

ರೇವಣಸಿದ್ದಪ್ಪ ಪಾಟೀಲ್ ಬೀದರ್
ಜಿಲ್ಲೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜನ್ಮ ತಾಳಿ ಬರೋಬ್ಬರಿ 50 ವರ್ಷವಾಗಿದೆ. ಆದರೆ ಈ ಅವಧಿಯಲ್ಲಿ ಕೇವಲ 18 ಜಿಲ್ಲಾ ಸಮ್ಮೇಳನ ಜರುಗಿದ್ದು, ಈಗ 19ನೇ ಅಕ್ಷರ ಜಾತ್ರೆಗೆ ಅಣಿಯಾಗಿದೆ. 1970ರಲ್ಲಿ ಜಿಲ್ಲಾ ಕಸಾಪ ಅಸ್ತಿತ್ವಕ್ಕೆ ಬಂದಿತು. ಮೊದಲ ಅಧ್ಯಕ್ಷ ಸ್ಥಾನ ಹಣಮಂತಪ್ಪ ಪಾಟೀಲ್ ಅಲಂಕರಿಸಿದ್ದರು. 1970ರಿಂದ 1977ರವರೆಗೆ ಪಾಟೀಲ್ ಅಧ್ಯಕ್ಷರಾಗಿ ಕಸಾಪಕ್ಕೆ ಭದ್ರ ಬುನಾದಿ ಹಾಕಿದರು.
ಕಳೆದೈದು ದಶಕದಲ್ಲಿ ಜಿಲ್ಲಾ ಕಸಾಪ ಒಂಬತ್ತು ಅಧ್ಯಕ್ಷರನ್ನು (ಕೆಲವರು ಎರಡ್ಮೂರು ಅವಧಿಗೆ ಅಧ್ಯಕ್ಷರು) ಕಂಡಿದೆ. ಪ್ರೊ.ಸಿದ್ರಾಮಪ್ಪ ಮಾಸಿಮಾಡೆ ಹಾಗೂ ಡಾ.ಜಗನ್ನಾಥ ಹೆಬ್ಬಾಳೆ ತಲಾ ಮೂರು ಅವಧಿಗೆ ಜಿಲ್ಲಾಧ್ಯಕ್ಷರಾಗಿದ್ದರು. ಹಣಮಂತಪ್ಪ ಪಾಟೀಲ್, ಪಂಚಾಕ್ಷರಿ ಪುಣ್ಯಶೆಟ್ಟಿ ಎರಡು, ಕಾಶೀನಾಥ ವಿಶ್ವಕರ್ಮ, ಎನ್.ಸೀತಾರಾಮಪ್ಪ, ಬಸವರಾಜ ಅಂಬಲಗಿ, ಬಾಬುರಾವ ವಡ್ಡೆ ಒಂದು ಅವಧಿಗೆ ಅಧ್ಯಕ್ಷರಾಗಿದ್ದರು. ಸದ್ಯ ಸುರೇಶ ಚನ್ನಶೆಟ್ಟಿ ಎರಡನೇ ಬಾರಿಗೆ ಜಿಲ್ಲಾಧ್ಯಕ್ಷರಾಗಿದ್ದಾರೆ. 9 ಜಿಲ್ಲಾಧ್ಯಕ್ಷರ ಪೈಕಿ ಅತ್ಯಧಿಕ ಜಿಲ್ಲಾ ಸಮ್ಮೇಳನ ಮಾಡಿದ ಖ್ಯಾತಿ ಸಿದ್ರಾಮಪ್ಪ ಮಾಸಿಮಾಡೆ ಅವರಿಗೆ ಸಲ್ಲುತ್ತದೆ. ಇವರ ಮೂರು ಅವಧಿಯಲ್ಲಿ ಏಳು ಸಮ್ಮೇಳನ ನಡೆದಿವೆ.
ಡಾ.ಹೆಬ್ಬಾಳೆ ಅವಧಿಯಲ್ಲಿ ಮೂರು ಸಮ್ಮೇಳನಗಳಾಗಿವೆ. ಚನ್ನಶೆಟ್ಟಿ ಅಧ್ಯಕ್ಷತೆಯಲ್ಲಿ ಈಗ 4ನೇ ಸಮ್ಮೇಳನ ನಡೆಯುತ್ತಿದೆ. ಜಿಲ್ಲೆಯಲ್ಲಿ ಮೂರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿವೆ. ಜಿಲ್ಲೆಯಲ್ಲಿ ಕಸಾಪ ಅಸ್ತಿತ್ವಕ್ಕೆ ಬರುವ ಮುನ್ನ 1960ರ ಫೆಬ್ರವರಿ 11ರಿಂದ ಮೂರು ದಿನ ಡಿ.ಎಲ್. ನರಸಿಂಹಾಚಾರ್ಯ ಸವರ್ಾಧ್ಯಕ್ಷತೆಯಲ್ಲಿ 41ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿತ್ತು. ನಂತರ ಎನ್. ಸೀತಾರಾಮಪ್ಪ ಜಿಲ್ಲಾಧ್ಯಕ್ಷರಿದ್ದಾಗ 1985ರ ಏಪ್ರಿಲ್ 5ರಿಂದ 57ನೇ ಅಖಿಲ ಭಾರತ ಸಮ್ಮೇಳನ ಡಾ.ಹಾ.ಮಾ. ನಾಯಕ ಸವರ್ಾಧ್ಯಕ್ಷತೆ ಹಾಗೂ ಡಾ.ಹೆಬ್ಬಾಳೆ ಅವಧಿಯಲ್ಲಿ 2006ರ ಜನವರಿ 27ರಿಂದ ಮೂರು ದಿನ ಡಾ.ಶಾಂತರಸ ಸವರ್ಾಧ್ಯಕ್ಷತೆಯಲ್ಲಿ 72ನೇ ಸಮ್ಮೇಳನ ನಡೆದಿತ್ತು.
ಈವರೆಗಿನ ಜಿಲ್ಲಾ ಸಮ್ಮೇಳನ ಸರ್ವಾಧ್ಯಕ್ಷರು…
1 ಪ್ರೊ.ಜಿ.ವೆಂಕಟಸುಬ್ಬಯ್ಯ (1972)
2 ಜಯತೀರ್ಥ ರಾಜಪುರೋಹಿತ (1983)
3 ಪ್ರೊ.ವೀರೇಂದ್ರ ಸಿಂಪಿ (1991)
4 ಡಾ.ಕಾಶೀನಾಥ ಅಂಬಲಗೆ (1994)
5 ಪ್ರೊ.ಭಾಲಚಂದ್ರ ಜಯಶೆಟ್ಟಿ (1998)
6 ಡಾ.ಜಿ.ಬಿ. ವಿಸಾಜಿ (2001)
7 ಯಶೋದಮ್ಮ ಸಿದ್ದಬಟ್ಟೆ (2003)
8 ದೇಶಾಂಶ ಹುಡಗಿ (2004)
9 ಪಂಚಾಕ್ಷರಿ ಪುಣ್ಯಶೆಟ್ಟಿ (2008)
10 ಎಂ.ಜಿ.ಗಂಗನಪಳ್ಳಿ (2010)
11 ಶಿವಶರಣಪ್ಪ ವಾಲಿ (2011)
12 ಎಚ್.ಕಾಶೀನಾಥರೆಡ್ಡಿ (2013)
13 ಚಂದ್ರಪ್ಪ ಹೆಬ್ಬಾಳಕರ್ (2014)
14 ಡಾ.ಮಾಣಿಕರಾವ ಧನಾಶ್ರೀ (2015)
15 ಹಣಮಂತಪ್ಪ ಪಾಟೀಲ್ (2016)
16 ಎಂ.ಜಿ.ದೇಶಪಾಂಡೆ (2017)
17 ಅಕ್ಕ ಅನ್ನಪೂರ್ಣ (2019)
18 ಡಾ.ಸೋಮನಾಥ ಯಾಳವಾರ (2020)
19 ಎಸ್.ಎಂ. ಜನವಾಡಕರ್ (2022)
ಬೀದರ್: ಶಿವಶರಣಪ್ಪ ಮರಿಲಿಂಗಪ್ಪ (ಎಸ್ಎಂ) ಜನವಾಡಕರ್. ಜಿಲ್ಲೆಯ ಹಿರಿಯ ಸಾಹಿತಿಗಳ ಪಂಕ್ತಿಯಲ್ಲಿರುವ ಪ್ರಮುಖರಲ್ಲೊಬ್ಬರು. ವಿವಿಧ ಪ್ರಕಾರದ ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರೂ ಬೌದ್ಧ ಸಾಹಿತಿ ಎಂದೇ ಬಿಂಬಿತರಾಗಿರುವುದು ವಿಶೇಷ.
ಬೌದ್ಧ ಸಾಹಿತ್ಯಕ್ಕೆ ಸಂಬಂಧಿಸಿದ ಹಲವು ಕೃತಿಗಳನ್ನು ಹೊರತಂದಿರುವ ಎಸ್.ಎಂ. ಜನವಾಡಕರ್, ಈ ಕ್ಷೇತ್ರದಲ್ಲಿ ಸಂಶೋಧನೆ ಸಹ ನಡೆಸುತ್ತಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುತ್ತಲೇ ಸಾಹಿತ್ಯದ ಗೀಳು ಹಚ್ಚಿಕೊಂಡವರು. ಸೇವೆಯಲ್ಲಿದ್ದಾಗ ಶಿಕ್ಷಣ ವೃತ್ತಿಯಾಗಿದ್ದರೆ, ಸಾಹಿತ್ಯ ಪ್ರವೃತ್ತಿ ಆಗಿತ್ತು. ನಿವೃತ್ತಿ ನಂತರ ಸಾಹಿತ್ಯವನ್ನೇ ಪ್ರಮುಖ ವೃತ್ತಿಯಾಗಿಸಿಕೊಂಡಿರುವ ಇವರ ಸವರ್ಾಧ್ಯಕ್ಷತೆಯಲ್ಲಿ ಹಾರಕೂಡದಲ್ಲಿ ಭಾನುವಾರದಿಂದ ಎರಡು ದಿನ 19ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಲಿದೆ.
71ರ ಹರೆಯದ ಜನವಾಡಕರ್ ಅವರಿಗೆ ಸಾಹಿತ್ಯದಲ್ಲಿ ಎಲ್ಲಿಲ್ಲದ ಅಭಿರುಚಿ, ಆಸಕ್ತಿ. ಸಾಹಿತ್ಯಿಕ, ಸಾಮಾಜಿಕ ಹಾಗೂ ಕನ್ನಡಪರ ಚಟುವಟಿಕೆಗಳಲ್ಲಿ ಯುವಕರಂತೆ ಹುಮ್ಮಸ್ಸಿನಿಂದ ಪಾಲ್ಗೊಳ್ಳುತ್ತಾರೆ. ನಯ-ವಿನಯಶೀಲ ಸೌಜನ್ಯ-ಸ್ವಭಾವ ಮೆಚ್ಚುವಂಥದ್ದು. ಕವನ ಸಂಕಲನ, ಕಥೆ, ನಾಟಕ ಸೇರಿ ವಿವಿಧ ಪ್ರಕಾರದ ಸಾಹಿತ್ಯ ರಚಿಸಿರುವ ಇವರ ಸಾಹಿತ್ಯ ಕೃಷಿಯಲ್ಲಿ ಬುದ್ಧನ ಕುರಿತು ಪ್ರಮುಖವಾಗಿ ಕಾಣಬಹುದು.
ಭಾಲ್ಕಿ ತಾಲೂಕಿನ ಹಾಲಹಳ್ಳಿ(ಕೆ) ಗ್ರಾಮದಲ್ಲಿ 1950ರ ಅಕ್ಟೋಬರ್ 3ರಂದು ಜನಿಸಿರುವ ಜನವಾಡಕರ್ ಅವರಿಗೆ ಬಾಲ್ಯದಿಂದಲೇ ಅಂಬೇಡ್ಕರ್ ಅವರ ಸಂಘರ್ಷದ ಹಾದಿ, ಸಾಧಿಸಿದ ಪರಿ ಆಕಷರ್ಿಸಿದೆ. ಪ್ರಾಥಮಿಕ ಶಾಲೆ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ ನಂತರ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿ 2008ರಲ್ಲಿ ನಿವೃತ್ತಿ ಹೊಂದಿದ್ದು, ವಿವಿಧ ಚಟುವಟಿಕೆ ಜತೆಗೆ ಬರೆಯುವ ಗೀಳು ಅಂಟಿಸಿಕೊಂಡು ಹಲವು ಕೃತಿಗಳನ್ನು ರಚಿಸಿದ್ದಾರೆ. ಸೊನ್ನಲಾಪುರ ಸಿದ್ಧರಾಮ ಕುರಿತ ಪ್ರಥಮ ಲೇಖನ, ರಮಣಿ ಚದುರಿದಳು ಕವನ ಸಂಕಲನ, ಹಸಿರು ಕ್ರಾಂತಿ ನಾಟಕ, ಗಾಜಿನ ಬಳೆಚೂರು, ನಂಟು ಬಿಡದೆ ಅಂಟಿಕೊಂಡವರು (ಕಾದಂಬರಿ), ಬಣ್ಣದ ಬುದುಕು, ಮಾಸಿದ ಹಾಸಿಗೆ, ಹಿಮಸಾಗರ, ಬೀದರ್ ಜಾನಪದ ಸಿರಿ, ಕರುಳಿನ ಕತ್ತರಿ, ಕಲ್ಯಾಣ ಕಂಡ ಕಲ್ಯಾಣ, ಕಮಲ ದಾರಿಯ ಪಯಣ, ಕಾದ ಕಂಬನಿ ಸೇರಿ ಈವರೆಗೆ 31 ಪುಸ್ತಕ ರಚನೆ ಮಾಡಿದ್ದು, ಇದರಲ್ಲಿ ಏಳು ಮುದ್ರಣ ಹಂತದಲ್ಲಿವೆ.
ಬೌದ್ಧ ಸಾಹಿತ್ಯಕ್ಕೆ ಸಂಬಂಧಿಸಿದ ಶೀಲ ತರಂಗ, ಪ್ರಜ್ಞಾ ತರಂಗ, ಕರುಣಾ ತರಂಗ (ಕವನ ಸಂಕಲನ), ಧಮ್ಮಾಮೃತ ಗೀತೆ (ಬುದ್ಧನ ಚರಿತ್ರೆ ಕಾವ್ಯ), ಬುದ್ಧ ಗೆದ್ದ ಮಾರನ ಯುದ್ಧ (ನಾಟಕ), ತಥಾಗತ ಗಾಥೆಗಳ್ (ಧಮ್ಮ ಚರಿತ್ರೆ ಕಾವ್ಯ), ಬುದ್ಧ ಮತ್ತು ಬೋಧಿ ವೃಕ್ಷ, ಧರಿನಾಡಿನ ಬುದ್ಧನ ನೆಲೆಗಳು (ಪುಸ್ತಕ), ಭಗವಾನ ಬುದ್ಧ (ಧ್ವನಿ ಸುರುಳಿ) ಸೇರಿ 10 ಕೃತಿಗಳನ್ನು ರಚಿಸಿ ವಿವಿಧ ಕ್ಷೇತ್ರದಗಳಲ್ಲಿನ ಇವರ ಸೇವೆ ಪರಿಗಣಿಸಿ ಹಲವು ಪ್ರಶಸ್ತಿಗಳು ಅರಸಿ ಬಂದಿವೆ. ಬೌದ್ಧ ಧರ್ಮ, ಸಾಹಿತ್ಯ, ಸಂಸ್ಕೃತಿ ಅಭಿವೃದ್ಧಿಗೆ ಹಾಗೂ ಒಟ್ಟಾರೆ ಕನರ್ಾಟಕದಲ್ಲಿ ಬೌದ್ಧ ಧರ್ಮದ ಮರುಜೀವನಕ್ಕೆ ಅನುಪಮ ಸೇವೆ ಸಲ್ಲಿಸಿದ್ದಕ್ಕೆ ಮೂರು ರಾಷ್ಟ್ರೀಯ ಪ್ರತಿಷ್ಠಿತ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.
ಶೀಘ್ರ ಬರಲಿದೆ ಬೀದರ್ ನುಡಿ ಸಂಪದ
5000 ಪದಗಳನ್ನು ಒಳಗೊಂಡ `ಬೀದರ್ ನುಡಿ ಸಂಪದ' ಪುಸ್ತಕ ಮುದ್ರಣಕ್ಕೆ ಹೋಗಿದ್ದು, ಶೀಘ್ರದಲ್ಲಿ ಮಾರುಕಟ್ಟೆಗೆ ಬರಲಿದೆ. ಈ ಸಂಪದದಲ್ಲಿ ಸ್ಥಳೀಯ ಆಡು ಭಾಷೆಯ ಪದಗಳಿಗೆ ಸ್ವವಿವರಣೆ ನೀಡಲಾಗಿದೆ. ಸ್ಥಳೀಯ ಪದಗಳಿಗೆ ಅರ್ಥ, ವಿವರಣೆ, ಪದ ಜನ್ಮ ತಾಳಿದ್ದು ಎಲ್ಲಿಂದ? ಯಾವ ಭಾಷೆಯಿಂದ ಎಂಬಿತ್ಯಾದಿ ಕುರಿತು ಉಲ್ಲೇಖಿಸಲಾಗಿದೆ. ಪುಸ್ತಕ ರಚನೆಗೆ ಎರಡ್ಮೂರು ವರ್ಷ ತೆಗೆದುಕೊಳ್ಳಲಾಗಿದೆ. ಹಂಪಿ ವಿಶ್ವವಿದ್ಯಾಲಯ ಮುದ್ರಣ ಹೊಣೆ ಹೊತ್ತಿಕೊಂಡಿದೆ.
ಇಂದು-ನಾಳೆ ಬೀದರ್ ಜಿಲ್ಲಾ 19ನೇ ಕನ್ನಡ ಸಾಹಿತ್ಯ ಸಮ್ಮೇಳನ
ಬಸವಕಲ್ಯಾಣ: ಸುಕ್ಷೇತ್ರ ಹಾರಕೂಡ ಮಠದ ಪರಿಸರದಲ್ಲಿ ಭಾನುವಾರ ಮತ್ತು ಸೋಮವಾರ ಆಯೋಜಿಸಿರುವ 19ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಜ್ಜಾಗಿದೆ. ಬೀದರ್ನ ಹಿರಿಯ ಸಾಹಿತಿ ಎಸ್.ಎಂ. ಜನವಾಡಕರ್ ಸರ್ವಾಧ್ಯಕ್ಷತೆಯಲ್ಲಿ ಅರ್ಥಪೂರ್ಣ ನುಡಿ ಹಬ್ಬ ಜರುಗಲಿದೆ.
ಸಮ್ಮೇಳನ ಅದ್ದೂರಿ ಜತೆಗೆ ಅರ್ಥಪೂರ್ಣವಾಗಿ ನಡೆಸಲು ಕಸಾಪ ಜಿಲ್ಲಾಧ್ಯಕ್ಷ ಸುರೇಶ ಚನ್ನಶೆಟ್ಟಿ ನೇತೃತ್ವದ ಟೀಮ್ ಸಜ್ಜಾಗಿದೆ. ಪೂಜ್ಯ ಲಿಂ. ಸದ್ಗುರು ಚನ್ನಬಸವ ಶಿವಯೋಗಿ ವೇದಿಕೆ, ಡಾ.ಜಯದೇವಿತಾಯಿ ಲಿಗಾಡೆ ಮಂಟಪ, ದೇಶಾಂಶ ಹುಡಗಿ, ಬಿ.ನಾರಾಯಣರಾವ, ಶ್ರೀಕಾಂತ ಪಾಟೀಲ್ ಮಹಾದ್ವಾರಗಳನ್ನು ನಿರ್ಮಿಸಲಾಗಿದೆ. ಎರಡು ದಿವಸ ವಿವಿಧ ಗೋಷ್ಠಿ, ಉಪನ್ಯಾಸಗಳ ಜತೆಗೆ ಗಡಿಯಲ್ಲಿ ಕನ್ನಡದ ಸ್ಥಿತಿಗತಿ ಮೇಲೂ ಚಿಂತನ-ಮಂಥನ ನಡೆಯಲಿದೆ.
ಭಾನುವಾರ ಬೆಳಗ್ಗೆ 10.30ಕ್ಕೆ ಹಿರಿಯ ಸಾಹಿತಿ ಸುಕನ್ಯಾ ಮಾರುತಿ ಸಮ್ಮೇಳನಕ್ಕೆ ಚಾಲನೆ ನೀಡುವರು. ಭಾಲ್ಕಿಯ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರು, ಹಾರಕೂಡದ ಶ್ರೀ ಡಾ.ಚನ್ನವೀರ ಶಿವಾಚಾರ್ಯ, ಹುಲಸೂರಿನ ಶ್ರೀ ಡಾ.ಶಿವಾನಂದ ಸ್ವಾಮೀಜಿ ಸಾನ್ನಿಧ್ಯ, ಶಾಸಕ ಶರಣು ಸಲಗರ ಅಧ್ಯಕ್ಷತೆ ವಹಿಸುವರು. ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಡಾ.ಸೋಮನಾಥ ಯಾಳವಾರ ಪರಿಷತ್ ಧ್ವಜ ಹಸ್ತಾಂತರಿಸುವರು.
ಕೇಂದ್ರ ಸಚಿವ ಭಗವಂತ ಖೂಬಾ ಸ್ಮರಣ ಸಂಚಿಕೆ, ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್ ಕೃತಿ ಬಿಡುಗಡೆ ಮಾಡುವರು. ಶಾಸಕ ರಾಜಶೇಖರ ಪಾಟೀಲ್ ಪುಸ್ತಕ ಮಳಿಗೆ, ಈಶ್ವರ ಖಂಡ್ರೆ ಚಿತ್ರಕಲಾ ಪ್ರದರ್ಶನ ಉದ್ಘಾಟಿಸುವರು. ಶಾಸಕರಾದ ಬಂಡೆಪ್ಪ ಖಾಶೆಂಪುರ, ರಹೀಮ್ ಖಾನ್, ದತ್ತಾತ್ರೇಯ ಪಾಟೀಲ್ ರೇವೂರ, ಎಂಎಲ್ಸಿ ಭೀಮರಾವ ಪಾಟೀಲ್, ಕೆಎಸ್ಐಐಡಿಸಿ ಅಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ, ಡಾ.ರಜನೀಶ್ ವಾಲಿ ಇತರರು ಪಾಲ್ಗೊಳ್ಳುವರು. ಹಾರಕೂಡ ಶ್ರೀಮಠದಿಂದ ಕಸಾಪ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಅವರಿಗೆ ಕಲ್ಯಾಣ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.
ಮಧ್ಯಾಹ್ನ 1.30ಕ್ಕೆ ಸಾಂಸ್ಕೃತಿಕ ಸೌರಭ-1, ಶ್ರೀ ಪಂಚಾಕ್ಷರಿ ಸ್ವಾಮೀಜಿ ಸಾನ್ನಿಧ್ಯ, ಡಾ.ಹಣಮಂತ ಮೇಲಕೇರಿ ಅಧ್ಯಕ್ಷತೆಯಲ್ಲಿ 2ಕ್ಕೆ ಸಮ್ಮೇಳನಾಧ್ಯಕ್ಷರ ಜೀವನ ಸಾಧನೆ ಗೋಷ್ಠಿಯಲ್ಲಿ ಡಾ.ಈಶ್ವರಯ್ಯ ಕೊಡಂಬಲ್ ಉಪನ್ಯಾಸ ನೀಡುವರು. 3ಕ್ಕೆ ಕನ್ನಡ ಸಾಹಿತ್ಯ ಜೀವನದ ಮೌಲ್ಯಗಳ ಕುರಿತ ಗೋಷ್ಠಿ, ಸಂಜೆ 5ಕ್ಕೆ ಕವಿಗೋಷ್ಠಿ-1, 7ಕ್ಕೆ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಸೋಮವಾರ ಬೆಳಗ್ಗೆ 9ಕ್ಕೆ ಗಾನಯಾನ-1 ಇದ್ದು, 10ಕ್ಕೆ ಕವಿಗೋಷ್ಠಿ-2 ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಗಾನಯಾನ-2 ಇದ್ದು, 1ಕ್ಕೆ ಬೀದರ್ ಜಿಲ್ಲೆಯ ಅಭಿವೃದ್ಧಿ ಸಾಧ್ಯತೆ ಕುರಿತ ಗೋಷ್ಠಿ, 3ಕ್ಕೆ ವರ್ತಮಾನದ ತಲ್ಲಣಗಳು ಕುರಿತ ಗೋಷ್ಠಿ, ಸಂಜೆ 4.30ಕ್ಕೆ ಕನ್ನಡ ಸಾಹಿತ್ಯಕ್ಕೆ ಹಾರಕೂಡ ಮಠದ ಕೊಡುಗೆ ಕುರಿತು ವಿಶೇಷ ಉಪನ್ಯಾಸ ಹಾಗೂ 5.30ಕ್ಕೆ ಬಹಿರಂಗ ಅಧಿವೇಶನ, ಸಮಾರೋಪ ನಡೆಯಲಿದೆ. ಕಸಾಪ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿ ಸಮಾರೋಪ ಭಾಷಣ ಮಾಡುವರು. ವಿವಿಧ ಕ್ಷೇತ್ರದ ಸಾಧಕರಿಗೆ ಗೌರವ ಸನ್ಮಾನ ಇರಲಿದೆ.