

ಮೈಸೂರು: ತಹಸೀಲ್ದಾರ್, ಉಪ ವಿಭಾಗಾಧಿಕಾರಿ ಹಾಗೂ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿರುವ ಆಸ್ತಿಗೆ ಸಂಬಂಧಿತ ಅರೆ ನ್ಯಾಯಿಕ ಪ್ರಕರಣಗಳನ್ನು ನಾಲ್ಕು ತಿಂಗಳ ಒಳಗೆ ಇತ್ಯರ್ಥಗೊಳಿಸುವಂತೆ ಅಧಿಕಾರಿಗಳಿಗೆ ಗಡುವು ನೀಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.
ಮೈಸೂರು ವಿಭಾಗದಲ್ಲಿ 22,319 ಪ್ರಕರಣಗಳು ವಿವಿಧ ಕೋರ್ಟ್‌ಗಳಲ್ಲಿ ಬಾಕಿ ಇವೆ. ಇದಕ್ಕಾಗಿ ಜನರು ಹಲವು ವರ್ಷಗಳಿಂದ ಅಲೆದಾಡುವಂತಾಗಿದೆ. ಇದರಿಂದ ಜನರಲ್ಲಿ ಸರ್ಕಾರದ ಮೇಲಿನ ವಿಶ್ವಾಸ ದೂರವಾಗಲಿದೆ. ಹಾಗಾಗಿ, ನಿಗದಿತ ಅವಧಿಯಲ್ಲಿ ಪ್ರಕರಣ ಇತ್ಯರ್ಥಪಡಿಸಲು ಸೂಚನೆ ನೀಡಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
6 ತಿಂಗಳಿಂದ ಐದು ವರ್ಷಗಳವರೆಗಿನ ಎಲ್ಲ ತಕರಾರು ಪ್ರಕರಣಗಳನ್ನೂ ತಹಸೀಲ್ದಾರ್, ಎಸಿ ಹಾಗೂ ಡಿಸಿ ನ್ಯಾಯಾಲಯಗಳು ಮೂರರಿಂದ ನಾಲ್ಕು ತಿಂಗಳ ಕಾಲಮಿತಿಯಲ್ಲಿ ಇತ್ಯರ್ಥಪಡಿಸಬೇಕು. ತಹಸೀಲ್ದಾರ್ ವಾರದಲ್ಲಿ ಎರಡು ದಿನ, ಉಪ ವಿಭಾಗಾಧಿಕಾರಿ ವಾರದಲ್ಲಿ ಮೂರು ದಿನ ಕೋರ್ಟ್ ಕಲಾಪ ನಡೆಸಬೇಕು. ಈ ಅವಧಿಯಲ್ಲಿ ಜನಪ್ರತಿನಿಧಿಗಳು ಅಧಿಕಾರಿಗಳನ್ನು ಅನ್ಯ ಕೆಲಸಕ್ಕೆ ಕರೆಯದೆ ಸಹಕಾರ ನೀಡಬೇಕೆಂದು ಕೋರಲಾಗಿದೆ ಎಂದರು.
ಮೈಸೂರು ಪ್ರಾದೇಶಿಕ ವಿಭಾಗ ವ್ಯಾಪ್ತಿಯ ತಹಸೀಲ್ದಾರ್ ನ್ಯಾಯಾಲಯಗಳಲ್ಲಿ 6 ತಿಂಗಳಿಂದ 5 ವರ್ಷಗಳವರೆಗಿನ ಒಟ್ಟು 4,362 ತಕರಾರು ಪ್ರಕರಣ ಈವರೆಗೆ ಇತ್ಯರ್ಥವಾಗದೆ ಬಾಕಿ ಉಳಿದಿವೆ.
ಪ್ರಾದೇಶಿಕ ವಿಭಾಗದ ಉಪ ವಿಭಾಗಾಧಿಕಾರಿ ನ್ಯಾಯಾಲಯಗಳ ಪೈಕಿ ಕೊಳ್ಳೇಗಾಲ 540, ಚಿಕ್ಕಮಗಳೂರು 473, ತರೀಕೆರೆ 952, ಮಂಗಳೂರು 3627, ಪುತ್ತೂರು 243, ಹಾಸನ 678, ಸಕಲೇಶಪುರ 189, ಮಡಿಕೇರಿ 827, ಮಂಡ್ಯ 1456, ಪಾಂಡವಪುರ 1111, ಮೈಸೂರು 1535, ಹುಣಸೂರು 751 ಮತ್ತು ಕುಂದಾಪುರದಲ್ಲಿ 2061 ಪ್ರಕರಣಗಳು ಸೇರಿ ಒಟ್ಟಾರೆ 14,444 ಪ್ರಕರಣಗಳು ಬಾಕಿ ಇವೆ ಎಂದರು.
ಜಿಲ್ಲಾಧಿಕಾರಿ ನ್ಯಾಯಾಲಯಗಳ ಪೈಕಿ ಚಿಕ್ಕಮಗಳೂರು 652, ಚಾಮರಾಜನಗರ 213, ದಕ್ಷಿಣ ಕನ್ನಡ 507, ಹಾಸನ 547, ಕೊಡಗು 140, ಮಂಡ್ಯ 320, ಮೈಸೂರು 1040, ಉಡುಪಿ 130 ಪ್ರಕರಣಗಳು ಸೇರಿದಂತೆ ಒಟ್ಟಾರೆಯಾಗಿ 3,513 ಪ್ರಕರಣಗಳು ಬಾಕಿ ಇವೆ ಎಂದು ವಿವರಿಸಿದರು.
ಸಾರ್ವಜನಿಕ ಆಸ್ತಿಗಳಿಗೆ ಉಂಟಾಗಿರುವ ಹಾನಿ ದುರಸ್ತಿಗೆ 2019ರಿಂದ 2022ರ ಅವಧಿಯಲ್ಲಿ ಮಂಜೂರಾಗಿ ಇನ್ನೂ ಪೂರ್ಣಗೊಳ್ಳದ 61.34 ಕೋಟಿ ರೂ. ವೆಚ್ಚದ ಕಾಮಗಾರಿ ಇದೆ. ಆದ್ಯತೆ ಮೇರೆಗೆ 15 ದಿನಗಳಲ್ಲಿ ತಕ್ಷಣ ಪೂರ್ಣಗೊಳಿಸಬೇಕು. ಇಲ್ಲವೇ ಹಣ ವಾಪಸ್ ಮಾಡಿ ಕಾಮಗಾರಿ ರದ್ದುಪಡಿಸುವಂತೆ ಸೂಚಿಸಲಾಗಿದೆ ಎಂದರು.
ಮಳೆಯಿಂದ ಹಾನಿಗೀಡಾದ ಮನೆಗಳ ರಿಪೇರಿಗೆ 50,000 ರೂ., ಸಂಪೂರ್ಣ ಮನೆ ಕಳೆದುಕೊಂಡವರಿಗೆ 1.3 ಲಕ್ಷ ರೂ. ಹಾಗೂ ಮನೆ ಮರು ನಿರ್ಮಾಣಕ್ಕೆ 3.7 ಲಕ್ಷ ರೂ. ಸೇರಿ ಒಟ್ಟಾರೆ 5 ಲಕ್ಷ ರೂ. ನೀಡುತ್ತೇವೆ. ಆದರೆ ಕೆಲವು ಫಲಾನುಭವಿಗಳು ಮನೆಯನ್ನೇ ಕಟ್ಟಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳು ಪರಿಶೀಲಿಸಿ ತಕ್ಷಣ ಕ್ರಮಕೈಗೊಳ್ಳಲು ತಿಳಿಸಲಾಗಿದೆ ಎಂದು ಹೇಳಿದರು.
15ರಿಂದ ಇ-ಆಫೀಸ್:
ನವೀನ ತಂತ್ರಜ್ಞಾನ ಬಳಸಿಕೊಂಡು ಆಡಳಿತಕ್ಕೆ ವೇಗ ನೀಡಲು, ಕಡಿತ ವಿಲೇವಾರಿ ತ್ವರಿತಗೊಳಿಸಲು ಹಾಗೂ ಆಡಳಿತದಲ್ಲಿ ಪಾರದರ್ಶಕತೆ ತರಲು ಆ. 15 ರಿಂದ ಜಿಲ್ಲಾಧಿಕಾರಿಗಳು ಇ-ಆಫೀಸ್ ಮುಖಾಂತರವೇ ಕೇಂದ್ರ ಕಚೇರಿಯೊಂದಿಗೆ ವ್ಯವಹರಿಸಲು ತೀರ್ಮಾನಿಸಲಾಗಿದೆ ಎಂದು ಕೃಷ್ಣ ಭೈರೇಗೌಡ ತಿಳಿಸಿದರು.
ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಕಾವೇರಿ 2.0 ನೂತನ ತಂತ್ರಾಂಶ ಅಳವಡಿಸಲಾಗಿದೆ. ಇದರಿಂದ ಜನರಿಗೆ ಉಪಯೋಗ ಆಗುತ್ತಿದೆ. ಕೆಲವು ಕಡೆ ಸರ್ವರ್ ಸಮಸ್ಯೆಯೆಂದು ಹೇಳುತ್ತಿದ್ದು, ಅದನ್ನು ಆಯಾ ದಿನವೇ ಸರಿಪಡಿಸಲಾಗುತ್ತಿದೆ. ದೂರುಗಳು ಇದ್ದರೆ ಇಲಾಖೆಯ ಸಹಾಯವಾಣಿಗೆ ಕರೆ ಮಾಡಬಹುದು ಎಂದರು.
ಕಾವೇರಿ ಹಾಗೂ ಭೂಮಿ ತಂತ್ರಾಂಶಗಳು ಬೇರೆ ಆಗಿರುವುದರಿಂದ ಇಸಿ ನೀಡಲು ವಿಳಂಬ ಆಗುತ್ತಿದೆ. ಇದನ್ನು ಜೋಡಣೆ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಶೀಘ್ರ ಸಮಸ್ಯೆ ಪರಿಹರಿಸಲಾಗುವುದು. ಮೈಸೂರು ಪ್ರಾದೇಶಿಕ ವಿಭಾಗದಲ್ಲಿ 88,577 ಪೈಕಿ ಪಹಣಿಗಳು ಬಾಕಿ ಇವೆ. 3 ತಿಂಗಳಲ್ಲಿ ಎಲ್ಲ ಪೈಕಿ ಪಹಣಿಗಳನ್ನು ಪರಿಹರಿಸಲು ಸೂಚಿಸಲಾಗಿದೆ ಎಂದು ಪ್ರಶ್ನೆಗೆ ಉತ್ತರಿಸಿದರು.
ಜಿಪಿಎಸ್ ಪದ್ಧತಿ ಜಾರಿಗೆ ಚಿಂತನೆ
ಸರ್ಕಾರಿ ಭೂಮಿ ಒತ್ತುವರಿ ತಡೆಗೆ ಗ್ರಾಮಲೆಕ್ಕಿಗರ ಮೂಲಕ ಜಿಪಿಎಸ್ ಪದ್ಧತಿ ಜಾರಿಗೊಳಿಸಲು ಉದ್ದೇಶಿಸಲಾಗಿದೆ. ಒತ್ತುವರಿ ದೂರು ಬಂದರೆ ಸ್ಥಳಕ್ಕೆ ತೆರಳಿ ಮಹಜರು ನಡೆಸಬೇಕು. ಬಳಿಕ ಜಿಪಿಎಸ್ ವ್ಯವಸ್ಥೆ ಇರುವ ಮೊಬೈಲ್‌ನಿಂದ ಸ್ಥಳದಲ್ಲಿಯೇ ಫೋಟೋ, ವಿಡಿಯೋ ಅಪ್‌ಲೋಡ್ ಮಾಡಲು ಉದ್ದೇಶಿಸಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದರು.
ಒತ್ತುವರಿ ತೆರವು
ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ಒತ್ತುವರಿ ತೆರವು ಆರಂಭಗೊಂಡಿದೆ. ಅದನ್ನು ರಾಜ್ಯದ ಎಲ್ಲ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು ಎಂದು ಸಚಿವರು ತಿಳಿಸಿದರು.
ಇಲಾಖೆಯನ್ನು ಜನಸ್ನೇಹಿಗೊಳಿಸಲು ಮುಂದಿನ ಹಂತದಲ್ಲಿ ಜನರು ಸೇವೆಯ ಕುರಿತು ಅಭಿಪ್ರಾಯ ದಾಖಲಿಸಿ, ರೇಟಿಂಗ್ ನೀಡುವ ಕುರಿತು ಯೋಚನೆ ನಡೆಸಲಾಗಿದೆ. ಇದಕ್ಕೆ ಸ್ಪಷ್ಟರೂಪ ನೀಡಲು ಉದ್ದೇಶಿಸಲಾಗಿದೆ ಎಂದರು.