ಅರಸೀಕೆರೆ: ರಣ ಮಳೆ ಆರ್ಭಟಕ್ಕೆ ಜನರ ಬದುಕು ಮೂರಾಬಟ್ಟೆ

Published on

ಅರಸೀಕೆರೆ: ತಾಲೂಕಿನ ವಿವಿಧೆಡೆ ಸೋಮವಾರ ರಾತ್ರಿ ಸುರಿದ ಶತಮಾನದ ರಣ ಮಳೆ ಆರ್ಭಟಕ್ಕೆ ಜನತೆ ಬೆಚ್ಚಿ ಬಿದ್ದಿದ್ದು ಜನರ ಬದುಕನ್ನು ಮೂರಾಬಟ್ಟೆ ಮಾಡಿದೆ.ಮಳೆ ನೀರಿನಿಂದ ಅಗತ್ಯ ವಸ್ತುಗಳನ್ನು ರಕ್ಷಿಸಲು ಪರದಾಡುವಂತಾಗಿತ್ತು.ಅರಸೀಕೆರೆ-ಮೈಸೂರು ಸಂಪರ್ಕ ರಸ್ತೆ ತಿರುಪತಿಹಳ್ಳಿ ಹೊರ ವರ್ತುಲ ರಸ್ತೆ ಜಲಾವೃತವಾಗಿದ್ದು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ.ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಕಾರು ಕೊಚ್ಚಿ ಹೋಗಿದೆ. ಅದೃಷ್ಟ ವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ. ಕಾಟೀಕೆರೆ ಗ್ರಾಮದ ಕೆರೆ ಏರಿ ಒಡೆದಿದ್ದು ಕರೆಯಂಚಿನ ಜಮೀನುಗಳು ಜಲಾವೃತವಾಗಿವೆ.ಸಂಕೋಡನಹಳ್ಳಿ,ಕಲ್ಲನಾಯ್ಕನಹಳ್ಳಿ ಗ್ರಾಮದಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದ್ದು ದಿನಬಳಕೆಯ ವಸ್ತುಗಳು ಮಣ್ಣುಪಾಲಾಗಿವೆ.ಕೊಟ್ಟಿಗೆಯಲ್ಲಿ ಕಟ್ಟಿದ ಜಾನುವಾರುಗಳ ಜೀವಕ್ಕೂ ಸಂಚಕಾರ ತಂದಿಟ್ಟಿದೆ.ಕಾಳನಕೊಪ್ಪಲು ಕೆರೆ ಏರಿ ಕುಸಿಯುವ ಆತಂಕ ಎದುರಾಗಿದ್ದು ಮುಂಜಾಗ್ರತಾ ಕ್ರಮವಾಗಿ ಭಾರಿ ವಾಹನಗಳ ಸಂಚಾರ ನಿರ್ಬಂಧಿಸಲಾಗಿದೆ.

ನಗರದ ಮೊದಲಿಯಾರ್ ಬೀದಿ, ಹಾಸನ ರಸ್ತೆ ಬಡಾವಣೆ, ಈಡಿಗರ ಕಾಲೋನಿ,ಲಕ್ಷ್ಮೀಪರ ಬಡಾವಣೆಯ ಹಲವು ಮನೆಗಳಿಗೆ ಜಲಾಸುರ ಹಾವಳಿಯಟ್ಟಿದ್ದು ನೀರು ಹೊರ ಹಾಕಲು ಹರಸಾಹಸ ಪಡುತ್ತಿದ್ದ ದೃಶ್ಯ ಕಂಡುಬಂದಿತು. ರಾಷ್ಟ್ರೀಯ ಹೆದ್ದಾರಿ, ಮೈಸೂರು, ಹಾಸನ ಸಂಪರ್ಕ ರಸ್ತೆ ಅಕ್ಷರಶಃ ಕೆರೆಯಂತಾಗಿದ್ದು ಹಲವು ತಾಸು ಸಂಚಾರ ಸ್ಥಗಿತಗೊಂಡಿತ್ತು. ಅರಸೀಕೆರೆ ನಗರಕ್ಕೆ ನೀರು ಪೂರೈಕೆ ಮಾಡುತ್ತಿದ್ದ ಐತಿಹಾಸಿಕ ತಿಮ್ಮಪ್ಪನಾಯ್ಕನ ಕೆರೆ ಬರೋಬ್ಬರಿ ಹದಿನೈದು ವರ್ಷಗಳ ಬಳಿಕ ಕೋಡಿ ಬಿದ್ದಿದೆ. ಕಲ್ಲನಾಯ್ಕನಹಳ್ಳಿ ಕೆರೆ ಉಕ್ಕಿ ಹರಿದಿದೆ. ಶತಮಾನದ ದಾಖಲೆ ಮಳೆ ಕರೆ,ಕಟ್ಟೆಗಳನ್ನು ಭರ್ತಿ ಮಾಡಿದ ಸಂಭ್ರಮ ಒಂದೆಡೆಯಾದರೆ, ಮತ್ತೊಂದೆಡೆ ಅನ್ನದಾತನ ಬದುಕನ್ನು ಬೀದಿಗೆ ತಳ್ಳಿದೆ. ಸೂರು,ಬೆಳೆ ಕಳೆದುಕೊಂಡ ರೈತರ ನೆರವಿಗೆ ಸರ್ಕಾರ ಧಾವಿಸಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ.

ರೈಲು ನಿಲ್ದಾಣ ಜಲಾವೃತವಾಗಿದ್ದು ಕೆಲ ಕಾಲ ಸಂಚಾರ ಸ್ಥಗಿತಗೊಂಡಿತ್ತು. ಸಾಧನ ಚಿತ್ರ ಮಂದಿರದ ಮುಂಭಾಗದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ವಿದ್ಯಾರ್ಥಿನಿಯರ ಹಾಸ್ಟೆಲ್ ಗೂ ವರುಣನ ಬಿಸಿ ತಟ್ಟಿದೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net