

ಹರಿಹರ: ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯದ ಹರಿಕಾರರು ಎಂದು ಮುಖ್ಯಶಿಕ್ಷಕ ಬಿ.ಬಿ.ರೇವಣ್ಣನಾಯ್ಕ ಅಭಿಪ್ರಾಯಪಟ್ಟರು.
ನಗರದ ಗುರುಭವನದಲ್ಲಿ ತಾಲೂಕು ಆಡಳಿತ, ತಾಪಂ, ನಗರಸಭೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ದಿ. ಡಿ.ದೇವರಾಜ್ ಅರಸು ಅವರ 108ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ರಾಜ್ಯದಲ್ಲಿ ಸುಧಾರಣೆ ತರಲು ಶೈಕ್ಷಣಿಕ, ತಂತ್ರಜ್ಞಾನ ಹೊಂದಿದ ಮಂತ್ರಿ ಮಂಡಲ ರಚಿಸಿಕೊಂಡ ಅವರು ಹಲವಾರು ಕ್ರಾಂತಿಕಾರಕ ನಿರ್ಧಾರಗಳನ್ನು ತಮ್ಮ ಅಧಿಕಾರಾವಧಿಯಲ್ಲಿ ಮಾಡಿದ್ದಾರೆ ಎಂದರು.
ತಹಸೀಲ್ದಾರ್ ಪೃಥ್ವಿ ಸಾನಿಕಂ ಮಾತನಾಡಿ, ದೇವರಾಜ ಅರಸು ಹಿಂದುಳಿದ ವರ್ಗಗಳ ಮತ್ತು ಬಡವರ ಧ್ವನಿಯಾಗಿದ್ದರು. ಸಮಾಜದ ಕೆಳವರ್ಗದ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ ವಿಶಿಷ್ಟ ಮುಖ್ಯಮಂತ್ರಿ ಎಂದರು.
ಹಿಂದುಳಿದ ವರ್ಗಗಳ ಸಮಾನ ಮನಸ್ಕರ ವೇದಿಕೆಯ ಅಧ್ಯಕ್ಷ ಜಿ.ಎಚ್.ಮರಿಯೋಜಿರಾವ್ ಮಾತನಾಡಿ, ನಾಡಿನ ಧೀಮಂತ ನಾಯಕರ ಪರಿಚಯವನ್ನು ಇಂದಿನ ವಿದ್ಯಾರ್ಥಿಗಳಿಗೆ ತಲುಪಿಸುವಲ್ಲಿ ಸಮಾಜದ ಜನಪ್ರತಿನಿಧಿಗಳು, ತಾಲೂಕು ಆಡಳಿತ ನಗರದ ಪ್ರಮುಖ ರಸ್ತೆ, ಉದ್ಯಾನಗಳಿಗೆ ಅವರ ಹೆಸರು ಇಡಬೇಕೆಂದು ಮನವಿ ಮಾಡಿದರು.
ನಗರಸಭೆ ಅಧ್ಯಕ್ಷೆ ನಿಂಬಕ್ಕ ಚಂದಾಪುರ, ಬಿಇಒ ಎಂ.ಹನುಮಂತಪ್ಪ, ಸಮಾಜ ಕಲ್ಯಾಣ ಇಲಾಖೆಯ ನಸ್ರುದ್ದಿನ್, ಹಿಂದುಳಿದ ವರ್ಗಗಳ ಇಲಾಖೆಯ ತಾಲೂಕು ಕಲ್ಯಾಣಾಧಿಕಾರಿ ನುಸ್ರತ್ ಪರ್ವೀನ್, ಲೋಕೋಪಯೋಗಿ ಇಲಾಖೆಯ ಎಇಇ ಶಿವಮೂರ್ತಿ, ಡಾ. ಸಿದ್ದೇಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ.ಕೆ.ಭೂಮೇಶ್, ಕಾರ್ಮಿಕ ಮುಖಂಡ ಎಚ್.ಕೆ.ಕೊಟ್ರಪ್ಪ ಇತರರಿದ್ದರು.