ಅರ್ಧ ಹುಬ್ಬಳ್ಳಿಯೇ ಕಂಟೇನ್ಮೆಂಟ್!

h13-Ganesh Peth 4
Published on

ಹುಬ್ಬಳ್ಳಿ: 2-3 ದಿನದಲ್ಲಿ ನಗರದ ವಿವಿಧ ಭಾಗದಲ್ಲಿ ಕರೊನಾ ಸೋಂಕಿತರು ಪತ್ತೆಯಾಗಿರುವುದರಿಂದ ಆಯಾ ಪ್ರದೇಶದಲ್ಲಿ ನಿಯಮಾನುಸಾರ ಸೀಲ್​ಡೌನ್, ಕಂಟೇನ್ಮೆಂಟ್ ವಲಯ ಘೊಷಿಸಲಾಗುತ್ತಿದೆ. ಗಣೇಶಪೇಟೆ, ರವಿನಗರ, ನವನಗರ, ಭೈರಿದೇವರಕೊಪ್ಪ ಹೀಗೆ ಬೇರೆ ಬೇರೆ ಕಡೆಯಲ್ಲಿ ಸಾರ್ವಜನಿಕ ರಕ್ಷಣಾ ಕ್ರಮ ಕೈಗೊಳ್ಳುತ್ತಿರುವುದರಿಂದ ಹೆಚ್ಚು ಕಡಿಮೆ ಅರ್ಧ ಹುಬ್ಬಳ್ಳಿಯೇ ಕಂಟೇನ್ಮೆಂಟ್ ವಲಯದಲ್ಲಿ ಬಂದಂತೆ ಆಗುತ್ತಿದೆ.

ಸೀಲ್​ಡೌನ್: ನಗರದ ಗಣೇಶಪೇಟೆಯ ಕೊರವಿ ಪ್ಲಾಜಾ ಸುತ್ತಲಿನ 100 ಮೀ. ಪ್ರದೇಶವನ್ನು ಮಹಾನಗರ ಪಾಲಿಕೆ ಕೊನೆಗೂ ಸೀಲ್​ಡೌನ್ ಮಾಡಿದೆ. ಕರೊನಾ ಸೋಂಕು ಪಾಸಿಟಿವ್ ಬಂದಿರುವ ಬೆಂಗಳೂರು ಹಾಗೂ ಕೋಲಾರ ಮೂಲದ ವ್ಯಕ್ತಿಗಳಿಬ್ಬರೂ ಕೊರವಿ ಪ್ಲಾಜಾದಲ್ಲಿ ಅರ್ಧ ದಿನ ತಂಗಿರುವುದು ಖಚಿತಗೊಂಡಿದೆ.

ಇಬ್ಬರೂ ವ್ಯಕ್ತಿಗಳು ಈ ಕಟ್ಟಡದಲ್ಲಿ ಅರ್ಧ ತಾಸು ಮಾತ್ರ ಇದ್ದರೆಂಬ ಪ್ರಥಮ ಮಾಹಿತಿಯಿಂದಾಗಿ ಈ ಪ್ರದೇಶವನ್ನು ಸೀಲ್​ಡೌನ್ ಮಾಡಬೇಕೊ ಅಥವಾ ಬೇಡವೊ ಎಂಬ ಗೊಂದಲ ಉಂಟಾಗಿತ್ತು. ಶನಿವಾರ ಸಂಜೆ 5 ಗಂಟೆ ನಂತರ ಈ ಪ್ರದೇಶವನ್ನು 28 ದಿನಗಳವರೆಗೆ ಸೀಲ್​ಡೌನ್ ಮಾಡಲು ನಿರ್ಧರಿಸಲಾಯಿತು.

ಅಂತರ ಮರೆತ ಜನ: ನಗರದ ಹಳೇ ಬಸ್ ನಿಲ್ದಾಣದ ಗ್ರಾಮೀಣ ಭಾಗದ ಬಸ್​ಗಳು ನಿಲುಗಡೆಗೊಳ್ಳುವ ಸ್ಥಳದಲ್ಲಿ ಪ್ರಯಾಣಿಕರು ಪರಸ್ಪರ ಅಂತರ ಮರೆತು ಕುಳಿತಿರುವುದು ಶನಿವಾರ ಮಧ್ಯಾಹ್ನ ಕಂಡುಬಂದಿತು. ಬ್ಯಾಹಟ್ಟಿ, ಶೆರೆವಾಡ, ಮಿಶ್ರಿಕೋಟಿ, ಬೊಮ್ಮಸಮುದ್ರ, ಕರಡಿಕೊಪ್ಪ ಸೇರಿ ಇತರೆ ಬಸ್​ಗಳು ನಿಲುಗಡೆಗೊಳ್ಳುವ ಸ್ಥಳದಲ್ಲಿ ಪ್ರಯಾಣಿಕರು ಮಾಸ್ಕ್ ಧರಿಸಿದ್ದರಾದರೂ, ಪರಸ್ಪರ ಅಂತರ ಮರೆತು ಬಸ್​ಗಾಗಿ ಕಾಯುತ್ತ ಕುಳಿತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net