

ಸೊರಬ: ನಶ್ವರ ಬದುಕಿಗೆ ಅರ್ಥಪೂರ್ಣ ಸಂಸ್ಕಾರ ನೀಡಿದಾಗ ಮಾತ್ರ ಬದುಕು ಪರಿಪೂರ್ಣವಾಗಲು ಸಾಧ್ಯ ಎಂದು ಜಡೆ ಸಂಸ್ಥಾನ ಮಠ ಹಾಗೂ ಸೊರಬ ಮುರುಘಾ ಮಠದ ಡಾ. ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.
ಇಲ್ಲಿನ ಮುರುಘಾ ಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 202ನೇ ಮಾಸಿಕ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.
ಮಾನವನ ಜೀವನ ಸಂಕಷ್ಟದ ಸಂಕೋಲೆಗಳಿಂದ ಕೂಡಿದ್ದು, ಅವುಗಳ ನಿವಾರಣೆಗೆ ಅಧ್ಯಾತ್ಮದ ಅನುಭವ ಹಾಗೂ ಶರಣರ ಚಿಂತನೆ ಅವಶ್ಯಕತೆಯಿದೆ. ಭೂಮಿಯ ಮೇಲೆ ಇರುವ ನಾವು ಸಮಾಜಕ್ಕೆ ಒಳಿತಾಗುವ ಮಾರ್ಗದಲ್ಲಿ ನಡೆಯಬೇಕು. ನಮ್ಮ ನಡೆ, ನುಡಿಗಳು ಶುದ್ಧವಾಗಿದ್ದಾಗ ನಮ್ಮ ವ್ಯಕ್ತಿತ್ವಕ್ಕೆ ಬೆಲೆ ಸಿಗಲು ಸಾಧ್ಯ. ಮನುಕುಲದ ಸಾತ್ವಿಕ, ಸೌಹಾರ್ದತೆಗೆ ಅಧ್ಯಾತ್ಮ ಹಾಗೂ ಶರಣರ ತತ್ವಾದರ್ಶಗಳು ಅಗತ್ಯವಾಗಿವೆ. ಬದುಕಿನ ಯಶಸ್ಸಿಗೆ ಪೂರಕವಾದ ಚಿಂತನೆಗಳನ್ನು ಮಾಡಬೇಕು ಎಂದರು.
ಆಶೀರ್ವಚನ ನೀಡಿದ ಹಾರನಹಳ್ಳಿ ಚೌಕಿಮಠದ ಶ್ರೀ ನೀಲಕಂಠ ಸ್ವಾಮೀಜಿ, ಸಮಾಜ ಬದಲಾದಂತೆ ಮನುಷ್ಯ ತಂತ್ರಜ್ಞಾನದ ಮೂಲಕ ತಾನೂ ಬದಲಾಗುತ್ತಿದ್ದಾನೆ. ಅದೇ ತಂತ್ರಜ್ಞಾನಗಳು ಆತನ ಬದುಕನ್ನು ವಿನಾಶಕ್ಕೆ ಕೊಂಡೊಯ್ಯಲು ಪ್ರೇರಣೆಯಾಗುತ್ತಿವೆ. ನಮ್ಮ ಪಂಚೇಂದ್ರಿಯಗಳನ್ನು ಹತೋಟಿಯಲ್ಲಿಟ್ಟುಕೊಂಡಾಗ ಜೀವನದ ಸಾರ್ಥಕತೆ ಕಂಡುಕೊಳ್ಳಲು ಸಹಾಯಕವಾಗುತ್ತದೆ ಎಂದು ಹೇಳಿದರು.
ಮಳೆಗಾಗಿ ದೇವರನ್ನು ಪ್ರಾರ್ಥಿಸುತ್ತಿದ್ದ ನಾವು ಬದಲಾದ ಕಾಲಘಟ್ಟದಲ್ಲಿ ಇಂದು ಮಳೆ ನಿಲ್ಲುವಂತೆ ದೇವರನ್ನು ಮೊರೆ ಹೋಗುವಂತಹ ಪರಿಸ್ಥಿತಿ ಬಂದಿದೆ. ಮನುಷ್ಯ ಪ್ರಕೃತಿ ಮೇಲೆ ತೋರುತ್ತಿರುವ ವಿಕೃತಿಯಿಂದಾಗಿ ಇಂತಹ ಪರಿಸ್ಥಿತಿ ಬಂದೊದಗಿದೆ. ರಾಗ, ದ್ವೇಷಗಳನ್ನು ಮರೆತು ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಸತ್ಕಾರ್ಯಗಳನ್ನು ಮಾಡಿದಾಗ ದೈವತ್ವ ಪಡೆಯಲು ಸಾಧ್ಯ ಎಂದರು.
ಗುತ್ತಲದ ಶ್ರೀ ಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಬಿ.ಕೆ. ಚೇತನಕ್ಕ ಮಾತನಾಡಿದರು. ಮಹಾಂತೇಶ ಕಳ್ಳಿಕೊನಿ ಉಪನ್ಯಾಸ ನೀಡಿದರು.