ಮೈಸೂರು: ರಾಮನಗರ ಜಿಲ್ಲೆ ಹಾರೋಹಳ್ಳಿಯ ಅರ್ಧನಾರೀಶ್ವರ ಕಲಾಭಿವೃದ್ಧಿ ಟ್ರಸ್ಟ್‌ನಿಂದ ಡಿ. 6ರಿಂದ 9ರವರೆಗೆ ನಗರದ ಪುರಭವನದಲ್ಲಿ ವಿವಿಧ ನಾಟಕ ಪ್ರದರ್ಶನ ಇರಲಿದೆ ಎಂದು ಟ್ರಸ್ಟ್ ಅಧ್ಯಕ್ಷರಾದ ಸ್ವಪ್ನ ನಾಗರಾಜ್ ತಿಳಿಸಿದರು.
ಲೈಂಗಿಕ ಅಲ್ಪಸಂಖ್ಯಾತರು ಸಂಘಟಿಸಿ ಈ ನಾಟಕೋತ್ಸವವನ್ನು ಆಯೋಜಿಸಿದ್ದು, ಪಟ್ಟದ ನಾಗರಾಜಸ್ವಾಮಿ, ಶ್ರೀ ಇಳೈ ಆಳ್ವಾರ್ ಸ್ವಾಮಿ, ಹರೀಶ್‌ಗೌಡ, ಹುಯಿಲಾಳು ರಾಮಸ್ವಾಮಿ, ಶೋಭಾ ಇನ್ನಿತರರು ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಲೈಂಗಿಕ ಅಲ್ಪಸಂಖ್ಯಾತರು ಎಂದರೆ ಕೇವಲ ಭಿಕ್ಷಾಟನೆ ಮಾಡುವವರು ಎನ್ನುವ ಭಾವನೆ ಇರುತ್ತದೆ. ನಮ್ಮಲ್ಲಿಯೂ ಕಲೆ, ಸಂಸ್ಕೃತಿಯ ಪ್ರತಿಭೆ ಇರುವವರು ಇದ್ದಾರೆ. ಅವರಿಗೂ ವೇದಿಕೆ ಬೇಕಿದೆ. ಅದಕ್ಕಾಗಿ ನಾಟಕ ಪ್ರದರ್ಶನದ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದು, ದಾನಿಗಳಿಂದ ಇಂತಹ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಹೇಳಿದರು.
ನಮ್ಮಂತಹ ಕಲಾವಿದರಿಗೆ ಬೆಂಬಲವಾಗಿ ನಿಲ್ಲಬೇಕಾದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮೊದಲು ನಾಟಕ ಮಾಡಿ ಬಳಿಕ ಸಹಾಯ ಧನ ನೀಡಲಾಗುವುದು ಎನ್ನುವ ನಿಯಮ ಜಾರಿಗೊಳಿಸಿರುವುದು ಸರಿಯಲ್ಲ. ಸಹಾಯಧನವನ್ನು ಮೊದಲೇ ನೀಡಿದರೆ ನಾಟಕ ಆಯೋಜಿಸಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಇಲಾಖೆ ಸಹಕರಿಸಬೇಕು ಎಂದು ಕೋರಿದರು.
ಆಯೋಜಕರಾದ ಮಹೇಶ್ವರಿ ಪಟೇಲ್ ಇದ್ದರು.