

ಹಾಸನ: ದಸರಾ ಅಂಬಾರಿ ಆನೆ ಕ್ಯಾಪ್ಟನ್ ಅರ್ಜುನನ ಸಮಾಧಿ ವಿರೂಪ ಆರೋಪ ಹಾಗೂ ಹಣ ವಸೂಲಿ ಆರೋಪದಡಿ ಮೈಸೂರು ಜಿಲ್ಲೆ ಎಚ್.ಡಿ.ಕೋಟೆಯ ನವೀನ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಅತಿಕ್ರಮ ಪ್ರವೇಶ ಹಾಗೂ ಸಮಾಧಿ ಬಗೆದ ಆರೋಪದಡಿ ಸಕಲೇಶಪುರ ತಾಲೂಕಿ ಯಸಳೂರು ವಲಯ ಅರಣ್ಯಾಧಿಕಾರಿ ಎಫ್‌ಐಆರ್ ದಾಖಲು ಮಾಡಿದ್ದಾರೆ. ತಾವು ದರ್ಶನ್ ಅಭಿಮಾನಿ ಎಂದು ಹೇಳಿಕೊಂಡು ಸ್ಮಾರಕ ನಿರ್ಮಾಣಕ್ಕೆ ನವೀನ್ ಮತ್ತು ಇತರರು ಮುಂದಾಗಿದ್ದರು.
ಅಲ್ಲದೆ ಮೀಸಲು ಅರಣ್ಯದೊಳಗೆ ಅತಿಕ್ರಮ ಪ್ರವೇಶ ಮಾಡಿ ಸಮಾಧಿ ಮಣ್ಣು ಬಗೆದಿದ್ದರು. ಸ್ಮಾರಕ ನಿರ್ಮಾಣಕ್ಕೆ ದರ್ಶನ್ ಕಲ್ಲು ಕಳಿಸಿದ್ದಾರೆಂದು ಹೇಳಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.
ಸರ್ಕಾರ, ಅರಣ್ಯ ಇಲಾಖೆ ಅನುಮತಿ ಇಲ್ಲದೆ ಸ್ಮಾರಕ ನಿರ್ಮಾಣಕ್ಕೆ ಪ್ರಯತ್ನ ಮಾಡಿದ್ದಕ್ಕೆ ಆಕ್ಷೇಪ ವ್ಯಕ್ತವಾಗಿತ್ತು.ಸ್ಮಾರಕ ಹೆಸರಿನಲ್ಲಿ ಅನಧಿಕೃತವಾಗಿ ಜನರಿಂದ ಹಣ ಸುಲಿಗೆ ಮಾಡಿ ಸಮಾಧಿ ಬಗೆದು ವಿರೂಪಗೊಳಿಸಿದ್ದಾರೆ ಎಂದು ಸಂಘಟನೆ ಮುಖಂಡರು ಸೇರಿ ಅನೇಕರು ಆರೋಪಿಸಿ, ಕ್ರಮಕ್ಕೆ ಆಗ್ರಹಿಸಿದ್ದರು.
ಇಷ್ಟೆಲ್ಲಾ ಆದ ಬಳಿ ಅರಣ್ಯ ಇಲಾಖೆ, ಕರ್ನಾಟಕ ಅರಣ್ಯ ಕಾಯಿದೆ 1963 ಸೆಕ್ಷೆನ್ 33 ಹಾಗೂ ಕರ್ನಾಟಕ ಅರಣ್ಯ ನಿಯಮ 1969 ರ ನಿಯಮ 25-43 ರಡಿ ಕೇಸ್ ದಾಖಲು ಮಾಡಿ ತನಿಖೆ ಕೈಗೊಂಡಿದೆ.