

ಚಾಮರಾಜನಗರ: ದೇಶದಲ್ಲಿ ಅರಿಶಿಣ ಬೆಳೆಯುವ ರಾಜ್ಯಗಳಲ್ಲಿ ಕರ್ನಾಟಕ 4ನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಚಾಮರಾಜನಗರ ಮೂರನೇ ಸ್ಥಾನದಲ್ಲಿದೆ ಎಂದು ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತದ(ಕೆಪೆಕ್) ಅಧ್ಯಕ್ಷ ಬಿ.ಎಚ್. ಹರೀಶ ಹೇಳಿದರು.
ತಾಲೂಕಿನ ಹರದನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮ ನಿಯಮಿತ (ಕೆಪೆಕ್), ಭಾರತೀಯ ತೋಟಗಾರಿಕಾ ವ್ಯವಸ್ಥಾಪಕ ಸಂಸ್ಥೆ, ಕೃಷಿ ವಿಶ್ವವಿದ್ಯಾಲಯ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಅರಿಶಿಣ ಮೌಲ್ಯ ಹೆಚ್ಚಿಸುವುದು, ಸಂಸ್ಕರಣೆ ಮತ್ತು ರಫ್ತು ಅವಕಾಶಗಳ ಕುರಿತು ಸಾಮರ್ಥ್ಯ ಬಲವರ್ಧನೆ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ರೈತರು ಉತ್ತಮ ಗುಣಮಟ್ಟದ ಅರಿಶಿಣವನ್ನು ಬೆಳೆಯಲು ಎರಡು ದಿನದ ಕಾರ್ಯಾಗಾರದಲ್ಲಿ ತರಬೇತಿಯನ್ನು ನೀಡಲಾಗುತ್ತದೆ. ಈ ಭಾಗದ ರೈತರಿಗೆ ಅರಿಶಿಣ ಬೆಳೆಯಲು ಅನುಕೂಲವಾಗಬೇಕು. ಅರಿಶಿಣ ಜಿಲ್ಲೆಯ ಒಂದು ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ವಿದೇಶಗಳಿಗೆ ರಫ್ತಾಗಿ ಉತ್ತಮ ಲಾಭವನ್ನು ತಂದು ಕೊಡುತ್ತಿದೆ ಎಂದು ತಿಳಿಸಿದರು.
ಅರಿಶಿಣ ಸಂಸ್ಕರಣೆ ಮತ್ತು ಮೌಲ್ಯವರ್ಧನೆ ಚಟುವಟಿಕೆಗಳಲ್ಲಿ ತೊಡಗಿರುವ ರೈತ ಉತ್ಪಾದಕರ ಸಂಸ್ಥೆ ಹಾಗು ಉದ್ಯಮಿಗಳು ಗಣನೀಯ ಮಟ್ಟದಲ್ಲಿ ಉದ್ಯೋಗವನ್ನು ಒದಗಿಸಿ, ಹಲವಾರು ಜನರ ಜೀವನೋಪಾಯಕ್ಕೆ ದಾರಿಯಾಗಿದ್ದಾರೆ. ಸಂಸ್ಥೆಯ ಮೂಲಕ ಉತ್ತಮ ಯೋಜನೆಗಳನ್ನು ಕೃಷಿಯಲ್ಲಿ ಉದ್ಯಮಶೀಲತೆ ಪ್ರೋತ್ಸಾಹಿಸಲು ರೂಪಿಸಲಾಗಿದ್ದು, ಜಿಲ್ಲೆಯ ಅರಿಶಿಣ ಬೆಳೆಗಾರರು ಸಂಸ್ಕರಣೆ, ಮುದ್ರಣ ಹಾಗೂ ಮೌಲ್ಯವರ್ಧನೆಗೆ ಈ ಯೋಜನೆಗಳನ್ನು ಬಳಸಿಕೊಂಡು ಆರ್ಥಿಕತೆ ಹೆಚ್ಚಿಸಿಕೊಳ್ಳಲು ಕರೆ ನೀಡಿದರು.
ಕೆಪೆಕ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಎಚ್.ಕೆ. ಶಿವಕುಮಾರ್ ಮಾತನಾಡಿ, ರೈತ ಉತ್ಪಾದಕರು ಮತ್ತು ಖರೀದಿದಾರರ ನಡುವೆ ಇರುವ ಅಂತರಗಳನ್ನು ತಗ್ಗಿಸಿ, ಅರಿಶಿಣ ಬೆಳೆಗಾರರಿಗೆ ಹೆಚ್ಚಿನ ಲಾಭ ತರುವ ನಿಟ್ಟಿನಲ್ಲಿ ಈ ರೀತಿಯ ಉತ್ತೇಜನಕಾರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಕೆಪೆಕ್ ಸಂಸ್ಥೆಯು ಮಾರುಕಟ್ಟೆ ಜೋಡಣೆ ಮತ್ತು ರಫ್ತು ಅವಕಾಶಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಉತ್ತಮ ಯೋಜನೆಗಳನ್ನು ರೂಪಿಸಿ, ಅನುಷ್ಠಾನಗೊಳಿಸಿದೆ. ಕೃಷಿ ಉತ್ಪನ್ನಗಳ ಸುರಕ್ಷಿತ ಶೇಖರಣೆ ಮತ್ತು ಮೌಲ್ಯವರ್ಧನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ತಿಳಿಸಿದರು.
ಕೃಷಿಯಲ್ಲಿ ಉದ್ಯಮಶೀಲತೆ ಪ್ರೋತ್ಸಾಹಿಸಲು ಬೆಳೆಗಾರರು ಮತ್ತು ಉತ್ಪಾದಕರಿಗೆ ಒಳ್ಳೆಯ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದ್ದು, ಇದರ ಸದ್ಭಳಕೆ ಮಾಡಿಕೊಳ್ಳಬೇಕು. ಜತೆಗೆ ಉತ್ಪನ್ನಗಳ ಪ್ರಮಾಣೀಕರಣ ಪ್ರಕ್ರಿಯೆಗಳನ್ನು ಪೂರೈಸಿಕೊಳ್ಳಲು ತಮ್ಮ ಸಂಸ್ಥೆಯು ಅಗತ್ಯ ಸಹಕಾರ ಒದಗಿಸುವುದು ಎಂದು ತಿಳಿಸಿದರು.
ಕೃಷಿ ಮಹಾವಿದ್ಯಾಲಯದ ವಿಶೇಷ ಅಧಿಕಾರಿ ಡಾ.ಸಿ.ದೊರೆಸ್ವಾಮಿ ಮಾತನಾಡಿ, ಗುಣಮಟ್ಟದ ಅರಿಶಿಣ ಉತ್ಪಾದನೆ ರೈತರ ಕ್ಷೇತ್ರದಲ್ಲಿ ಆಗಬೇಕಿದ್ದು, ಇದರಿಂದ ರಫ್ತು ಅವಕಾಶಗಳು ಹೆಚ್ಚಾಗಲಿವೆ. ಸಂಸ್ಕರಣೆ ಮತ್ತು ಮೌಲ್ಯವರ್ಧನೆಗೆ ಹೆಚ್ಚಿನ ಸೌಕರ್ಯಗಳ ಅವಶ್ಯಕತೆ ಇದ್ದು ಇದರ ಬಗ್ಗೆ ಗಮನ ಹರಿಸಬೇಕಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ಅರಿಶಿಣ ಬೆಳೆಗಾರರು, ಅರಿಶಿಣ ಸಂಸ್ಕರಣೆಗಾರರು ಮತ್ತು ಅರಿಶಿಣ ಖರೀದಿದಾರ ಸಂಸ್ಥೆಗಳು ಭಾಗವಹಿಸಿದ್ದವು. ಕಾರ್ಯಕ್ರಮದ ನಿಮಿತ್ತ ಸಮಸ್ಕರಿಸಿದ ಅರಿಶಿಣ ಉತ್ಪನ್ನಗಳು, ಜೈವಿಕ ಉತ್ಪನ್ನಗಳು, ದ್ರವರೂಪದ ಸಾವಯವ ಪರಿಕರಗಳ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ.ಜಿ.ಎಸ್.ಯೋಗೇಶ್, ಕೇಂದ್ರದ ತೋಟಗಾರಿಕಾ ವಿಜ್ಞಾನಿ ಡಾ.ಎ.ಬಿ.ಮೋಹನ್ ಕುಮಾರ್, ಕೇಂದ್ರದ ತಾಂತ್ರಿಕ ಅಧಿಕಾರಿ, ಡಾ.ಬಿ.ಪಂಪನಗೌಡ, ಭಾರತೀಯ ತೋಟಗಾರಿಕಾ ವ್ಯವಸ್ಥಾಪಕ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕಿ ಡಾ. ಶಿಲ್ಪಾ, ಎಸ್.ಶಾರದಾ ಇತರರು ಇದ್ದರು.
ಅರಿಶಿಣ ಬೆಳೆಗಾರರು ಸಂಪನ್ಮೂಲ ವ್ಯಕ್ತಿಗಳ ಮಾರ್ಗದರ್ಶನ ಪಡೆದುಕೊಳ್ಳಿ. ಇತ್ತೀಚೆಗೆ ಆಹಾರ ಸಂಸ್ಕರಣೆ ಉದ್ಯಮದಲ್ಲಿ ಉತ್ತಮ ಯಂತ್ರೋಪಕರಣಗಳು ಲಭ್ಯವಿದ್ದು, ಇವುಗಳು ಸಮಯ, ಇಂಧನ ಮತ್ತು ಮಾನವ ಸಂಪನ್ಮೂಲಗಳ ದಕ್ಷ ಬಳಕೆಗೆ ಸಹಕಾರಿಯಾಗಿದೆ. ಹಬೀದ್, ಕೃಷಿ ಇಲಾಖೆ ಜಂಟಿ ನಿರ್ದೇಶಕ, ಚಾಮರಾಜನಗರ