

ಮೈಸೂರು: ಮೊಬೈಲ್ ಬಳಕೆ ಮಕ್ಕಳ ಅರಿವಿಗೇ ಬರದಂತೆ ಅಪರಾಧದ ಕಡೆಗೆ ಮತ್ತು ತಪ್ಪು ದಾರಿಯತ್ತ ಕರೆದೊಯ್ಯುತ್ತಿದೆ. ಆದ್ದರಿಂದ ಮಕ್ಕಳು ಎಚ್ಚರಿಕೆ ವಹಿಸಬೇಕು ಎಂದು ಡಿಸಿಪಿ ಎಂ.ಮುತ್ತುರಾಜು ಹೇಳಿದರು.
ಯೂನಿಯನ್ ಬ್ಯಾಂಕ್ ವತಿಯಿಂದ ನಗರದ ಮುಕ್ತ ಗಂಗೋತ್ರಿಯ ಘಟಿಕೋತ್ಸವ ಭವನದಲ್ಲಿ ಸೋಮವಾರ ಆಯೋಜಿಸಿದ್ದ ‘ಯು ಜಿನಿಯಸ್’ ರಸಪ್ರಶ್ನೆ ಸ್ಪರ್ಧಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸೈಬರ್ ಕ್ರೈಂ ಹೆಚ್ಚಾಗಿದೆ. ಅದಕ್ಕೆ ಮೊಬೈಲ್ ಬಳಕೆಯೇ ಮುಖ್ಯ ಕಾರಣವಾಗಿದೆ. ಗೊತ್ತಿಲ್ಲದಂತೆ ಮಕ್ಕಳಿಂದ ಸೈಬರ್ ಅಪರಾಧ ನಡೆದು ಹೋಗುತ್ತದೆ. ಆದರೆ ಅದು ಮಕ್ಕಳಿಗೆ ಗೊತ್ತಿರಲ್ಲ. ಉದ್ದೇಶಪೂರ್ವಕವಾಗಿಯೂ ಇರಲ್ಲ. ಆದ್ದರಿಂದ ಅಗತ್ಯಕ್ಕೆ ತಕ್ಕಷ್ಟು ಮಾತ್ರ ಮೊಬೈಲ್ ಬಳಕೆ ಮಾಡಬೇಕು. ಈ ಸಂದರ್ಭದಲ್ಲಿ ಎಚ್ಚರಿಕೆ ವಹಿಸಬೇಕು. ಇದರ ಬಳಕೆಯನ್ನು ಚಟ ಮಾಡಿಕೊಳ್ಳಬೇಡಿ ಎಂದು ಕಿವಿಮಾತು ಹೇಳಿದರು.
ಮಕ್ಕಳಲ್ಲಿ ಮಾದಕ ವಸ್ತುಗಳ ಬಳಕೆ ಅಧಿಕವಾಗುತ್ತಿದೆ. ಇದು ಸಹ ಅವರ ಅರಿವಿಗೆ ಬರುತ್ತಿಲ್ಲ. ಚಾಕಲೇಟ್, ಬಿಸ್ಕತ್ತು ರೂಪದಲ್ಲಿ ಇದನ್ನು ನೀಡಲಾಗುತ್ತದೆ. ಅದರ ಬಗ್ಗೆ ತಿಳಿಯದ ಮಕ್ಕಳು ಸೇವನೆ ಮಾಡುತ್ತಿದ್ದಾರೆ. ಹೀಗೆ ಈ ರುಚಿಗೆ ಅವರು ದಾಸರಾಗುತ್ತಿದ್ದು, ಬಳಿಕ ಇದು ಪುನರಾವರ್ತನೆಯಾಗುವ ಮೂಲಕ ದುಶ್ಚಟವಾಗುತ್ತಿದೆ. ಇದು ಮಕ್ಕಳ ಬುದ್ಧಿಶಕ್ತಿಯನ್ನು ಹಾಳುಮಾಡುತ್ತಿದ್ದು, ಹೀಗಾದರೆ, ಮತ್ತೆ ಅದನ್ನು ಸರಿಪಡಿಸಲು ಆಗುವುದಿಲ್ಲ. ಆದ್ದರಿಂದ ಮಾದಕ ವಸ್ತುಗಳಿಂದ ದೂರ ಇರಬೇಕು ಎಂದು ಮಕ್ಕಳಿಗೆ ಸಲಹೆ ನೀಡಿದರು.
ಯಾವುದೇ ಸಂದರ್ಭದಲ್ಲೂ ತಾಳ್ಮೆಯನ್ನು ಕಳೆದುಕೊಳ್ಳಬಾರದು. ಜೀವನದಲ್ಲಿ ಪ್ರತಿಯೊಂದು ಹಿನ್ನಡೆಗೆ ಮತ್ತೊಬ್ಬರು ಕಾರಣವಲ್ಲ. ಇದು ನೆಪಮಾತ್ರ. ಯಾರೂ ನಮ್ಮನ್ನು ಉದ್ಧಾರ ಮಾಡಲು ಬರಲ್ಲ. ಬುದ್ಧಿಶಕ್ತಿಯನ್ನು ಬಳಸಿಕೊಂಡು ಜೀವನದಲ್ಲಿ ಮುಂದೆ ಬರಬೇಕು ಎಂದರು.
ಜೆಎಸ್‌ಎಸ್ ಮಹಾವಿದ್ಯಾಪೀಠದ ತಾಂತ್ರಿಕ ಶಿಕ್ಷಣ ವಿಭಾಗದ ಜಂಟಿ ನಿರ್ದೇಶಕ ಡಾ.ಎಚ್.ಆರ್.ಮಹದೇವಸ್ವಾಮಿ ಮಾತನಾಡಿ, ವಿಶ್ಲೇಷಣಾತ್ಮಕ ಮತ್ತು ಸಮಸ್ಯೆಗಳಿಗೆ ಪರಿಹಾರಾತ್ಮಕ ಗುಣ, ಸಾಮರ್ಥ್ಯ, ಜ್ಞಾನ, ನಿರಂತರ ಕಲಿಕೆ, ಕ್ರಿಯಾಶೀಲತೆ ಪ್ರತಿಯೊಬ್ಬ ವ್ಯಕ್ತಿಯನ್ನೂ ಜೀನಿಯಸ್ ಮಾಡುತ್ತದೆ ಎಂದರು.
ವೈದ್ಯ, ಇಂಜಿನಿಯರಿಂಗ್, ಸಮಾಜ ಸೇವಕ, ಸರ್ಕಾರಿ ಸೇವಕ ಹೀಗೆ ಯಾವುದೇ ವೃತ್ತಿಯಲ್ಲಿದ್ದರೂ ಸಮಾಜ ಮತ್ತು ಜನಸೇವೆಯನ್ನು ಮಾಡಬೇಕು. ಯಾವುದೇ ಸ್ಪರ್ಧೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ. ಪಾಲ್ಗೊಳ್ಳುವಿಕೆಯೇ ಮುಖ್ಯವಾಗಿರುತ್ತದೆ. ಇದರಿಂದ ಹೊಸತನ ಕಲಿಕೆ ಸಾಧ್ಯವಾಗಲಿದೆ ಎಂದರು.
8ರಿಂದ 12ನೇ ತರಗತಿವರೆಗೆ ನಡೆದ ಕ್ವಿಜ್ ಸ್ಪರ್ಧೆಯಲ್ಲಿ ಮೈಸೂರು ವಿಭಾಗ ಮಟ್ಟದ 150 ಶಾಲೆಗಳ ಅಂದಾಜು 1 ಸಾವಿರ ವಿದ್ಯಾರ್ಥಿಗಳು ಭಾಗಿಯಾಗಿದ್ದರು. ವಿಜೇತರು ಮುಂಬೈನಲ್ಲಿ ನಡೆಯುವ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಅರ್ಹರಾಗುತ್ತಾರೆ. ಯೂನಿಯನ್ ಬ್ಯಾಂಕ್‌ನ ಬೆಂಗಳೂರು ವಲಯದ ಜನರಲ್ ಮ್ಯಾನೇಜರ್ ಸತ್ಯಬೇನ್ ಬೆಹ್ರಾ, ಡಿಜಿಎಂ ರವೀಶ್ ನಾಯಕ್, ಮೈಸೂರು ಪ್ರಾದೇಶಿಕ ಕಚೇರಿಯ ಎಜಿಎಂ ವಿಶ್ವಲತಾ, ಹಾಸನದ ಎಜಿಎಂ ಶ್ರೀನಿವಾಸ್‌ಮೂರ್ತಿ, ಡಿಜಿಎಂ ಎ.ರಾಜಮಣಿ ಇನ್ನಿತರರಿದ್ದರು.
ಫಲಿತಾಂಶ ವಿವರ