ಅರಿಶಿಣಕ್ಕೆ ಬೆಂಬಲ ಬೆಲೆ ನೀಡಲು ಸರ್ಕಾರ ನಿರಾಸಕ್ತಿ

09-GPT-3
ನವದೆಹಲಿಯ ಕೃಷಿ ಸಚಿವಾಲಯದಲ್ಲಿ ಕೇಂದ್ರ ಕೃಷಿ ಸಚಿವರನ್ನು ಭೇಟಿಯಾಗಲು ಕುರುಬೂರು ಶಾಂತಕುಮಾರ್, ಅತ್ತಳ್ಳಿ ದೇವರಾಜ್, ಮಹಾದೇವಯ್ಯ, ನಾಗಾರ್ಜುನ ಕುಮಾರ್ ಹೊರಟಿದ್ದಾರೆ.
Published on

ಗುಂಡ್ಲುಪೇಟೆ: ಅರಿಶಿಣಕ್ಕೆ ಕೇಂದ್ರ ಸರ್ಕಾರ ಬೆಂಬಲ ಬೆಲೆ ನೀಡಲು ಸಿದ್ಧವಾಗಿದ್ದರೂ ರಾಜ್ಯ ಸರ್ಕಾರದ ನಿರಾಸಕ್ತಿಯಿಂದ ಸಾಧ್ಯವಾಗುತ್ತಿಲ್ಲ. ರಾಜ್ಯ ಸರ್ಕಾರದ ನಡೆ ದೇವರು ಕೊಟ್ಟರೂ ಪೂಜಾರಿ ಕೊಡಲ್ಲ ಎಂಬಂತಾಗಿದೆ ಎಂದು ಅರಿಶಿಣ ಬೆಳೆಗಾರರ ಒಕ್ಕೂಟದ ಪ್ರತಿನಿಧಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಾರಿ ಕಟಾವಿನ ಸಂದರ್ಭದಲ್ಲಿಯೇ ಅರಿಶಿಣದ ಬೆಲೆ ಕ್ವಿಂಟಾಲ್‌ಗೆ 6 ಸಾವಿರ ರೂ.ಗಳಿಗೆ ಕುಸಿದಿದ್ದರಿಂದ ಬೆಳೆಗಾರರು ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಕೇಂದ್ರ ಸರ್ಕಾರದಿಂದ ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿದ್ದರು. ಈ ಬಗ್ಗೆ ಕೂಡಲೇ ಸರ್ಕಾರ ನೆರವಿಗೆ ಬರುವಂತೆ ಶಾಸಕ ಸಿ.ಎಸ್.ನಿರಂಜನಕುಮಾರ್ ಸರ್ಕಾರಕ್ಕೆ ಪತ್ರ ಬರೆಯುವ ಜತೆಗೆ ಅಧಿವೇಶನದಲ್ಲಿಯೂ ಒತ್ತಾಯಿಸಿದ್ದರು.

ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಸರ್ಕಾರ ಲಿಖಿತ ಉತ್ತರ ನೀಡಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರ ಭೇಟಿಗೆ ರಾಜ್ಯದಿಂದ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ಸಂಘಟನಾ ಕಾರ್ಯದರ್ಶಿ ಅತ್ತಳ್ಳಿ ದೇವರಾಜ್, ನಿವೃತ್ತ ಪ್ರೊಫೆಸರ್ ಮಹಾದೇವಯ್ಯ, ರಾಜ್ಯ ಅರಿಶಿಣ ಬೆಳೆಗಾರರ ಒಕ್ಕೂಟದ ನಾಗಾರ್ಜುನ ಕುಮಾರ್ ನಿಯೋಗ ತೆರಳಿತ್ತು. ಆದರೆ ಅರಿಶಿಣ ಬೆಳೆಗಾರರ ರಕ್ಷಣೆಗೆ ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆ ಸಲುವಾಗಿ ಯಾವುದೇ ರೀತಿಯ ಪ್ರಸ್ತಾವನೆಗಳು ಕರ್ನಾಟಕದಿಂದ ಇನ್ನೂ ಬಂದಿರುವುದಿಲ್ಲವೆಂದು ಕೃಷಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಆದರೆ ರಾಜ್ಯದ ಅಧಿಕಾರಿಗಳು ಪತ್ರ ಬರೆಯಲು ಇನ್ನೂ ಹತ್ತು ದಿನಗಳ ಕಾಲಾವಕಾಶ ಕೇಳುತ್ತಿದ್ದಾರೆ. ಅಷ್ಟರಲ್ಲಿ ನೀತಿ ಸಂಹಿತೆ ಜಾರಿಯಾದರೆ ಈ ವರ್ಷ ಬೆಂಬಲ ಬೆಲೆ ಕನಸಾಗಲಿದೆ ಎಂದು ಪ್ರತಿನಿಧಿಗಳು ಪತ್ರಿಕಾ ಹೇಳಿಕೆಯಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಅರಿಶಿಣ ಬೆಳೆಗಾರರ ಹಿತಾಸಕ್ತಿ ಕಾಪಾಡಲು ಸರ್ಕಾರ ನೆರವಿಗೆ ಬರಲಿದೆ. ಈ ಬಗ್ಗೆ ತಾವು ಮುಖ್ಯಂತ್ರಿಗಳಿಗೆ ಮನವರಿಕೆ ಮಾಡಿದ್ದು, ಮತ್ತೊಮ್ಮೆ ಗಮನಕ್ಕೆ ತರಲಿದ್ದೇನೆ ಎಂದು ಶಾಸಕ ಸಿ.ಎಸ್.ನಿರಂಜನಕುಮಾರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net