

ಹಾಸನ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅರಸೀಕೆರೆಯಲ್ಲಿ ಲಿಂಗಾಯತ ಸಮುದಾಯಕ್ಕೆ ಟಿಕೆಟ್ ಕೊಡದೆ ಇರುವ ಕಾರಣ ಜಿಲ್ಲೆಯ ಇತರ ಆರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಸೋಲಬೇಕಾಯಿತು ಎಂದು ಮಾಜಿ ಸಚಿವ ಬಿ. ಶಿವರಾಂ ಆರೋಪಿಸಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲಲು ಜಾತ್ಯತೀತ ನಿಲುವು ತೆಗೆದುಕೊಳ್ಳದೆ ಇರುವುದು ಕಾರಣ. ಅರಸೀಕೆರೆ ಕ್ಷೇತ್ರದಲ್ಲಿ ಲಿಂಗಾಯತರಿಗೆ ಟಿಕೆಟ್ ಕೊಡಬೇಕಿತ್ತು. ಆದರೆ ಒಕ್ಕಲಿಗ ಸಮುದಾಯಕ್ಕೆ ಕೊಟ್ಟಿದ್ದರಿಂದ ಅರಸೀಕೆರೆಯಲ್ಲಿ ಮಾತ್ರ ಗೆದ್ದು ಬೇರೆ ಕಡೆ ಸೋಲಬೇಕಾಯಿತು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ 28 ಕ್ಷೇತ್ರಗಳಲ್ಲೂ ಗೆಲ್ಲಬೇಕು ಎಂಬುದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಗುರಿಯಾಗಿದೆ. ಗೆಲುವಿಗೆ ಏನೂ ಮಾಡಬೇಕು ಅದನ್ನು ಮಾಡುತ್ತಿದ್ದೇವೆ. ಲೋಕಸಭೆ ಚುನಾವಣೆಯಲ್ಲಿ ಶಿವಲಿಂಗೇಗೌಡರಿಗೆ ಜನಾಭಿಪ್ರಾಯ ಇದೆ ಅಂತ ಅವರ ಹೆಸರು ಹೇಳಿದ್ದೇನೆ. ಅಭ್ಯರ್ಥಿ ಆಯ್ಕೆಗೆ ಮಾರ್ಗ ಅನುಸರಿಸಬೇಕು ಎಂದು ಹೇಳಿದರು.
ಪಕ್ಷದಲ್ಲಿ ಈಗ ಇರುವ ಆಕಾಂಕ್ಷಿಗಳೆಲ್ಲರೂ ಸಮರ್ಥ ಅಭ್ಯರ್ಥಿಗಳಲ್ಲ. ಸಮರ್ಥ ಅಭ್ಯರ್ಥಿ ಶಿವಲಿಂಗೇಗೌಡ. ಅವರು ಜೆಡಿಎಸ್ ನಿಂದ ಬಂದವರು, ಸ್ವ-ಸಾಮರ್ಥ್ಯದಿಂದ ಗೆದ್ದಿದ್ದಾರೆ ಅನ್ನುತ್ತಾರೆ. ನಾನು ಅವರನ್ನು ಟೀಕೆ ಮಾಡುತ್ತಿಲ್ಲ. ಇರುವವರಲ್ಲಿ ಉತ್ತಮ ಅಂತ ಶಿವಲಿಂಗೇಗೌಡರ ಹೆಸರು ಹೇಳುತ್ತಿದ್ದೇನೆ. ಬಿಜೆಪಿ-ಜೆಡಿಎಸ್ ಒಂದಾಗಿದೆ. ನಾವು ಗ್ಯಾರಂಟಿ ಮೇಲೆ ಚುನಾವಣೆ ಮಾಡಬೇಕಿದೆ. ನಾನು ಈ ವಿಚಾರದಲ್ಲಿ ಗೊಂದಲ ಸೃಷ್ಟಿಸುತ್ತಿಲ್ಲ. ಅವರು ಹಾಗೆ ಅಂದುಕೊಳ್ಳಬಾರದು. ಕಾಂಗ್ರೆಸ್‌ನವರು ಪ್ರಧಾನಿ ಆಗಬೇಕೆಂದರೆ ಒಂದೊಂದು ಕ್ಷೇತ್ರವೂ ಅತೀ ಮುಖ್ಯ ಎಂದರು.
ಪ್ರಬಲ ಆಕಾಂಕ್ಷಿ ಆಗಿದ್ದ ಶಶಿಧರ್ ಅವರಿಗೆ ಟಿಕೆಟ್ ತಪ್ಪಿಸಿ ಸರ್ಕಾರ ಬಂದರೆ ನಿಗಮ ಮಂಡಳಿ ಸ್ಥಾನ ಕೊಡುತ್ತೇವೆ ಎಂದು ಸಿದ್ದರಾಮಯ್ಯ ಹಾಗು ಶಿವಕುಮಾರ್ ಇಬ್ಬರೂ ಹೇಳಿದ್ದರು. ಆದರೆ ಇಲ್ಲಿಯವರೆಗೂ ನೀಡಿಲ್ಲ. ಕೊಟ್ಟ ಮಾತಿನಂತೆ ನಡೆದುಕೊಂಡರೆ ಮಾತ್ರ ಜನರು ನಮ್ಮನ್ನು ನಂಬುತ್ತಾರೆ. ಹಿಂದುಳಿದ ವರ್ಗ ಕೂಡ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಅವರಿಗೂ ಸ್ಥಾನಮಾನ ನೀಡಿದರೆ ಅನುಕೂಲ. ರಾಜ್ಯದಲ್ಲಿ ಕಾಂಗ್ರೆಸ್‌ಗೆ ಪೂರಕ ವಾತಾವರಣ ಇದೆ. ಆದರೆ ಹಾಸನದಲ್ಲಿ ಪರಿಸ್ಥಿತಿ ಭಿನ್ನವಾಗಿದೆ. ಇದನ್ನು ನಾಯಕರು ಅರ್ಥ ಮಾಡಿಕೊಳ್ಳಬೇಕು ಎಂದು ಪಕ್ಷದ ಬಗ್ಗೆ ಅಸಮಾಧಾನ ಹೊರಹಾಕಿದರು.
ಶಿವಲಿಂಗೇಗೌಡರು ಕಾಂಗ್ರೆಸ್‌ಗೆ ಬಂದು ಎಂಟು ತಿಂಗಳಾಯ್ತು. ನಾನು 47 ವರ್ಷಗಳಿಂದ ಇದ್ದೇನೆ. ನಾನು ಬೇರೆಯವರ ರೀತಿ ವಲಸೆ ಹೋಗಿಲ್ಲ. ಹೈಕಮಾಂಡ್ ತಪ್ಪಿನಿಂದ ಜೆಡಿಎಸ್ ಜತೆಗೆ ಹೋಗಿ ದಿಕ್ಕು ತಪ್ಪಿದ್ದೇವೆ. ಜಿಲ್ಲೆಯಲ್ಲಿ ಇರುವ ಉಸ್ತುವಾರಿ, ವೀಕ್ಷಕರು ಯಾವ ತಾಲೂಕಿಗು ಭೇಟಿ ನೀಡಿಲ್ಲ. ಎಲ್ಲೋ ಕುಳಿತು ಅಭ್ಯರ್ಥಿ ಘೋಷಿಸಿದರೆ ಚುನಾವಣೆ ಗೆಲ್ಲುವುದು ಸುಲಭವಲ್ಲ ಎಂದು ಹೇಳಿದರು.