

ಮೈಸೂರು: ಜನಪರ ಆಡಳಿತ ನೀಡಿರುವ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಹೆಸರನ್ನು ಶಾಶ್ವತವಾಗಿ ಉಳಿಸುವಂತಹ ಕೆಲಸಗಳು ಆಗುತ್ತಿಲ್ಲ ಎಂದು ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಕಳವಳ ವ್ಯಕ್ತಪಡಿಸಿದರು.
ಅನ್ವೇಷಣಾ ಸೇವಾ ಟ್ರಸ್ಟ್ ಹಾಗೂ ಅರಸು ಜಾಗೃತಿ ಅಕಾಡೆಮಿ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ನಗರದ ಇಂಜಿನಿಯರ್‌ಗಳ ಸಂಸ್ಥೆಯ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಡಿ.ದೇವರಾಜ ಅರಸು ಜಯಂತಿ, ಸಾಧಕರಿಗೆ ‘ಧ್ವನಿ ಕೊಟ್ಟ ಧಣಿ’ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ತುರ್ತು ಪರಿಸ್ಥಿತಿ ಸಂದರ್ಭದ ಬಳಿಕ ದೇಶದ ಎಲ್ಲೆಡೆ ಕಾಂಗ್ರೆಸ್ ಸೋತರೂ ಕರ್ನಾಟಕದಲ್ಲಿ ಅದು ಜಯ ಸಾಧಿಸಲು ಅರಸು ಆಡಳಿತ ಕಾರಣವಾಗಿತ್ತು. ತುರ್ತು ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಳ್ಳದೇ ಅದನ್ನು ಬಡವರ ಪರವಾಗಿ ಬಳಕೆ ಮಾಡಿ ಜನಪರ ಕಾನೂನುಗಳನ್ನು ಜಾರಿಗೆ ತಂದರು. ಇಂದಿಗೂ ದೇಶದ ಚರಿತ್ರೆಯಲ್ಲಿ ದಾಖಲಾಗಿದೆ. ಆದರೆ, ವಿಧಾನಸೌಧದಲ್ಲಿ ಪ್ರತಿಮೆ ಸ್ಥಾಪನೆ ಮಾಡಿದ್ದನ್ನು ಬಿಟ್ಟರೆ ಅರಸು ಸ್ಮರಣೆ ಕಾರ್ಯಕ್ರಮಗಳು ಆಗುತ್ತಿಲ್ಲ ಎಂದರು.
ಅರಸು ಕೇವಲ ಒಂದು ಜನಾಂಗದ ನಾಯಕರಲ್ಲ. ಸರ್ವ ಸಮುದಾಯದ ಅಭಿವೃದ್ಧಿಯ ಹರಿಕಾರರು. ಎಲ್ಲರಿಗೂ ಸಾಮಾಜಿಕ ನ್ಯಾಯವನ್ನು ಕಲ್ಪಿಸಿಕೊಟ್ಟ ಉತ್ತಮ ಆಡಳಿತಗಾರ. ಅವರು ಒಂದು ಜನಾಂಗದ ನಾಯಕರಾಗಿ ಎಂದಿಗೂ ಗುರುತಿಸಿಕೊಳ್ಳಲಿಲ್ಲ. ಸಮಾಜದಲ್ಲಿ ತುಳಿತಕ್ಕೆ ಒಳಗಾದ ಜನರನ್ನು ಗುರುತಿಸಿ ಪ್ರೋತ್ಸಾಹಿಸುವಲ್ಲಿ ಅರಸು ಮುಂಚೂಣಿಯಲ್ಲಿದ್ದರು. ಇದರಿಂದಾಗಿ ರಾಜಕೀಯವಾಗಿ ಅನೇಕರು ಸ್ಥಾನಮಾನ ಹೊಂದಲು ಸಾಧ್ಯವಾಯಿತು ಎಂದರು.
ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಮಾತನಾಡಿ, ದೇವರಾಜ ಅರಸು ಅವರು ಬಡವರು, ದೀನದಲಿತರು, ದುರ್ಬಲರು, ಅಸಂಘಟಿತ ಕಾರ್ಮಿಕರು, ಮಹಿಳೆಯರು, ರೈತರಿಗೆ ಅನುಕೂಲ ಆಗುವಂತಹ ಅನೇಕ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಜಾರಿಗೊಳಿಸಿದರು. ಅವರು ಒಂದು ಸಮುದಾಯದ ಪರ ಕೆಲಸ ಮಾಡಲಿಲ್ಲ.
ಎಲ್ಲ ವರ್ಗದವರಿಗೆ ಪ್ರಯೋಜನ ಆಗುವಂತಹ ಕಾರ್ಯಕ್ರಮ ರೂಪಿಸಿ ಮಾದರಿ ಎನಿಸಿಕೊಂಡರು. ಜೀತ ಪದ್ಧತಿ ನಿರ್ಮೂಲನೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ರೈತರಿಗೆ ಸಾಲ ಸೌಲಭ್ಯ ನೀಡಿದರು. ಮಲ ಹೊರುವ ಪದ್ಧತಿಯನ್ನೂ ನಿಷೇಧಿಸಿದರು. ಭೂ ಸುಧಾರಣಾ ಕಾಯ್ದೆ ಜಾರಿಗೆ ತಂದರು ಎಂದು ಸ್ಮರಿಸಿದರು.
ಕೆಪಿಎಸ್‌ಸಿ ಸದಸ್ಯ ಎಚ್.ಜಿ.ಪವಿತ್ರ, ನೇತ್ರ ಚಿಕಿತ್ಸಾ ತಜ್ಞೆ ಕೆ.ಅನಸೂಯ ಗೋಪಾಲ್, ಛಾಯಾಚಿತ್ರಗಾರ ಅನುರಾಗ್ ಬಸವರಾಜ್, ಹೋಟೆಲ್ ಮಾಲೀಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾರಾಯಣ ವಿ.ಹೆಗಡೆ, ಸಾಹಿತಿ ಎಸ್.ಉಮೇಶ್, ಉದ್ಯಮಿ ದೀಪಕ್ ಅರಸ್ ಅವರಿಗೆ ಧ್ವನಿ ಕೊಟ್ಟ ಧಣಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕುವೆಂಪು ಭಾಷಾ ಭಾರತಿ ಮಾಜಿ ಅಧ್ಯಕ್ಷ ಡಾ.ಪ್ರಧಾನ ಗುರುದತ್, ಜಿಲ್ಲಾ ಸಣ್ಣ ಕೈಗಾರಿಕಾಗಳ ಸಂಘದ ಅಧ್ಯಕ್ಷ ಎ.ಎಸ್.ಸತೀಶ್, ಟ್ರಸ್ಟ್‌ನ ಎಂಜಿಆರ್ ಅರಸ, ಎಚ್.ಎಂ.ಟಿ.ಲಿಂಗರಾಜೇ ಅರಸ್, ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್ ಸೇರಿದಂತೆ ಇದ್ದರು.