ಅರ್ಥ ವ್ಯವಸ್ಥೆಯಲ್ಲಿ ಭಾರತ ಅಮೋಘ ಸಾಧನೆ

khuba samvad
Published on

ಬೀದರ್: ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವ ಮತ್ತು ಸೂಕ್ತ ನಿರ್ಣಯದಿಂದಾಗಿ ಒಂಬತ್ತು ವರ್ಷಗಳಲ್ಲಿ ವಿಶ್ವದ ಅರ್ಥ ವ್ಯವಸ್ಥೆಯಲ್ಲಿ 10ನೇ ಸ್ಥಾನದಲ್ಲಿದ್ದ ಭಾರತ ಇದೀಗ 5ಕ್ಕೆ ತಲುಪಿದೆ. ಕೆಲ ವರ್ಷಗಳಲ್ಲೇ 3ನೇ ಸ್ಥಾನಕ್ಕೆ ಬರಲಿದೆ ಎಂದು ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು.
ಜಿಲ್ಲಾ ಬಿಜೆಪಿ ನಗರದಲ್ಲಿ ಆಯೋಜಿಸಿದ್ದ ಭಾರತದ ಅರ್ಥ ವ್ಯವಸ್ಥೆ ಕುರಿತ ಸಂವಾದದಲ್ಲಿ ಮಾತನಾಡಿ, ಮೋದಿ ಆಡಳಿತದಲ್ಲಿ ದೇಶದ ಅರ್ಥ ವ್ಯವಸ್ಥೆಯಲ್ಲಿ ಅಮೋಘ ಸಾಧನೆಯಾಗಿದೆ. ಕರೊನಾ ನಂತರ ಜಗತ್ತಿನಲ್ಲಿ ಹೆಚ್ಚು ಶೇ.7.2 ಜಿಡಿಪಿ ಹೊಂದಿರುವ ಏಕೈಕ ರಾಷ್ಟ್ರ ಭಾರತ. ಇತರ ದೇಶಗಳು ಶೇ.4ಕ್ಕಿಂತ ಕಮ್ಮಿ ಜಿಡಿಪಿ ಹೊಂದಿವೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿ (ಐಎಂಎಫ್) ಸಂಸ್ಥೆ ಹೇಳಿದೆ ಎಂದರು.
2014ಕ್ಕಿಂತ ಮುನ್ನ 2.80 ಲಕ್ಷ ಕೋಟಿ ರೂ. ಇದ್ದ ರಫ್ತು ವಹಿವಾಟು ಪ್ರಸ್ತುತ 4.60 ಲಕ್ಷ ಕೋಟಿ ರೂ.ಗೆ ಏರಿದೆ. ಸ್ಟೀಲ್ ಉತ್ಪಾದನೆಯಲ್ಲಿ ಹೆಚ್ಚಳ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಹಿಂದಿನ ಸರ್ಕಾರಕ್ಕಿಂತ 4 ಪಟ್ಟು ಹೆಚ್ಚು ರಫ್ತು ಮಾಡುತ್ತಿರುವುದು ನಮ್ಮ ಸರ್ಕಾರದ ಸಾಧನೆ ಎಂದು ಹೆಮ್ಮೆ ವ್ಯಕ್ತಪಡಿಸಿದರು
ಮೋದಿ ಅವರ ವಿದೇಶಿ ಭೇಟಿಯಿಂದಾಗಿ ಭಾರತದಲ್ಲಿ ಹೂಡಿಕೆ ಮಾಡಲು 250ಕ್ಕೂ ಹೆಚ್ಚು ಕಂಪನಿಗಳು ಉತ್ಸುಕವಾಗಿವೆ. ಈಗಾಗಲೇ 500ಕ್ಕೂ ಹೆಚ್ಚು ಕಂಪನಿಗಳು ಹೂಡಿಕೆ ಮಾಡುತ್ತಿದ್ದು, ಕೆಲ ವರ್ಷಗಳಲ್ಲಿ ಚೀನಾವನ್ನು ಹಿಂದೆ ಹಾಕಿ ಆರ್ಥಿಕ ವ್ಯವಸ್ಥೆಯಲ್ಲಿ ಅಮೆರಿಕಕ್ಕೆ ಸರಿಸಾಟಿಯಾಗಿ ನಿಲ್ಲುವಂಥ ಸಾಮಥ್ರ್ಯ ಭಾರತ ಹೊಂದಿದೆ ಎಂದರು.
ಭಾರತದ ಒಟ್ಟು ಅರ್ಥ ವ್ಯವಸ್ಥೆ 2014ಕ್ಕಿಂತ ಮುನ್ನ 2.2 ಟ್ರಿಲಿಯನ್ ಡಾಲರ್ ಇದ್ದರೆ, ನಂತರ 3.3 ಟ್ರಿಲಿಯನ್ ಡಾಲರ್ಗೆ ಹೆಚ್ಚಿದೆ. ಇದನ್ನು 5 ಟ್ರಿಲಿಯನ್ ಡಾಲರ್ಗೆ ಹೆಚ್ಚಿಸುವ ಮೋದಿ ಕನಸು ಬರುವ ವರ್ಷಗಳಲ್ಲಿ ನನಸಾಗಲಿದೆ. 2040ರಲ್ಲಿ ವಿಶ್ವದ ಅತ್ಯಂತ ಬಲಿಷ್ಠ ಅರ್ಥ ವ್ಯವಸ್ಥೆ ಹೊಂದಿರುವ ಕೀರ್ತಿ ಭಾರತದಾಗಲಿದೆ ಎಂದು ತಿಳಿಸಿದರು.
ವಸುದೈವ ಕುಟುಂಬಕಂ ತತ್ವದಲ್ಲಿ ನರೇಂದ್ರ ಮೋದಿ ಸರ್ಕಾರ ನಡೆಯುತ್ತಿದೆ. ಮಹಾಮಾರಿ ಕರೊನಾಗೆ ಲಸಿಕೆ ಕಂಡುಹಿಡಿದು 240 ಕೋಟಿ ವ್ಯಾಕ್ಸಿನ್ ಭಾರತದ ಜನತೆಗೆ ಉಚಿತ ನೀಡುವ ಜತೆಗೆ 100ಕ್ಕೂ ಹೆಚ್ಚು ದೇಶಗಳಿಗೂ ಲಸಿಕೆ ವಿತರಿಸಿ ವಿಶ್ವದ ಆರೋಗ್ಯ ಕಾಪಾಡಲಾಗಿದೆ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವಾನಂದ ಮಂಠಾಳಕರ್, ಬಿಡಿಎ ಮಾಜಿ ಅಧ್ಯಕ್ಷ ಬಾಬು ವಾಲಿ, ಬೀದರ್ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಅಧ್ಯಕ್ಷ ಬಿ.ಜಿ. ಶೆಟಕಾರ, ಪ್ರಮುಖರಾದ ಎನ್.ಆರ್. ವರ್ಮಾ, ಸೋಮನಾಥ ಪಾಟೀಲ್ ಗಾದಗಿ, ಸುರೇಶ ಮಾಶೆಟ್ಟಿ, ಶಶಿ ಹೊಸಳ್ಳಿ ಇತರರಿದ್ದರು.

ಮೂರು ಹೊಸ ವಿಮಾನ ನಿಲ್ದಾಣ
ದೇಶದಲ್ಲಿ 74 ಹೊಸ ವಿಮಾನ ನಿಲ್ದಾಣ ನಿರ್ಮಿಸಿದ್ದು, ಅದರಲ್ಲಿ ಬೀದರ್ ಸಹ ಒಂದು. ಕೆಲ ದಿನಗಳಲ್ಲಿ ಕರ್ನಾಟಕದಲ್ಲಿ ಮೂರು ಹೊಸ ವಿಮಾನ ನಿಲ್ದಾಣ ಸೇರ್ಪಡೆಗೊಳ್ಳಲಿವೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದರು. ಮುದ್ರಾ ಯೋಜನೆಯಡಿ ದೇಶದ 40 ಕೋಟಿ ಜನರಿಗೆ ಸಾಲ ವಿತರಿಸಿದ್ದು, ಅದರಲ್ಲಿ 27 ಕೋಟಿ ಮಹಿಳೆಯರು ಸೇರಿದ್ದಾರೆ. 4 ಕೋಟಿ ಮನೆ ಹಂಚಿಕೆ, 9 ಕೋಟಿ ಗ್ಯಾಸ್ ಸಂಪರ್ಕ, 12 ಕೋಟಿಗೂ ಹೆಚ್ಚು ಶೌಚಗೃಹ, 74,850 ಕಿಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ, 4 ಲಕ್ಷ ಕಿಮೀ ಪಿಎಂಜಿಎಸ್ವೈ ರಸ್ತೆ ನಿಮರ್ಾಣ ಮಾಡಲಾಗಿದೆ. ಬರುವ ವರ್ಷಗಳಲ್ಲಿ 400ಕ್ಕೂ ಹೆಚ್ಚು ವಂದೇ ಭಾರತ ರೈಲುಗಳ ಸಂಚಾರ ಆರಂಭವಾಗಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net