ಅರಿಶಿಣ ಖರೀದಿ ಕೇಂದ್ರಕ್ಕೆ ಶೀಘ್ರ ಚಾಲನೆ

13-GPT-1
ಗುಂಡ್ಲುಪೇಟೆ ಪಟ್ಟಣದ ಎಪಿಎಂಸಿ ಕಚೇರಿಯಲ್ಲಿ ಶಾಸಕ ಗಣೇಶ್ ಪ್ರಸಾದ್ ನೇತೃತ್ವದಲ್ಲಿ ಸಭೆ ನಡೆಯಿತು. ಶ್ರೀಧರ್, ನಾಗಾರ್ಜುನ ಕುಮಾರ್ ಪ್ರಭುಸ್ವಾಮಿ, ಕುಂದಕೆರೆ ಸಂಪತ್ತು, ಎಚ್.ಎಸ್.ನಂಜಪ್ಪ, ಕೆ.ಎಸ್.ಮಹೇಶ್ ಇದ್ದರು.
Published on

ಗುಂಡ್ಲುಪೇಟೆ: ಅರಿಶಿಣಕ್ಕೆ ಬೆಂಬಲ ಬೆಲೆ ನೀಡಿ ಖರೀದಿ ಮಾಡಲು ಕೇಂದ್ರ ತೆರೆಯಲಾಗಿದ್ದರೂ ಖರೀದಿ ಪ್ರಕ್ರಿಯೆ ಆರಂಭಿಸಿಲ್ಲ ಎಂದು ಆರೋಪಿಸಿ ರಾಜ್ಯ ಅರಿಶಿಣ ಬೆಳೆಗಾರರ ಒಕ್ಕೂಟ ಮತ್ತು ರೈತ ಸಂಘಟನೆ ಎಪಿಎಂಸಿ ಆವರಣದಲ್ಲಿ ಸೋಮವಾರ ಪ್ರತಿಭಟನೆ ನಡೆಸಿತು.

ಅರಿಶಿಣ ಬೆಳೆಗಾರರ ಸಂಘಟನೆ ರಾಜ್ಯ ಸಂಚಾಲಕ ನಾಗಾರ್ಜುನ ಕುಮಾರ್ ಮಾತನಾಡಿ, ಪ್ರತಿ ವರ್ಷವೂ ಉತ್ಪಾದನಾ ವೆಚ್ಚ ಹೆಚ್ಚಳವಾಗುತ್ತಿದ್ದರೂ ಸೂಕ್ತ ಬೆಲೆ ದೊರಕದ ಹಿನ್ನೆಲೆಯಲ್ಲಿ ರೈತರಿಗೆ ನಷ್ಟವಾಗುತ್ತಿದೆ. ಬೆಳೆಗಾರರನ್ನು ಸಂಕಷ್ಟದಿಂದ ಪಾರು ಮಾಡುವ ಸಲುವಾಗಿ ಸರ್ಕಾರ ಕನಿಷ್ಠ ಬೆಂಬಲ ಬೆಲೆಯಲ್ಲಿ ಅರಿಶಿಣ ಖರೀದಿಸಬೇಕು ಎಂದು ಪ್ರತಿಭಟನೆ ನಡೆಸಲಾಗಿತ್ತು. ಜತೆಗೆ ದೆಹಲಿಗೂ ನಿಯೋಗ ತೆರಳಿ ಕೇಂದ್ರ ಸರಕಾರದ ಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಅದರಂತೆ ಕನಿಷ್ಠ ಬೆಂಬಲ ಬೆಲೆಯಲ್ಲಿ ಆರಿಶಿಣ ಖರೀದಿಸಲು ಎಪಿಎಂಸಿಯಲ್ಲಿ ಕಾಲಮಿತಿಯಲ್ಲಿ ಖರೀದಿ ಕೇಂದ್ರ ತೆರೆಯುವಂತೆ ಸರ್ಕಾರ ಆದೇಶ ಮಾಡಿತ್ತು. ಬಳಿಕ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿ ಕೇಂದ್ರ ಆರಂಭಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ ನಂತರ ಕೇಂದ್ರ ತೆರೆಯಲಾಗಿದೆಯಾದರೂ ಖರೀದಿ ಪ್ರಕ್ರಿಯೆ ಆರಂಭಿಸಿಲ್ಲ ಎಂದು ಆಕ್ರೋಶವ್ಯಕ್ತಪಡಿಸಿದರು.

ವಿಷಯ ತಿಳಿದ ನಂತರ ಕೃಷಿ ಉತ್ಪನ್ನ ಮಾರುಕಟ್ಟೆ ಕಚೇರಿಯಲ್ಲಿ ತಹಸೀಲ್ದಾರ್ ಶ್ರೀಶೈಲ ತಳವಾರ ಮತ್ತು ಎಪಿಎಂಸಿ ಅಧ್ಯಕ್ಷ ರವಿ ನೇತೃತ್ವದಲ್ಲಿ ಸಭೆ ನಡೆಸಿ ಅರಿಶಿಣ ಖರೀದಿ ಬಗ್ಗೆ ಚರ್ಚಿಸಲಾಯಿತು. ನಂತರ ಸ್ಥಳಕ್ಕೆ ಆಗಮಿಸಿದ ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್ ನೇತೃತ್ವದಲ್ಲಿ ಮತ್ತೊಮ್ಮೆ ಸಭೆ ನಡೆಯಿತು. ಕೂಡಲೇ ಖರೀದಿ ಕೇಂದ್ರ ತೆರೆಯುವ ಭರವಸೆ ಪ್ರಕಟಿಸಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈಬಿಡಲಾಯಿತು.

ಎಪಿಎಂಸಿ ಕಾರ್ಯದರ್ಶಿ ಶ್ರೀಧರ್, ಮಾಜಿ ನಿರ್ದೇಶಕ ಪ್ರಭುಸ್ವಾಮಿ, ರೈತ ಮುಖಂಡ ಕುಂದಕೆರೆ ಸಂಪತ್ತು, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಜಿಪಂ ಮಾಜಿ ಸದಸ್ಯ ಕೆ.ಎಸ್.ಮಹೇಶ್, ಪಟ್ಟಣ ಠಾಣೆಯ ಪಿಎಸ್‌ಐ ಕಿರಣ್ ಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net