

ಹೂವಿನಹಡಗಲಿ: ತಾಲೂಕಿನ ಎಲ್ಲ ಅರ್ಹ ಫಲಾನುಭವಿಗಳಿಗೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ತಲುಪಿಸಲು ಅಧಿಕಾರಿಗಳು ಶ್ರಮಿಸಬೇಕು ಎಂದು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪಿ.ಟಿ.ಭರತ್ ಹೇಳಿದರು.
ಪಟ್ಟಣ ತಾಪಂ ಸಭಾಂಗಣದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆಯಲ್ಲಿ ಬುಧವಾರ ಮಾತನಾಡಿದರು. ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಯಾರೂ ಕೂಡ ಯೋಜನೆಗಳಿಂದ ವಂಚಿತರಾಗಬಾರದು. ತಾಲೂಕಿನಲ್ಲಿ ಗೃಹಲಕ್ಷ್ಮೀ ಯೋಜನೆಗೆ 1340 ಅರ್ಜಿದಾರರು ಆಧಾರ್ ಲಿಂಕ್ ಮಾಡದ ಕಾರಣ ಯೋಜನೆಯಿಂದ ವಂಚಿತರಾಗುತ್ತಿದ್ದಾರೆ. ಕೂಡಲೇ ಆಧಾರ್ ಲಿಂಕ್ ಮಾಡಿಸಿ ಯೋಜನೆಯ ಫಲಾನುಭವಿಗಳಾಗುವಂತೆ ನೋಡಿಕೊಳ್ಳಬೇಕು ಎಂದರು.
ಮಕರಬ್ಬಿ ಗ್ರಾಮದಲ್ಲಿ ಫಲಾನುಭವಿಯೊಬ್ಬರ ಬ್ಯಾಂಕ್ ಖಾತೆಗೆ ಜಮೆ ಆಗಿರುವ ಗೃಹಲಕ್ಷ್ಮೀ ಹಣವನ್ನು ಬ್ಯಾಂಕ್‌ನವರು ಗಂಡನ ಸಾಲಕ್ಕೆ ಜಮೆ ಮಾಡಿಕೊಳ್ಳುತ್ತಿದ್ದಾರೆ. ಸರ್ಕಾರದ ಸುತ್ತೋಲೆಯನ್ನು ಬ್ಯಾಂಕ್‌ನವರು ಪಾಲಿಸುತ್ತಿಲ್ಲ ಎಂದು ಸಮಿತಿ ಸದಸ್ಯ ಜಿ.ಶಿವಕುಮಾರಗೌಡ ತಿಳಿಸಿದರು. ತಾಪಂ ಇಒ ಉಮೇಶ್ ಮೈನಹಳ್ಳಿ, ಬ್ಯಾಂಕ್ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದರು. ಸಮಿತಿಯ ಜಿಲ್ಲಾ ಉಪಾಧ್ಯಕ್ಷ ಕೆ.ಎಸ್.ಶಾಂತನಗೌಡ, ಸದಸ್ಯ ಗುರುವಿನ ರವೀಂದ್ರ, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.