

ಅರಸೀಕೆರೆ: ನಗರದ ಗಾಂಧಿ ಮೈದಾನದ ಪೆಂಡಾಲ್‌ನಲ್ಲಿ ಪ್ರತಿಷ್ಠಾಪಿಸಲಾಗಿದ್ದ 83ನೇ ವರ್ಷದ ಗಣಪತಿ ವಿಸರ್ಜನೆಗೆ ಶುಕ್ರವಾರ ಸಂಜೆ ಚಾಲನೆ ದೊರೆಯಿತು.
ವೇದ ಘೋಷಗಳೊಂದಿಗೆ ಸರ್ವಾಲಂಕೃತ ಟ್ರಾೃಕ್ಟರ್ ಮೇಲೆ ವಿಘ್ನ ವಿನಾಶಕನನ್ನು ಪ್ರತಿಷ್ಠಾಪಿಸಿ ಮಹಾಮಂಗಳಾರತಿ ಮಾಡುವ ಮೂಲಕ ಮೆರವಣಿಗೆ ಹೊರಟಿತು. ವಾಚನಾಲಯ ರಸ್ತೆ, ಶ್ಯಾನುಭೋಗರ ಬೀದಿ, ಕೆಂಡದ ಗುಂಡಿ, ಶಿವಾಲಯ, ಪೇಟೆ ಬೀದಿ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿಗೆ ಆಗಮಿಸಿತು. ಬಳಿಕ ಹಾಸನ ರಸ್ತೆಯ ಅಯ್ಯಪ್ಪ ಸ್ವಾಮಿ ದೇಗುಲದಿಂದ ರೈಲ್ವೆ ನಿಲ್ದಾಣಕ್ಕೆ ಕರೆತರಲಾಯಿತು. ಮೆರವಣಿಗೆ ಸಾಗುವ ಬಹುತೇಕ ರಸ್ತೆಗಳನ್ನು ತಳಿರು-ತೋರಣಗಳಿಂದ ಸಿಂಗರಿಸಲಾಗಿತ್ತು. ರಾಷ್ಟ್ರೀಯ ಹೆದ್ದಾರಿ ಅಕ್ಕಪಕ್ಕ ನೆರೆದಿದ್ದ ಭಕ್ತರು ಗಣಪತಿಗೆ ಪುಷ್ಪಾರ್ಚನೆ ಮಾಡಿ ಭಕ್ತಿ ಸಮರ್ಪಿಸಿದರು.
ಕರಡೇವು,ಕಹಳೆ, ಡೊಳ್ಳು ಕುಣಿತ, ಚಂಡೆವಾದ್ಯ, ಕೀಲುಕುದುರೆ, ಹುಲಿವೇಷ ಸೇರಿದಂತೆ ಜಾನಪದ ಕಲಾತಂಡಗಳು ಮೆರವಣಿಗೆಗೆ ಮತ್ತಷ್ಟು ರಂಗು ನೀಡಿದ್ದವು. ಚುನಾಯಿತ ಜನಪ್ರತಿನಿಧಿಗಳು, ಗಣಪತಿ ಮಂಡಳಿ ಪದಾಧಿಕಾರಿಗಳು, ಉತ್ಸವ ಸಮಿತಿ ಸದಸ್ಯರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಗಣೇಶೋತ್ಸವವನ್ನು ಸಾಕ್ಷೀಕರಿಸಿದರು.
ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ನೆರೆಯ ತಿಪಟೂರು, ಕಡೂರು, ಬೇಲೂರು ಸೇರಿದಂತೆ ವಿವಿಧೆಡೆಗಳಿಂದ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು. ಡಿ.1ರಂದು ಭಾನುವಾರ ಕಂತೇನಹಳ್ಳಿ ಕೆರೆಯಲ್ಲಿ ವಿಸರ್ಜನಾ ಕಾರ್ಯ ಸಂಪನ್ನಗೊಳ್ಳಲಿದೆ.