

ಸಿಂದಗಿ: ದೀನ ದಲಿತರ ಆಶಾಕಿರಣರಾಗಿದ್ದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಜೀವನ ನಾಡಿನ ಬಡವರ ಪಾಲಿಗೆ ಮುಡುಪಾಗಿತ್ತು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ತಾಲೂಕು ಆಡಳಿತ ಸೌಧದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ 108ನೇ ಜನ್ಮ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯದ ಹಿರಿಯ ನಾಯಕರೊಂದಿಗೆ ನಡೆದ ದಿ. ಅರಸು ಅವರು ಸದಾ ಬಡವರ ಪರವಾಗಿ ನಿಲ್ಲುವಲ್ಲಿ ಎಲ್ಲ ನಾಯಕರಿಗಿಂತಲೂ ಒಂದು ಹೆಜ್ಜೆ ಮುಂದಡಿಯಿಟ್ಟಿದ್ದರು. ನಾಡಿನ ಕಟ್ಟಕಡೆಯ ಬಡವನಿಗೂ ಸರ್ಕಾರದ ಸಹಾಯ, ಸೌಲಭ್ಯಗಳನ್ನು ಒದಗಿಸುವ ಮೂಲಕ ಅವರ ಶ್ರೇಯೋಭಿವೃದ್ಧಿಗೆ ಶ್ರಮಿಸಿದರು. ಅವರ ಆಡಳಿತ ಮತ್ತು ರಾಜಕಾರಣದ ನಡೆಗಳನ್ನು ಇಂದಿನ ಪೀಳಿಗೆಯ ರಾಜಕಾರಣಿಗಳು ಅಳವಡಿಸಿಕೊಂಡು ಅನುಸರಿಸಬೇಕು ಎಂದರು.
ಕಲಬುರ್ಗಿ ಜಿಲ್ಲೆ ಯಡ್ರಾಮಿ ತಾಲೂಕಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಶಿವಕುಮಾರ ಎಚ್., ಮಾತನಾಡಿ, ಅರಸು ಅವರು ಜಾರಿಗೆ ತಂದಿರುವ ಬಹುತೇಕ ಯೋಜನೆಗಳು ಬಡವರ ಪಾಲಿಗೆ ಅಮೃತವಾಗಿದ್ದವು. ಪ್ರತಿ ಬಡವನ ಕಷ್ಟ ಅರಿತವರಾಗಿದ್ದ ಅವರು ಎಲ್ಲ ಬಡವರ್ಗಗಳಿಗೆ ಆಸರೆಯಾಗಿದ್ದ ಆದರ್ಶ ರಾಜಕಾರಣಿಯಾಗಿದ್ದರು ಎಂದರು.
ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಪ್ರದೀಪ ಹಿರೇಮಠ, ಸದ್ಭಾವನ ದಿನ ಕುರಿತು ಪ್ರತಿಜ್ಞಾವಿಧಿ ಬೋಧಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಶಿವಲೀಲಾ ಕೊಣ್ಣೂರ ಪ್ರಾಸ್ತಾವಿಕವಾಗಿ ಮಾತನಾಡಿದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯದ 2022-23ರ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಅರಸು ಅವರ ಜನ್ಮದಿನ ಪ್ರಯುಕ್ತ ಹಮ್ಮಿಕೊಂಡಿದ್ದ ಕ್ರೀಡಾ ಚಟುವಟಿಕೆಗಳಲ್ಲಿ ಗೆಲುವು ಸಾಧಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಈ ವೇಳೆ ಬಾಬು ರಾಠೋಡ, ತಾಲೂಕು ವಿಸ್ತರಣಾಧಿಕಾರಿ ಗಿರೀಶ ಕಟಕದೊಂಡ, ಸಿಪಿಐ ಡಿ. ಹುಲಗಪ್ಪ, ವೈ.ಸಿ. ಮಯೂರ, ಖಜಾನೆ ಅಧಿಕಾರಿ ಎ.ಎಸ್. ಅಮಲಿ, ಕಂದಾಯ ಆಧಿಕಾರಿ ಜಿ.ಎಸ್. ರೋಡಗಿ, ಐ.ಎಂ. ಮಕಾಂದಾರ, ಮಹಾಂತಯ್ಯ ಮಠಪತಿ, ಅಶೋಕ ಕಾಜೂರ, ನಾನಾಗೌಡ ಸಿದ್ಧರೆಡ್ಡಿ, ಸಂಗನಗೌಡ ಪಾಟೀಲ, ಮಹಿಬೂಬ ಚಟ್ಟರಕಿ, ಸೈಪನ್‌ಮುಲಕ ಮುಲ್ಲಾ, ಪ್ರಭಾಕರ ಬಿರಾದಾರ, ದ್ಯಾವಪ್ಪ ಯಂಕಂಚಿ, ಸಾವಿತ್ರಿ ಬಿರಾದಾರ, ನಂದಾಜ್ಯೋತಿ ನಾಶಿ, ವಿಜಯಲಕ್ಷ್ಮಿ ಹದಗಲ್ಲ, ನೂರಜಾನ್ ಬಟಗಿ, ಕಲ್ಲು ಲೋಗಾವಿ, ನಂದಪ್ಪ ಅನಗೊಂಡ, ಕಚೇರಿ ಸಿಬ್ಬಂದಿ ಸುನೀಲ ನಾಟಿಕಾರ, ಜಟ್ಟೆಪ್ಪ ಹೆಳವರ, ನಿಂಗು ದಶವಂತ ಇತರರಿದ್ದರು.