ಅರಿಶಿಣ ಕೃಷಿಯಲ್ಲಿ ಪ್ರತಿಭಾ ಸುಧಾರಿತ ತಳಿ ಅಭಿವೃದ್ಧಿ

HUN-APR-1-1(CTRI PROGRAMME)
ಹುಣಸೂರು ನಗರದ ಸಿಟಿಆರ್‌ಐ ಕೇಂದ್ರದಲ್ಲಿ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ರೈತರಿಗೆ ಅರಿಶಿನ ಬಿತ್ತನೆ ಬೀಜಗಳನ್ನು ವಿತರಿಸಲಾಯಿತು. ಡಾ.ಎಸ್.ರಾಮಕೃಷ್ಣನ್, ಶಂಭುಲಿಂಗಸ್ವಾಮಿ, ಡಾ.ಮಹದೇವಸ್ವಾಮಿ ಇತರರಿದ್ದಾರೆ.
Published on

ಹುಣಸೂರು: ಕೇಂದ್ರೀಯ ತಂಬಾಕು ಸಂಶೋಧನಾ ಕೇಂದ್ರ (ಸಿಟಿಆರ್‌ಐ)ದಲ್ಲಿ ಅರಿಶಿಣ ಕೃಷಿಯಲ್ಲಿ ಪ್ರತಿಭಾ ಎನ್ನುವ ಸುಧಾರಿತ ತಳಿಯನ್ನು ಅಭಿವೃದ್ಧಿಪಡಿಸಿದ್ದು, ಈ ಭಾಗದ ರೈತರು ಸುಧಾರಿತ ತಳಿಯ ಬಿತ್ತನೆ ಬೀಜಗಳನ್ನು ಬಳಸಿಕೊಳ್ಳಬೇಕೆಂದು ಕೇಂದ್ರದ ಮುಖ್ಯಸ್ಥ ಡಾ.ಎಸ್.ರಾಮಕೃಷ್ಣನ್ ತಿಳಿಸಿದರು.

ಕೇಂದ್ರದಲ್ಲಿ ಶನಿವಾರ ಅರಿಶಿಣ ಕೃಷಿಯ ಕುರಿತಂತೆ ಪರಿಶಿಷ್ಟ ಜಾತಿ ರೈತರಿಗಾಗಿ ಆಯೋಜಿಸಿದ್ದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಅರಿಶಿನದಲ್ಲಿ ಕರ್ಕ್ಯುಮಿನ್ ಎನ್ನುವ ರಾಸಾಯನಿಕ ವಸ್ತು ಶೇ.6ಕ್ಕಿಂತ ಹೆಚ್ಚಿನ ಪ್ರಮಾಣವನ್ನು ಪ್ರತಿಭಾ ತಳಿ ಹೊಂದಿದೆ. ಹಾಗಾಗಿ ಇದು ರಫ್ತು ಮಾಡುವ ಗುಣಮಟ್ಟವನ್ನು ಹೊಂದಿರುತ್ತದೆ. ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯೂ ದೊರಕಲಿದೆ. ಹುಣಸೂರು ಉಪವಿಭಾಗ ವ್ಯಾಪ್ತಿಯ ರೈತರು ಈವರೆಗೆ ಸೇಲಂ ಎನ್ನುವ ಸ್ಥಳೀಯ ಬಿತ್ತನೆ ಬೀಜವನ್ನು ಉಪಯೋಗಿಸುತ್ತಿರುವುದು ಕಂಡುಬಂದಿದ್ದು, ಈ ಸಾಲಿನಲ್ಲಿ ರೈತರು ಕೇಂದ್ರದಿಂದ ಪ್ರತಿಭಾ ತಳಿಯ ಬಿತ್ತನೆಬೀಜಗಳನ್ನು ಬಳಸಿಕೊಂಡಲ್ಲಿ ಉತ್ತಮ ಲಾಭ ಗಳಿಸಬಹುದಾಗಿದೆ. ಅರಿಶಿಣ ಕೃಷಿಯಲ್ಲಿನ ಸುಧಾರಿತ ಪದ್ಧತಿಯ ಕುರಿತು ರೈತರಿಗೆ ಮಾಹಿತಿ ನೀಡಲಾಗುವುದು ಎಂದರು.

ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ನೇತ್ರಾವತಿ ಮಾತನಾಡಿ, ಔಷಧೀಯ ಗುಣವನ್ನು ಹೊಂದಿರುವ ಅರಿಶಿಣ ಕೃಷಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಿದೆ. ಮೇಘಾಲಯದ ಲಕಾಡಾಂಗ್ ಅರಿಶಿನ ತಳಿಯಲ್ಲಿ ಶೇ.7ರ ಪ್ರಮಾಣದಲ್ಲಿ ಕರ್ಕ್ಯುಮಿನ್ ಅಂಶ ಇದ್ದು, ಇದಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಈ ಭಾಗದ ಹವಾಮಾನಕ್ಕೆ ತಕ್ಕಂತೆ ಪ್ರತಿಭಾ ತಳಿಯನ್ನು ಅಭಿವೃದ್ಧಿಪಡಿಸಲಾಗಿದ್ದು, ರೈತರು ಸಾವಯವ ಗೊಬ್ಬರದೊಂದಿಗೆ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕೆಂದು ಕೋರಿದರು.

ಕಾರ್ಯಾಗಾರದಲ್ಲಿ 60ಕ್ಕೂ ಹೆಚ್ಚು ರೈತರಿಗೆ ಪ್ರತಿಭಾ ಬಿತ್ತನೆಬೀಜಗಳನ್ನು ಉಚಿತವಾಗಿ ವಿತರಿಸಲಾಯಿತು. ತಂಬಾಕು ಮಂಡಳಿಯ ಪ್ರಾದೇಶಿಕ ಅಧಿಕಾರಿ ಶಂಭುಲಿಂಗಸ್ವಾಮಿ, ಹರಾಜು ಅಧೀಕ್ಷಕ ವಿಜಯಕುಮಾರ್, ಕೇಂದ್ರದ ಹಿರಿಯ ವಿಜ್ಞಾನಿಗಳಾದ ಡಾ.ಮಹದೇವಸ್ವಾಮಿ, ಡಾ.ರಾಜಪ್ಪ ಹಾಗೂ ರೈತರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net