

ಹಾಸನ: ಕಾಡಾನೆಗಳ ಕಾರ್ಯಾಚರಣೆ ಸಂದರ್ಭದಲ್ಲಿ ಕ್ಯಾಪ್ಟನ್ ಅರ್ಜುನ ಸಾವನ್ನಪ್ಪಿದ ಸ್ಥಳದಲ್ಲಿ ಸ್ಮಾರಕ ನಿರ್ಮಾಣಕ್ಕೆ ಸರ್ಕಾರದ ಒಪ್ಪಿಗೆ ಮೇರೆಗೆ ಇದೀಗ ಅರಣ್ಯ ಇಲಾಖೆ ಸುಮಾರು 50ಲಕ್ಷ ವೆಚ್ಚದಲ್ಲಿ ಸ್ಮಾರಕ ನಿರ್ಮಾಣ ಮಾಡಲು ಮುಂದಾಗಿದೆ.
ಕಳೆದ ಡಿಸೆಂಬರ್ 4ರಂದು ಸಕಲೇಶಪುರದ ಯಸಳೂರು ವಲಯದಲ್ಲಿ ಕಾಡಾನೆ ಕಾರ್ಯಾಚರಣೆ ಸಂದರ್ಭದಲ್ಲಿ ಅರ್ಜುನ ಆನೆ ಮೃತಪಟ್ಟಿತ್ತು. ಈ ಸಂಬಂಧ ಮೃತಪಟ್ಟ ಸ್ಥಳದಲ್ಲಿ ಸ್ಮಾರಕ ನಿರ್ಮಾಣ ಸಂಬಂಧ ಸಾಕಷ್ಟು ಒತ್ತಾಯಗಳು ಕೇಳಿಬಂದಿದ್ದವು. ಅಲ್ಲದೆ ವಾದ-ಪ್ರತಿವಾದವುಗಳು ಕೂಡ ನಡೆಯತೊಡಗಿದ್ದವು. ಆದರೆ ಈಗ ಅರಣ್ಯ ಇಲಾಖೆ ಎಲ್ಲದಕ್ಕೂ ವಿರಾಮ ಬಿಟ್ಟು, ಮೃತಪಟ್ಟ ಸ್ಥಳದಲ್ಲೇ ಸ್ಮಾರಕ ನಿರ್ಮಾಣ ಮಾಡಲು ಮುಂದಾಗಿದೆ.
ಈಗಾಗಲೇ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಜುಲೈನಲ್ಲಿ ಶಂಕುಸ್ಥಾಪನೆ ನೆರವೇರಿಸುವುದಾಗಿ ವಿಧಾನಸೌಧದಲ್ಲಿ ಕಳದ ತಿಂಗಳುತಿಳಿಸಿದ್ದರು. ಈ ಸಂಬಂಧ ಅರಣ್ಯ ಇಲಾಖೆ ಕಾಮಗಾರಿಗೆ ಅಂದಾಜು ವೆಚ್ಚ ಮತ್ತು ಅದರ ಯೋಜನೆ ಮತ್ತು ವಿನ್ಯಾಸವನ್ನು ತಯಾರಿಸಿ ಅರಣ್ಯ ಇಲಾಖೆಗೆ ಕಲಿಸಿಕೊಡಲಾಗಿದೆ. ಕಾಮಗಾರಿಗೆ ಒಪ್ಪಿಗೆ ಸಿಕ್ಕಿದ್ದು, ಹಣಕಾಸು ಸಚಿವಾಲಯದಿಂದ ಅನುಮೋದನೆ ಮಾತ್ರ ಬಾಕಿ ಉಳಿದಿದೆ. ಅಲ್ಲಿಂದ ಒಪ್ಪಿಗೆ ಸಿಕ್ಕ ತಕ್ಷಣ ಕಾಮಗಾರಿಯನ್ನು ಆರಂಭಿಸಲಿದ್ದಾರೆ.
ಜು.6ರಂದು ಈಶ್ವರ್ ಖಂಡ್ರೆ ಅವರು ಸಕಲೇಶಪುರಕ್ಕೆ ಆಗಮಿಸಿ ಅರ್ಜುನ ಆನೆ ಮೃತಪಟ್ಟ ಸ್ಥಳದಲ್ಲಿ ಸ್ಮಾರಕ ನಿರ್ಮಾಣಕ್ಕೆ ಸಂಬಂಧಪಟ್ಟ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕಾಡಾನೆ ಸಮಸ್ಯೆಗಳ ಬಗ್ಗೆಯೂ ಕೂಡ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಹಾಸನ ಉಪ ಅರಣ್ಯ ಸಂರಕ್ಷಣಾಧಿಕಾರಿಯವರಿಂದ ಸುಮಾರು ಐವತ್ತು ಲಕ್ಷ ವೆಚ್ಚದಲ್ಲಿ ಸ್ಮಾರಕ ನಿರ್ಮಾಣ, ಅದರಲ್ಲಿ ಅರ್ಜುನ ಆನೆಯ ಬಗ್ಗೆ ಮಾಹಿತಿ ಮತ್ತು ಸ್ಮಾರಕದ ಮೇಲೆ ಅರ್ಜುನನ ರೀತಿ ಕೆತ್ತನೆ ಮಾಡುವ ಸಂಬಂಧ ವಿನ್ಯಾಸವನ್ನು ತಯಾರಿಸಿ ಸರ್ಕಾರಕ್ಕೆ ಕಲಿಸಲಾಗಿದೆ. ಈಗಾಗಲೇ ಇದಕ್ಕೆ ಸರ್ಕಾರದಿಂದ ಅನುಮತಿ ಸಿಕ್ಕಿದ್ದು, ಸಚಿವರು ಕಾಮಗಾರಿಗೆ ಚಾಲನೆ ನೀಡಿದ ನಂತರ ಶೀಘ್ರದಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಿದ್ದಾರೆ.
ಸ್ಮಾರಕಗಳಲ್ಲಿ ಅರ್ಜುನ ಪ್ರತಿಕೃತಿಯನ್ನು ನಿರ್ಮಿಸಿ ಪ್ರಷ್ಠಾಪಿಸಲಾಗುವುದು ಜೊತೆಗೆ ಚಿನ್ನದ ಅಂಬಾರಿ ಹೊತ್ತ ಅರ್ಜುನನ ಚಿತ್ರಗಳು, ಅರ್ಜುನ ವಿವಿಧ ಆನೆ ಕಾರ್ಯಾಚರಣೆ, ಹುಲಿ ಮತ್ತು ಚಿರತೆ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಚಿತ್ರಗಳನ್ನು ಹಾಕುವ ಮೂಲಕ ಜನರ ಮನದಲ್ಲಿ ಅರ್ಜುನನ ಸಾಹಸ, ಸೇವೆ, ಕೊಡುಗೆ ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡಲಾಗುವುದು. ಅಲ್ಲದೇ ಸ್ಮಾರಕ ನಿರ್ಮಾಣ ಕಾಮಗಾರಿಯನ್ನು 6 ತಿಂಗಳ ಒಳಗಾಗಿ ಅಂದರೆ ಬರುವ ಡಿಸೆಂಬರ್ 4ರೊಳಗೆ ಅಂದರೆ ಅರ್ಜುನನ ಪ್ರಥಮ ಪುಣ್ಯತಿಥಿಯ ದಿನದೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಸಚಿವರು ಭರವಸೆ ನೀಡಿದ್ದಾರೆ
ಅರ್ಜುನ ಆನೆಗೆ ಮಾರಕ ನಿರ್ಮಾಣ ಮಾಡಿಲ್ಲ ಎಂದು ದರ್ಶನ್ ಅಭಿಮಾನಿ ಸಂಘದಿಂದ ಸ್ಮಾರಕ ನಿರ್ಮಾಣ ಮಾಡಲು ಮುಂದಾಗಿದ್ದರು. ಆನಂತರ, ಅರಣ್ಯ ಇಲಾಖೆ ಅದಕ್ಕೆ ಅವಕಾಶ ನೀಡದೆ. ತಾತ್ಕಾಲಿಕವಾಗಿ ಮಳೆಯಿಂದ ಸಮಾಧಿಗೆ ಯಾವುದೇ ರೀತಿ ಹಾನಿಯಾಗದಂತೆ ಕ್ರಮ ಕೈಗೊಂಡಿತ್ತು.
ಈ ಸ್ಮಾರಕ ನಿರ್ಮಾಣ ಸಂಬಂಧ ಲಕ್ಷಾಂತರ ರೂಪಾಯಿಯನ್ನು ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿರುವ ಬಗ್ಗೆಯೂ ಕೂಡ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರತೊಡಗಿತ್ತು. ಅರಣ್ಯದೊಳಗೆ ಯಾರಿಗೂ ಪ್ರವೇಶವಿಲ್ಲ ಮತ್ತು ಸ್ಮಾರಕವನ್ನ ಅರಣ್ಯ ಇಲಾಖೆಯಿಂದಲೇ ನಿರ್ಮಿಸುವುದಾಗಿ ತಿಳಿಸಿತ್ತು. ಅಲ್ಲದೆ, ದರ್ಶನ್ ಅಭಿಮಾನಿಗಳು ಎಂದು ಹೇಳಿಕೊಂಡು ಸ್ಮಾರಕಕ್ಕೆ ಕಲ್ಲು ತಂದಂತಹ ವ್ಯಕ್ತಿಗಳ ಅಕ್ರಮವಾಗಿ ಅರಣ್ಯ ಪ್ರವೇಶ ಮಾಡಿದ್ದರಿಂದ ಅವರ ಮೇಲೆ ಈಗಾಗಲೇ ಪ್ರಕರಣ ದಾಖಲಿಸಲಾಗಿದೆ.
ಜು.6 ಸಚಿವರಿಂದ ಶಂಕುಸ್ಥಾಪನೆ:
ಅರ್ಜುನ ಆನೆಗೆ ಸ್ಮಾರಕ ನಿರ್ಮಾಣ ಸಂಬಂಧ ಸಾಕಷ್ಟು ಒತ್ತಡಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಜು.6ರಂದು ಸಚಿವ ಈಶ್ವರ್ ಖಂಡ್ರೆ ಅವರು ಶಂಕುಸ್ಥಾಪನೆ ನೆರವೇರಿಸಲು ಆಗಮಿಸುತ್ತಿದ್ದು, ಇದಕ್ಕಾಗಿ ಅರಣ್ಯ ಇಲಾಖೆ ಸಕಲ ಸಿದ್ಧತೆಗಳನ್ನ ಕೈಗೊಂಡಿದೆ.
ಈ ಹಿಂದೆಯೇ ಸಚಿವರು ಅರ್ಜುನ ಆನೆ ಮೃತಪಟ್ಟ ಸ್ಥಳದಲ್ಲೇ ಸ್ಮಾರಕ ಮಾಡುವ ಸಂಬಂಧ ಭರವಸೆ ನೀಡಿದ್ದರು. ಅದರಂತೆ ಇದೀಗ ಅರಣ್ಯ ಇಲಾಖೆ ಒಪ್ಪಿಗೆ ಸೂಚಿಸಿತು. ಸಚಿವರು ಶನಿವಾರ ಸಕಲೇಶಪುರದ ಯಸಳೂರು ವಲಯದ ಅರಣ್ಯ ಪ್ರದೇಶದಲ್ಲಿ ಸ್ಮಾರಕ ನಿರ್ಮಾಣಕ್ಕೆ ಸಂಬಂಧಪಟ್ಟ ಭೂಮಿ ಪೂಜೆ ನೆರವೇರಿಸಲಿದ್ದಾರೆ.
50 ಲಕ್ಷದಲ್ಲಿ ಸ್ಮಾರಕ
ವಿಶ್ವವಿಖ್ಯಾತ ದಸರಾ ಅಂಬಾರಿಯನ್ನ ಎಂಟು ಬಾರಿ ಹೊತ್ತು ಮೆರೆಸಿದ್ದ ಅರ್ಜುನ ಆನೆಯ ಸ್ಮಾರಕವನ್ನ ಯಸಳೂರು ವಲಯದಲ್ಲಿ ಸುಮಾರು 50ಲಕ್ಷ ವೆಚ್ಚದಲ್ಲಿ ನಿರ್ಮಿಸಲು ಅರಣ್ಯ ಇಲಾಖೆ ಅಂದಾಜು ಪಟ್ಟಿಯನ್ನ ಸರ್ಕಾರಕ್ಕೆ ಕಳಿಸಿದ್ದು, ಈಗಾಗಲೇ ಹಣಕಾಸು ಸಚಿವಾಲಯದಲ್ಲಿ ಕಡತವಿದ್ದು ಅದಕ್ಕೆ ಶೀಘ್ರದಲ್ಲೇ ಅನುಮೋದನೆ ಸಿಗುವ ವಿಶ್ವಾಸವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಸಚಿವರು ಕೂಡ ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
8 ಬಾರಿ ಅಂಬಾರಿ ಹೊತ್ತಿದ್ದ ಅರ್ಜುನ ಆನೆ ಕಳೆದ ಡಿಸೆಂಬರ್ 4ರಂದು ಆನೆ ಸೆರೆ ಕಾರ್ಯಾಚರಣೆ ವೇಳೆ ವೀರಾವೇಶದಿಂದ ಹೋರಾಡಿ ಮೃತಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಆನೆಯ ನೆನಪಿಗಾಗಿ ಯಸಳೂರು ಬಳಿ ಸಮಾಧಿ ಸ್ಥಳದಲ್ಲಿ ಮತ್ತು ಅರ್ಜುನನ ಆವಾಸಸ್ಥಾನವಾಗಿದ್ದ, ನಾಗರಹೊಳೆಯ ಬಳ್ಳೆ ಆನೆ ಶಿಬಿರದಲ್ಲಿ ಸ್ಮಾರಕ ನಿರ್ಮಾಣ ಮಾಡಲಾಗುವುದು
-ಸಚಿವ ಈಶ್ವರ್ ಖಂಡ್ರೆ
ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಅವರು ಜುಲೈ 6ರಂದು ಬರುವ ಸಾಧ್ಯತೆಗಳು ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಯಸಳೂರು ವಲಯದಲ್ಲಿ ಅರ್ಜುನ ಆನೆ ಸ್ಮಾರಕ ನಿರ್ಮಾಣ ಸಂಬಂಧ ಶಂಕುಸ್ಥಾಪನೆಯನ್ನ ನೆರವೇರಿಸಲಿದ್ದಾರೆ. ಈಗಾಗಲೇ ಅಂದಾಜು ಪಟ್ಟಿಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ.
-ಸೌರಬ್ ಕುಮಾರ್ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಸನ