ಅರಸೀಕೆರೆಯಲ್ಲಿ ಮಂಕಾದ ಕೈ ಪಡೆ!

ಅರಸೀಕೆರೆಯಲ್ಲಿ ಮಂಕಾದ ಕೈ ಪಡೆ!
Published on

ಅರಸೀಕೆರೆ: ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಅರಸೀಕೆರೆ ವಿಧಾನಸಭಾ ಕ್ಷೇತ್ರದ ಮೇಲೆ ಹಿಡಿತ ಸಾಧಿಸಲು ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಸಭೆ, ಸಮಾರಂಭ, ಮಹಿಳಾ ಸಮಾವೇಶ ಆಯೋಜಿಸಿ ಶಕ್ತಿ ಪ್ರದರ್ಶನದ ತಂತ್ರಗಾರಿಕೆ ರೂಪಿಸುತ್ತಿದ್ದಾರೆ. ಆದರೆ ಕಾಂಗ್ರೆಸ್‌ನಲ್ಲಿ ಮಾತ್ರ ಯಾವುದೇ ಚಟುವಟಿಕೆ ಕಂಡು ಬರುತ್ತಿಲ್ಲ. ವಿಜಯ ಸಂಕಲ್ಪ ಯಾತ್ರೆ ಮೂಲಕ ಬಿಜೆಪಿ ಕ್ಷೇತ್ರಾದ್ಯಂತ ಅಬ್ಬರದ ಪ್ರಚಾರ ನಡೆಸುತ್ತಿದ್ದರೆ, ಜೆಡಿಎಸ್ ಕಳೆದ ಫೆ.12 ರಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಸೇರಿದಂತೆ ದಳಪತಿಗಳ ನೇತೃತ್ವದಲ್ಲಿ ಬೃಹತ್ ಸ್ವಾಭಿಮಾನಿ ಸಮಾವೇಶ ನಡೆಸಿ ತನ್ನ ಸಾಮರ್ಥ್ಯ ತೊರಿದೆ. ಆದರೆ ಕೈ ಮುಖಂಡರು ಮಾತ್ರ ತಮಗೂ ಚುನಾವಣೆಗೂ ಸಂಬಂಧವೇ ಇಲ್ಲ ಎನ್ನುವಂತೆ ಕೈಕಟ್ಟಿ ಕುಳಿತಿರುವಂತಿದೆ.


ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಸನದಲ್ಲಿ ಹಮ್ಮಿಕೊಂಡಿದ್ದ ಪ್ರಜಾಧ್ವನಿ ಯಾತ್ರೆಗೆ ಅರಸೀಕೆರೆ ಕ್ಷೇತ್ರದಿಂದ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ತೆರಳಿದ್ದನ್ನು ಬಿಟ್ಟರೆ ಕ್ಷೇತ್ರದಲ್ಲಿ ಪಕ್ಷದ ಚಟುವಟಿಕೆ ಸಂಪೂರ್ಣ ಸ್ತಬ್ಧವಾಗಿದೆ. ಶಾಸಕ ಕೆ.ಎಂ. ಶಿವಲಿಂಗೇಗೌಡ ತೆನೆ ಇಳಿಸಿ ಕೈ ಹಿಡಿಯಲಿದ್ದಾರೆ ಎನ್ನುವ ವರಿಷ್ಠರ ಸೂಚನೆ ಇಂತಹ ಬೆಳವಣಿಗೆಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಇದರಿಂದಾಗಿ ಟಿಕೆಟ್ ಗಿಟ್ಟಿಸಲು ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದ ಗಂಡಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೆಟ್ರೋ ಬಾಬು ಹಾಗೂ ಜಿ.ಸಿ. ಗೋವರ್ಧನ್ ಕೂಡಾ ಮೌನಕ್ಕೆ ಶರಣಾಗಿದ್ದಾರೆ. ಶಾಸಕ ಕೆ.ಎಂ. ಶಿವಲಿಂಗೇಗೌಡ ಸಂಕ್ರಾಂತಿ ಬಳಿಕ ಮುಂದಿನ ರಾಜಕೀಯ ನಿಲುವು ಪ್ರಕಟಿಸುವುದಾಗಿ ಹೇಳಿದ್ದರು. ಆದರೆ ಸಂಕ್ರಾಂತಿ ಕಳೆದು ಯುಗಾದಿ ಹತ್ತಿರ ಬರುತ್ತಿದ್ದರೂ ಶಾಸಕರು ಯಾವುದೇ ನಿರ್ಧಾರ ಪ್ರಕಟಿಸದಿರುವುದು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರಿಗೆ ನುಂಗಲಾರದ ಬಿಸಿತುಪ್ಪವಾಗಿ ಪರಿಣಮಿಸಿದೆ.


ಜೆಡಿಎಸ್ ಟಿಕೆಟ್ ದೊರೆಯುವ ಸುಳಿವು ಪಡೆದಿರುವ ಕುರುಬ ಸಮುದಾಯದ ಪ್ರಭಾವಿ ಮುಖಂಡ, ಜಿಪಂ ಮಾಜಿ ಸದಸ್ಯ ಬಾಣಾವರ ಅಶೋಕ್ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಕ್ಷೇತ್ರ ವ್ಯಾಪ್ತಿಯಲ್ಲಿ ಮಿಂಚಿನ ಪ್ರವಾಸ ಕೈಗೊಂಡಿದ್ದು ಪಕ್ಷ ಸಂಘಟನೆಗೆ ಮತ್ತಷ್ಟು ವೇಗ ನೀಡುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಅಲ್ಲದೆ, ಶಾಸಕ ಕೆ.ಎಂ. ಶಿವಲಿಂಗೇಗೌಡ ಮತ್ತವರ ಬೆಂಬಲಿಗರ ಹಿಡಿತದಲ್ಲಿರುವ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರನ್ನು ತಮ್ಮ ತೆಕ್ಕೆಗೆ ಸೆಳೆದುಕೊಳ್ಳುವ ಪ್ರಯತ್ನ ಚುರುಕುಗೊಳಿಸಿದ್ದು ತಾಪಂ ಮಾಜಿ ಸದಸ್ಯರಾದ ಹೊಸೂರು ಗಂಗಾಧರ್ ಮತ್ತು ಬಸವಲಿಂಗಪ್ಪ ನೇತೃತ್ವದಲ್ಲಿ ಯಡವನಹಳ್ಳಿ ಗ್ರಾಪಂ ಅಧ್ಯಕ್ಷ ನವೀನ್ ಕುಮಾರ್ ಅವರಿಗೆ ಗಾಳ ಹಾಕಿ ಯಶ ಕಂಡಿದ್ದಾರೆ. ಜತೆಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ರೈತರಿಗೆ ಸಾಲ ಕೊಡಿಸಿ ಜೆಡಿಎಸ್ ಬೇರು ಮತ್ತಷ್ಟು ಗಟ್ಟಿಗೊಳಿಸಲು ಸಜ್ಜಾಗಿದ್ದಾರೆ.


ದಶಕಗಳ ಬಳಿಕ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಸುರಿದ ಉತ್ತಮ ಮಳೆಗೆ ತಾಲೂಕಿನ ಬಹುತೇಕ ಕೆರೆಗಳು ಸಂಪೂರ್ಣ ಭರ್ತಿಯಾಗಿದ್ದು ಜೀವಕಳೆ ಪಡೆದುಕೊಂಡಿರುವುದರಿಂದ ಬಿಜೆಪಿ ಮುಖಂಡ ಎನ್.ಆರ್. ಸಂತೋಷ್, ಪಕ್ಷದ ಗ್ರಾಮಾಂತರ ಮಂಡಲದ ಅಧ್ಯಕ್ಷ ದುಮ್ಮೇನಹಳ್ಳಿ ರಮೇಶ್, ನಗರಾಧ್ಯಕ್ಷ ಪುರುಷೋತ್ತಮ್ ಸೇರಿದಂತೆ ಹಲವು ಮುಖಂಡರ ಸಹಕಾರದೊಂದಿಗೆ ಕೆರೆಗಳಿಗೆ ಬಾಗಿನ ಬಿಡುವುದರ ಜತೆಗೆ ತಾಯಂದಿರಿಗೆ ಹರಿಶಿನ, ಕುಂಕುಮ, ಮಡಿಲಕ್ಕಿ ತುಂಬುಬ ಮೂಲಕ ಜನರಿಗೆ ಹತ್ತಿರವಾಗಲು ಯತ್ನಿಸುತ್ತಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಸೂಚನೆಯಂತೆ ಜನಸಂಕಲ್ಪ ಯಾತ್ರೆಗೂ ಚಾಲನೆ ನೀಡಿದ್ದು, ಜನಮನಗೆಲ್ಲುವ ಕಸರತ್ತು ಬಿರುಸುಗೊಳಿಸಿದ್ದಾರೆ. ಇದಕ್ಕೆ ಪೂರಕ ಎನ್ನುವಂತೆ ಭಾನುವಾರ ಕಸಬಾ ಹೋಬಳಿ ವ್ಯಾಪ್ತಿಯ ಲಕ್ಷ್ಮೀದೇವರಹಳ್ಳಿ ಗ್ರಾಮದಲ್ಲಿ ಸಾವಿರಾರು ಮಹಿಳೆಯರನ್ನು ಸೇರಿಸಿ ಸಮಾವೇಶ ಮಾಡಿದ್ದಾರೆ. ಈಗಾಗಲೇ ಬೆಳಗುಂಬ, ದುಮ್ಮೇನಹಳ್ಳಿ ಹಾಗೂ ಅಗ್ಗುಂದ ಗ್ರಾಮಗಳಲ್ಲಿ ಎನ್.ಆರ್. ಸಂತೊಷ್ ಸ್ವತಃ ಬುಲೆಟ್ ಏರಿ ಪ್ರಚಾರ ನಡೆಸುತ್ತಿರುವುದು ಕದನ ಕಣ ರಂಗೇರುವಂತೆ ಮಾಡಿದೆ.

‘‘ಭಾರತೀಯ ಸನಾತನ ಸಂಸ್ಕೃತಿ ಉಳಿಸುವ ಜತೆಗೆ ಧಾರ್ಮಿಕ ಪರಂಪರೆ ಎತ್ತಿ ಹಿಡಿಯುವ ಉದ್ದೇಶದಿಂದ ಕೆರೆಗಳು ತುಂಬಿ ಕೋಡಿ ಹರಿದ ಬಳಿಕ ಬಾಗಿನ ಬಿಡುವುದರ ಜತೆಗೆ ಮಹಿಳೆಯರಿಗೆ ಮಡಿಲಕ್ಕಿ, ಹರಿಶಿನ, ಕುಂಕುಮ ನೀಡಲಾಗುತ್ತಿದೆ. ಇದನ್ನೇ ತಪ್ಪಾಗಿ ಅರ್ಥೈಸಿಕೊಂಡಿರುವ ಕೆಲವರು ನನ್ನ ವಿರುದ್ಧ ಜನರನ್ನು ಎತ್ತಿಕಟ್ಟಿ ಗಲಾಟೆ ಮಾಡಿಸುವ ಕೆಲಸಕ್ಕೆ ಮುಂದಾಗಿದ್ದು, ಅಂತಹವರಿಗೆ ಭಗವಂತ ಸದ್ಬುದ್ಧಿ ಕೊಡಲಿ ಎಂದು ಪ್ರಾರ್ಥಿಸುತ್ತೇನೆ.’’

ಎನ್.ಆರ್. ಸಂತೋಷ್, ಬಿಜೆಪಿ ಮುಖಂಡ, ಅರಸೀಕೆರೆ.

‘‘ಕೆ.ಎಂ. ಶಿವಲಿಂಗೇಗೌಡ ಈಗ ಜೆಡಿಎಸ್ ತೊರೆದು ಕಾಂಗ್ರೆಸ್‌ಗೆ ಹೋಗಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡುವ ಅಗತ್ಯವಿಲ್ಲ. ಏಕೆಂದರೆ ಅವರು ಈಗಾಗಲೇ ಒಂದು ಬಾರಿ ಸಿಎಂ ಆಗಿ ಅಧಿಕಾರ ನಡೆಸಿದ್ದಾರೆ. ಶಿವಲಿಂಗೇಗೌಡರ ಲೆಕ್ಕಾಚಾರದಂತೆ ಕ್ಷೇತ್ರದಲ್ಲಿ ಅಹಿಂದ ಮತಗಳು ಕಾಂಗ್ರೆಸ್‌ಗೆ ಲಭಿಸುವುದಾಗಿದ್ದರೆ ಹಿಂದಿನ ಮೂರು ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಏಕೆ ಸೋಲಾಯಿತು ಎಂಬ ಪ್ರಶ್ನೆಗೆ ಉತ್ತರ ನೀಡಬೇಕು. ಹಿಂದಿನಂತೆ 2023ರ ವಿಧಾನಸಭಾ ಚುನಾವಣೆಯಲ್ಲೂ ಕ್ಷೇತ್ರದ 80 ಸಾವಿರಕ್ಕೂ ಹೆಚ್ಚಿನ ಅಹಿಂದ ಮತಗಳು ಜೆಡಿಎಸ್ ಪರ ಚಲಾವಣೆಯಾಗಲಿದ್ದು ಫಲಿತಾಂಶ ಕಾದು ನೋಡಿ.’’

ಬಾಣಾವರ ಅಶೋಕ್, ಜಿಪಂ ಮಾಜಿ ಸದಸ್ಯ, ಜೆಡಿಎಸ್ ಮುಖಂಡ.

‘‘ಸತತ ಮೂರು ಬಾರಿಯೂ ಬುದ್ಧಿವಂತಿಕೆ ರಾಜಕಾರಣ ಮಾಡುತ್ತಿರುವ ಶಾಸಕ ಕೆ.ಎಂ. ಶಿವಲಿಂಗೇಗೌಡರ ಆಟ ಕಾಂಗ್ರೆಸ್‌ನಲ್ಲಿ ನಡೆಯುವುದಿಲ್ಲ. ಗ್ರಾಪಂ ಮಟ್ಟದಲ್ಲಿ ನಾವೂ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದು ಕೈಕಟ್ಟಿ ಕೂರುವ ಪ್ರಶ್ನೆಯೇ ಇಲ್ಲ. ಚುನಾವಣೆಯಲ್ಲಿ ಪಕ್ಷೇತರ ನಿಂತರೂ ಗೆದ್ದು ಬರುತ್ತೇನೆಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ಹೇಳಿಕೆ ನೀಡುತ್ತಿರುವುದನ್ನು ಹೈಕಮಾಂಡ್ ಗಂಭೀರವಾಗಿ ಪರಿಗಣಿಸಬೇಕು. ಅವರು ಪಕ್ಷ ಸೇರುತ್ತರೋ ಇಲ್ಲವೋ ಎನ್ನುವುದನ್ನು ಶೀಘ್ರ ಖಚಿತಪಡಿಸದಿದ್ದರೆ ಪಕ್ಷಕ್ಕೆ ಹಿನ್ನಡೆ ಕಟ್ಟಿಟ್ಟ ಬುತ್ತಿ.’’

ಮೆಟ್ರೋ ಬಾಬು, ಗಂಡಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net