

ಅರಸೀಕೆರೆ: ಚುನಾವಣಾ ಆಯೋಗದ ನಿರ್ದೇಶನದಂತೆ ತಾಲೂಕು ಆಡಳಿತದ ವತಿಯಿಂದ ಜ.5ರಂದು ಅರಸೀಕೆರೆ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿ ಪ್ರಕಟಿಸಲಾಗಿದ್ದು, ಮಹಿಳೆಯರೇ ಪಾರುಪತ್ಯ ಸಾಧಿಸಿದ್ದಾರೆ. ಒಟ್ಟಾರೆ 2,10,126 ಮತದಾರರಿದ್ದು, ಈ ಪೈಕಿ 1,04,724 ಪುರುಷ ಹಾಗೂ 1,05,402 ಮಹಿಳೆಯರು ಮತದಾನದ ಹಕ್ಕು ಹೊಂದಿದ್ದಾರೆ.
ಪ್ರತಿ ಸಾವಿರ ಪುರುಷರಿಗೆ ಒಂದು ಸಾವಿರದ ಆರು ಮಹಿಳೆಯರು ಹೆಸರು ನೋಂದಣಿ ಮಾಡಿಸಿರುವುದು ಮತ್ತೊಂದು ವಿಶೇಷವಾಗಿದೆ. 18ರಿಂದ 19 ವಯೋಮಾನದ 2742 ಯುವಕ, ಯುವತಿಯರು ಮೊದಲ ಬಾರಿಗೆ ಹಕ್ಕು ಚಲಾಯಿಸುವ ಅವಕಾಶ ಪಡೆದುಕೊಂಡಿದ್ದಾರೆ ಎಂದು ತಹಸೀಲ್ದಾರ್ ವಿಭಾ ವಿ. ರಾಥೋಡ್ ತಿಳಿಸಿದ್ದಾರೆ.
ಮತದಾರರ ಪಟ್ಟಿಗೆ ಹೆಸರು ಸೇರಿಸಲು ಆಯೋಗವು ಅವಕಾಶ ನೀಡಿದ್ದು ಮತ್ತೊಂದು ಸುತ್ತಿನ ಪ್ರಚಾರ ಕಾರ್ಯ ಹಮ್ಮಿಕೊಳ್ಳಲಾಗುವುದು. ಹೆಸರು ಬಿಟ್ಟು ಹೋಗಿರುವವರು ಅಥವಾ ಹೊಸದಾಗಿ ಸೇರ್ಪಡೆ ಮಾಡಿಸಿಕೊಳ್ಳ ಬಯಸುವವರು ಸಮೀಪದ ನೋಡೆಲ್ ಕೇಂದ್ರಕ್ಕೆ ತೆರಳಿ ಬಿಎಲ್‌ಒಗಳಿಂದ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ ಎಂದು ರಾಥೋಡ್ ಪತ್ರಿಕೆಗೆ ಪ್ರತಿಕ್ರಿಯಿಸಿದ್ದಾರೆ.