆದವರು ನಿಗದಿತ ಮೊತ್ತ ಪಾವತಿಸಿ ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದು ಹೇಳಿದರು.
14 ಅಂಗವಿಕಲರಿಗೆ ಮೂರು ಚಕ್ರದ ವಾಹನ, ಎರಡು ಸ್ವಸಹಾಯ ಸಂಘಗಳಿಗೆ ಪಾರ್ಕ್ ನಿರ್ವಹಣೆ ಅದೇಶ ಹಾಗೂ ಆರೋಗ್ಯ ವಿಮಾ ಬಾಂಡ್ ಸೇರಿದಂತೆ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು.
ರಾಜೀವ್‌ಗಾಂಧಿ ವಸತಿ ನಿಗಮದ ಕಾರ್ಯದರ್ಶಿ ಪರುಶುರಾಮೇಗೌಡ ನಗರಸಭೆ ಅಧ್ಯಕ್ಷ ಸಮೀವುಲ್ಲಾ, ಪೌರಾಯುಕ್ತ ಕೃಷ್ಣಮೂರ್ತಿ, ಸದಸ್ಯರಾದ ಜಿ.ಟಿ.ಗಣೇಶ್, ಅನ್ನಪೂರ್ಣ, ಭಾಸ್ಕರ್, ಯುವರಾಜ್, ಅವಿನಾಶ್, ರೇವಣ್ಣ, ಕಿರಣ್ ಕುಮಾರ್, ಇಮ್ರಾನ್ ಖಾನ್ ಸೇರಿದಂತೆ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ನಾಗರೀಕರು ಪಾಲ್ಗೊಂಡಿದ್ದರು.