ಅರೋಗ್ಯ ನಿರ್ಲಕ್ಷ್ಯ ಕಂಟಕ ನಿಶ್ಚಿತ, ಶಿಬಿರದಲ್ಲಿ ಜಿಪಂ ಸಿಇಒ ಶಿವಶಂಕರ್ ಎಚ್ಚರಿಕೆ

4CBP4
Published on

ಚಿಕ್ಕಬಳ್ಳಾಪುರ: ಆರೋಗ್ಯದ ವಿಚಾರದಲ್ಲಿ ಆರಂಭದಲ್ಲಿ ತೋರುವ ನಿರ್ಲಕ್ಷ್ಯ ಮುಂದಿನ ದಿನಗಳಲ್ಲಿ ಕಂಟಕವನ್ನು ತಂದನ್ನೊಡ್ಡುತ್ತದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಪಿ.ಶಿವಶಂಕರ್ ಎಚ್ಚರಿಸಿದರು.

ನಗರದ ಸರ್ಕಾರಿ ನೌಕರರ ಸಂಘದ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ಕರ್ನಾಟಕ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕ ಮತ್ತು ಬೆಂಗಳೂರಿನ ವೈದೇಹಿ ಆಸ್ಪತ್ರೆ ಶನಿವಾರ ಆಯೋಜಿಸಿದ್ದ ಸರ್ಕಾರಿ ನೌಕರರಿಗೆ ಮತ್ತು ನಿವೃತ್ತ ನೌಕರರಿಗೆ ಆರೋಗ್ಯ ಉಚಿತ ತಪಾಸಣೆ ಹಾಗೂ ಕರೊನಾ ಲಸಿಕಾಕರಣ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿದರು.

ಅನಾರೋಗ್ಯ ಭಾರಿ ಸಂಪತ್ತಿನ ನಷ್ಟದ ಪ್ರತೀಕವಾಗಿದೆ, ಜೀವನದಲ್ಲಿ ಆರೋಗ್ಯವೇ ಮಹಾಭಾಗ್ಯವಾಗಿದ್ದು, ಕಾಪಾಡಿಕೊಳ್ಳಲು ಪ್ರಮುಖ ಆದ್ಯತೆ ನೀಡಬೇಕು. ನಿತ್ಯ ವ್ಯಾಯಾಮ ಮಾಡುವುದರ ಜತೆಗೆ ಪೌಷ್ಟಿಕಾಂಶವುಳ್ಳ ಆಹಾರ ಸೇವಿಸಬೇಕು ಎಂದು ಸಲಹೆ ನೀಡಿದರು.

ಭವ್ಯ ಆಧ್ಯಾತ್ಮಿಕತೆಯ ವಿಚಾರಗಳನ್ನು ಸಾರುವ ಮೂಲಕ ಭಾರತ ಪ್ರಪಂಚಕ್ಕೆ ಮಹತ್ವದ ಕೊಡುಗೆಗಳನ್ನು ನೀಡಿದೆ. ಉತ್ತಮ ಆರೋಗ್ಯ, ನೆಮ್ಮದಿ, ಸುಖ ಸಂತೋಷಕ್ಕೆ ಸಹಕಾರಿಯಾಗಿರುವ ಧ್ಯಾನ, ಯೋಗ ಮತ್ತು ವೈಜ್ಞಾನಿಕ ಸಂಪ್ರದಾಯಗಳನ್ನು ವಿದೇಶಗಳಲ್ಲೂ ಗೌರವಿಸಿ, ಪಾಲಿಸಲಾಗುತ್ತದೆ. ಪ್ರತಿಯೊಬ್ಬರು ದೈಹಿಕ ಕಸರತ್ತಿನ ಜತೆಗೆ ಆಧ್ಯಾತ್ಮಿಕತೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಜೀವನ ಶೈಲಿಯೇ ಕಾರಣ: ತಂತ್ರಜ್ಞಾನ ಮುಂದುವರಿದಂತೆ ಗಂಭೀರ ರೋಗಗಳು ಸಂಖ್ಯೆಯು ಹೆಚ್ಚಾಗುತ್ತಿದೆ. ಕಾಲ ಕಳೆದಂತೆ ಮಾನವನ ಜೀವಿತಾವಧಿಯೂ ಕ್ಷೀಣಿಸುತ್ತಿದ್ದು, ಕಳಪೆ ಗುಣಮಟ್ಟದ ಆಹಾರ ಸೇವನೆ ಮತ್ತು ಬದಲಾದ ಜೀವನ ಶೈಲಿಯೇ ಪ್ರಮುಖ ಕಾರಣ ಎಂದು ಸಿಇಒ ಶಿವಶಂಕರ್ ಅಭಿಪ್ರಾಯಪಟ್ಟರು.

ಕರೊನಾ ಮೊದಲ ಮತ್ತು ಎರಡನೇ ಅಲೆಯ ಸಂದರ್ಭದಲ್ಲಿ ಬಹುತೇಕ ಚಟುವಟಿಕೆ ಸ್ಥಗಿತಗೊಂಡಿದ್ದರೂ ಸರ್ಕಾರಿ ನೌಕರರು ಮತ್ತು ವೈದ್ಯರು ಆತಂಕದ ಪರಿಸ್ಥಿತಿಯಲ್ಲೂ ಉತ್ತಮ ಸೇವೆ ಸಲ್ಲಿಸಿದ್ದಾರೆ ಎಂದು ಶಿವಶಂಕರ್ ಮೆಚ್ಚುಗೆ ವ್ಯಕ್ತಪಡಿಸಿದರು.

ಮಾನಸಿಕ ಮತ್ತು ದೈಹಿಕ ಸದೃಢತೆಯೇ ಉತ್ತಮ ಆರೋಗ್ಯ. ಈ ನಿಟ್ಟಿನಲ್ಲಿ ನಕಾರಾತ್ಮಕ ಯೋಚನೆಗಳನ್ನು ಕೈಬಿಟ್ಟು ಒಳ್ಳೆಯ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು ಹಾಗೂ ಪ್ರಾರಂಭದಲ್ಲಿಯೇ ಅನಾರೋಗ್ಯಕ್ಕೆ ವೈದ್ಯರನ್ನು ಸಂಪರ್ಕಿಸಿ, ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಜಿ.ಹರೀಶ್ ಹೇಳಿದರು.

ಜಿಲ್ಲಾಧಿಕಾರಿ ಆರ್.ಲತಾ ಚಾಲನೆ: ಆರೋಗ್ಯ ತಪಾಸಣಾ ಶಿಬಿರಕ್ಕೆ ಜಿಲ್ಲಾಧಿಕಾರಿ ಆರ್.ಲತಾ ಚಾಲನೆ ನೀಡಿದರು. ವೈದೇಹಿ ಆಸ್ಪತ್ರೆಯ ನುರಿತ ತಜ್ಞ ವೈದ್ಯರು ಉಚಿತ ಕಣ್ಣಿನ ಪರೀಕ್ಷೆ, ರಕ್ತದೊತ್ತಡ, ಮಧುಮೇಹ ಮತ್ತು ಹೃದಯ ಸಂಬಂಧಿ ತಪಾಸಣೆ ನಡೆಸಿದರು. ನೌಕರರ ಮತ್ತು ಕುಟುಂಬದವರಿಗೆ ಕರೊನಾ ಲಸಿಕೆ ಹಾಕಲಾಯಿತು.

ನೌಕರರ ಸಂಘದ ಮಾಜಿ ಜಿಲ್ಲಾಧ್ಯಕ್ಷ ಕೆ.ಸಿ.ರೆಡ್ಡಪ್ಪ, ಶಿಡ್ಲಘಟ್ಟ ತಾಲೂಕು ಅಧ್ಯಕ್ಷ ಸುಬ್ಬಾರೆಡ್ಡಿ, ಎಸ್ಸಿ ಮತ್ತು ಎಸ್ಟಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net