ಅರ್ಜಿಗಳ ವಿಲೇ ನಿರ್ಲಕ್ಷ್ಯ ಬೇಡ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಆರ್.ಲತಾ ಸೂಚನೆ

07 BPL 2 DC VISIT
Published on

ಬಾಗೇಪಲ್ಲಿ: ತಾಲೂಕು ಕಚೇರಿಯ ಸಿಬ್ಬಂದಿ ಯಾವುದೇ ಕಾರಣಕ್ಕೂ ರೈತರ, ಬಡವರ ಅರ್ಜಿಗಳ ವಿಲೇವಾರಿ ಮಾಡುವಲ್ಲಿ ನಿರ್ಲಕ್ಷ್ಯ ತೊರಬಾರದು. ಒಂದು ವೇಳೆ ತೊರಿದರೆ ಕಠಿಣ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ಎಚ್ಚರಿಕೆ ನೀಡಿದರು.

ತಾಲೂಕು ಕಚೇರಿಯ ವಿವಿಧ ವಿಭಾಗಗಳಿಗೆ ಮಂಗಳವಾರ ಭೇಟಿ ನೀಡಿ ದಾಖಲೆಗಳನ್ನು ಪರಿಶೀಲಿಸಿ, ಭೂಪಾನ ಇಲಾಖೆಯಲ್ಲಿ 45 ಅರ್ಜಿಗಳು ವಿಲೇಯಾಗಿಲ್ಲ ಏಕೆ ಎಂದು ಸಿಬ್ಬಂದಿಗೆ ಕೇಳಿದಾಗ ಸಿಬ್ಬಂದಿ ಉತ್ತರ ತಡಾಬಡಾಯಿಸುತ್ತಿದ್ದಂತೆ ನಿಮಗೆ 30 ನಿಮಿಷ ಸಮಯ ಕೊಡುತ್ತೇನೆ ಸ್ವಷ್ಟ ಮಾಹಿತಿ ನೀಡಿ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿಗಳು ಚುನಾವಣೆ, ಮುಜುರಾಯಿ, ಆಹಾರ, ಸಹಕಾರ, ಭೂ ದಾಖಲೆಗಳ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಎಲ್ಲ ವಿಷಯಗಳಿಗೂ ತಹಸೀಲ್ದಾರ್ ಹೊಣೆ ಮಾಡದೆ ನಿಮ್ಮ ಕೆಲಸಗಳನ್ನು ಜವಾಬ್ದಾರಿಯುತವಾಗಿ ಮಾಡಬೇಕು. ಅರ್ಜಿಗಳನ್ನು ವಿಲೇ ಮಾಡಲು ಸಮಸ್ಯೆ ಬಂದರೆ ಸೂಪರ್‌ವೈಸರ್ ಮೂಲಕ ಪರಿಹಾರ ಮಾಡಿಕೊಳ್ಳಿ. ಒಂದು ವೇಳೆ ಸೂಪರ್‌ವೈಸರ್ ಅವರಿಗೆ ಆಗಲಿಲ್ಲ ಎಂದಾದರೆ ತಹಸೀಲ್ದಾರ್ ಗಮನಕ್ಕೆ ತಂದು ಪರಿಹಾರ ಮಾಡಿಕೊಳ್ಳಿ. ಅನಗ್ಯವಾಗಿ ಫಲಾಭವಿಗಳನ್ನು ಕಚೇರಿಗೆ ಸುತ್ತಾಡಿಸಬೇಡಿ. ರೈತರು ಮತ್ತು ಬಡವರು ವಿವಿಧ ಕೆಲಸಗಳ ನಿಮಿತ್ತ ಫಲಾನುಭವಿಗಳು ದೂರದ ಹಳ್ಳಿಗಳಿಂದ ಹಣ, ಸಮಯ ವ್ಯರ್ಥ ಮಾಡಿಕೊಂಡು ಕಚೇರಿಗೆ ಬರುತ್ತಾರೆ. ಇಂತಹ ಘಟನೆಗಳು ಕಂಡುಬಂದರೆ ಸಹಿಸಲು ಸಾದ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.

ತಹಸೀಲ್ದಾರ್ ವೈ.ರವಿ, ಗ್ರೇಡ್-2 ತಹಸೀಲ್ದಾರ್ ವಿ.ಸುಬ್ರಮಣಿ, ಉಪ ತಹಸೀಲ್ದಾರ್ ನಾಗರಾಜ್ ಇದ್ದರು.

ಸಾರ್ವಜನಿಕರಿಂದ ಅರ್ಜಿ ಸ್ವೀಕಾರ:

ತಾಲೂಕಿನ ಗೂಳೂರು ಗ್ರಾಮದ ಚಿನ್ನಾದೆಮ್ಮ ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿ, ಗೂಳೂರು ಗ್ರಾಮದ ಸರ್ವೇ ನಂ.380 ನಮ್ಮ ಜಮೀನನ್ನು ರಾಜಕೀಯ ಪ್ರಭಾವಿಗಳು ನಕಲಿ ಪ್ರಮಾಣ ಪತ್ರ ಸೃಷ್ಟಿಸಿ ಅತಿಕ್ರಮಣ ಮಾಡಿಕೊಂಡಿದ್ದಾರೆ. ನಮಗೆ ಅನ್ಯಾಯವಾಗಿದೆ. ತಾವು ಪರಿಶೀಲಿಸಿ ಖಾತೆ ಮಾಡಿಸಿಕೊಡಬೇಕು ಎಂದು ಮನವಿ ಮಾಡಿದರು. ಮಿಟ್ಟೇಮರಿ ಹೋಬಳಿಯಲ್ಲಿ ಮಿಟ್ಟೇಮರಿ, ಪೋಲನಾಯಕನಹಳ್ಳಿ, ಜೂಲಪಾಳ್ಯ, ಕಾನಗಮಾಕಲಪಲ್ಲಿ, ನಡಂಪಲ್ಲಿ ಕಂದಾಯ ವೃತ್ತಗಳಿದ್ದು, ಈ ವೃತ್ತಗಳಲ್ಲಿ ಇಬ್ಬರು ಗ್ರಾಮಲೇಕ್ಕಾಧಿಕಾರಿ ಕರ್ತವ್ಯ ನಿರ್ವಹಿಸಬೇಕಾಗಿದೆ. ಇಲ್ಲಿನ ರಾಜಸ್ವ ನಿರೀಕ್ಷರು ಸಾರ್ವಜನಿಕರ ಸಂಪರ್ಕಕ್ಕೆ ಸಿಗುವುದಿಲ್ಲ ಈ ಬಗ್ಗೆ ಗಮನ ಹರಿಸಿ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಲಿಖಿತ ಮನವಿ ಸಲ್ಲಿಸಿದರು.ಬಾಗೇಪಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶೇಷಾದ್ರಿ ಅವರು ವಾರದಲ್ಲಿ ಒಂದು ದಿನ ಮಾತ್ರ ಕಚೇರಿಗೆ ಬರುತ್ತಾರೆ. ವ್ಯವಸ್ಥಾಪಕರು ಯಾವಾಗಲು ಕಚೇರಿಯ ಬಾಗಿಲು ಮುಚ್ಚಿರುತ್ತಾರೆ. ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಮೂಲ ಸೌಲಭ್ಯಗಳು ಸಿಗುತ್ತಿಲ್ಲ ಎಂದು ತಾಲೂಕು ದಲಿತ ಸಂಘರ್ಷ ಸಮಿತಿ ಸಂಚಾಲಕ ಪೈಪಾಳ್ಯ ರವಿ ದೂರು ನೀಡಿದರು. ಬಿಜೆಪಿ ಜಿಲ್ಲಾ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ವೈ.ಎಸ್.ಲೋಕೇಶ್ ಕುಮಾರ್ ಅವರು ರಾಜಕಾಲುವೆ ಒತ್ತುವರಿ ತೆರೆವುಗೊಳಿಸಬೇಕು ಎಂದು ಮನವಿ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net