ಅರ್ಧಮರ್ಧ ರಸ್ತೆ ಕಾಮಗಾರಿಗೆ ಕಾಂಕ್ರಿಟ್ ಪೂರ್ಣಗೊಳಿಸಿ

Complete concrete for semi road work
ಮುದ್ದೇಬಿಹಾಳ ಪಟ್ಟಣದ ವಿದ್ಯಾನಗರ, ಹುಡ್ಕೋ ಬಡಾವಣೆಯ ನಿವಾಸಿಗಳು ಪುರಸಭೆ ಮುಖ್ಯಾಧಿಕಾರಿ ಮೋಹನ ಜಾಧವ ಅವರಿಗೆ ಮನವಿ ಸಲ್ಲಿಸಿದರು. ಶಸಾಪ ಅಧ್ಯಕ್ಷ ಬಸವರಾಜ ನಾಲತವಾಡ, ಶರಣಗೌಡ ಮಾಡಗಿ, ವಿಜಯಕುಮಾರ ಬಡಿಗೇರ, ಸಂದೀಪ ಬಿದರಕೋಟಿ, ಮಹಾಂತೇಶ ಹಿರೇಮಠ ಇತರರಿದ್ದರು.
Published on

ಮುದ್ದೇಬಿಹಾಳ: ವಿಧಾನಸಭೆ ಚುನಾವಣೆಗೂ ಮುನ್ನ ರಸ್ತೆ ಅಗೆದು, ಜಲ್ಲಿಕಲ್ಲು ಹಾಕಿ ಮೇಲೆ ಕಾಂಕ್ರಿಟ್ ಹಾಕಿ ಸರಿಪಡಿಸದೆ ಬಿಟ್ಟಿರುವ ಗುತ್ತಿಗೆದಾರರನ್ನು ಕರೆಸಿ ಕೂಡಲೇ ರಸ್ತೆಗಳಿಗೆ ಕಾಂಕ್ರಿಟ್ ಹಾಕುವಂತೆ ಆಗ್ರಹಿಸಿ ವಿದ್ಯಾನಗರ, ಹುಡ್ಕೋ ಬಡಾವಣೆಯ ನಿವಾಸಿಗಳು ಮಂಗಳವಾರ ಪುರಸಭೆ ಮುಖ್ಯಾಧಿಕಾರಿ ಮೋಹನ ಜಾಧವ ಅವರಿಗೆ ಮಂಗಳವಾರ ಮನವಿ ಪತ್ರ ಸಲ್ಲಿಸಿದರು.

ಶರಣು ಬೂದಿಹಾಳಮಠ ಫೌಂಡೇಷನ್ ಸಂಚಾಲಕ ಮಹಾಂತೇಶ ಬೂದಿಹಾಳಮಠ, ಕರ್ನಾಟಕ ಕೋ ಆಪ್ ಬ್ಯಾಂಕ್ ನಿರ್ದೇಶಕ ವೆಂಕನಗೌಡ ಪಾಟೀಲ ಮಾತನಾಡಿ, ರಸ್ತೆಗಳಲ್ಲಿ ಜಲ್ಲಿಕಲ್ಲು ಹಾಕಿ ಹಾಗೇ ಬಿಟ್ಟಿರುವುದರಿಂದ ನಿವಾಸಿಗಳಿಗೆ ಸಾಕಷ್ಟು ತೊಂದರೆ ಆಗುತ್ತಿದೆ. ಮಕ್ಕಳು, ವೃದ್ಧರು ಮಹಿಳೆಯರು ಸಂಚರಿಸುವುದಕ್ಕೆ ಸಾಕಷ್ಟು ತೊಂದರೆ ಆಗಿದೆ. ಈಗಾಗಲೇ ಮಾಧ್ಯಮಗಳಲ್ಲೂ ವಾರ್ಡ್‌ನ ರಸ್ತೆ ಸಮಸ್ಯೆ ಕುರಿತು ವರದಿಗಳು ಬಂದಿವೆ. ಗುತ್ತಿಗೆದಾರರು ಕೂಡಲೇ ಕಾಮಗಾರಿ ಪ್ರಾರಂಭಿಸದಿದ್ದರೆ ಬಡಾವಣೆಗಳ ನಿವಾಸಿಗಳು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪುರಸಭೆ ಎಸ್‌ಎಫ್‌ಸಿ ಅನುದಾನದಲ್ಲಿ ವಿದ್ಯಾನಗರ, ಹುಡ್ಕೋ ಬಡಾವಣೆಗಳ ಒಳ ಸಂಪರ್ಕ ರಸ್ತೆಗಳನ್ನು ಕಾಂಕ್ರಿಟ್ ರಸ್ತೆಗಳನ್ನಾಗಿ ಮಾಡಲು ಕ್ರಮ ಕೈಕೊಳ್ಳಲಾಗಿತ್ತು. ಎರಡೂ ಬಡಾವಣೆಗಳ ಅಂದಾಜು 10ಕ್ಕೂ ಹೆಚ್ಚು ಒಳ ಸಂಪರ್ಕ ರಸ್ತೆಗಳಲ್ಲಿ ಜಲ್ಲಿ ಕಲ್ಲು ಹಾಕಿ ಹಾಗೆಯೇ ಬಿಡಲಾಗಿದೆ. 5-6 ತಿಂಗಳುಗಳಿಂದ ಸಮಸ್ಯೆ ಹೆಚ್ಚಾಗಿದೆ. ಸಂಬಂಧಿಸಿದ ಅಧಿಕಾರಿಗಳಿಗೆ ನಾಲ್ಕೈದು ಬಾರಿ ಮೌಖಿಕವಾಗಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಚುನಾವಣೆ ಮುಗಿದ ಮೇಲೆ ಶಾಸಕರಾಗಿ ಆಯ್ಕೆ ಆಗಿರುವ ಸಿ.ಎಸ್. ನಾಡಗೌಡರು ಅಧಿಕಾರಿಗಳ ಸಭೆ ನಡೆಸಿ ಕಾಮಗಾರಿಗಳನ್ನು ನಡೆಸುವಂತೆ ಸೂಚಿಸಿದ್ದಾರೆ. ಹೀಗಿದ್ದರೂ ಕೆಲಸಗಳು ನೆನೆಗುದಿಗೆ ಬಿದ್ದಿವೆ. ರಸ್ತೆ ಕಾಂಕ್ರಿಟ್, ಅಗತ್ಯವಿರುವಲ್ಲಿ ಚರಂಡಿ ಸ್ಲಾೃಬ್, ಬೀದಿದೀಪ ಅಳವಡಿಸುವ ಕೆಲಸಗಳು ಆಗುತ್ತಿಲ್ಲ ಎಂದು ನಿವಾಸಿಗಳು ದೂರಿದ್ದಾರೆ.

ವಿದ್ಯಾನಗರ, ಹುಡ್ಕೋ ವಾರ್ಡ್ ನಿವಾಸಿಗಳಾದ ಶಸಾಪ ಅಧ್ಯಕ್ಷ ಬಸವರಾಜ ನಾಲತವಾಡ, ಶರಣಗೌಡ ಮಾಡಗಿ, ವಿಜಯಕುಮಾರ ಬಡಿಗೇರ, ಸಂದೀಪ ಬಿದರಕೋಟಿ, ಮಹಾಂತೇಶ ಹಿರೇಮಠ, ನಿವೃತ್ತ ಪಿಎಸ್‌ಐ ಟಿ.ಜಿ. ನೆಲವಾಸಿ, ಪಿ.ಬಿ. ಹಿರೇಮಠ, ಎಸ್.ಐ. ಹಿರೇಮಠ, ಎಸ್.ಎಂ. ಹಿರೇಮಠ, ಎ.ಎಂ. ಅಂಗಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net