

ಅರಸೀಕೆರೆ: ತಾಲೂಕಿನ ಅಗ್ಗುಂದ ಗ್ರಾಮದಲ್ಲಿ ಸುಮಾರು ಏಳು ನೂರು ವರ್ಷಗಳ ಐತಿಹಾಸಿಕ ಹಿನ್ನೆಲೆಯುಳ್ಳ ಹಳೆಯ ವೀರಗಲ್ಲು ಪತ್ತೆಯಾಗಿದೆ. ಪ್ರಾಧ್ಯಾಪಕ ಡಾ. ಹರೀಶ್ ಕುಮಾರ್ ಅವರು ಕ್ಷೇತ್ರ ಕಾರ್ಯ ನಡೆಸುವಾಗ ಮಣ್ಣಿನಲ್ಲಿ ಮುಚ್ಚಿ ಹೋಗಿದ್ದ 13ನೇ ಶತಮಾನಕ್ಕೆ ಸೇರಿದ ವೀರಗಲ್ಲು ಪತ್ತೆಯಾಗಿದೆ.
ಸಂಶೋಧಕರಾದ ಡಾ. ಹರೀಶ್ ಕುಮಾರ್ ಮಾತನಾಡಿ, ನಾಡಿನಾದ್ಯಂತ ಕಾಣಸಿಗುವ ವೀರಗಲ್ಲುಗಳು ಚಾರಿತ್ರಿಕ ಮಹತ್ವದ ಕುರುಹುಗಳಾಗಿವೆ. ನಾಡು, ನುಡಿ, ಸಂಪತ್ತು, ಮಹಿಳೆ, ಮಕ್ಕಳು, ರಕ್ಷಣೆ, ಗೋವುಗಳ ರಕ್ಷಣೆ ಹೀಗೆ ಬೇರೆ ಬೇರೆ ಕಾರಣಗಳಿಗಾಗಿ ಶತ್ರುಗಳ ವಿರುದ್ಧ ಹೋರಾಟ ಮಾಡಿ ವೀರ ಮರಣ ಹೊಂದಿದ ಶೂರರ ಸ್ಮರಣಾರ್ಥವಾಗಿ ವೀರಗಲ್ಲುಗಳನ್ನು ಕೆತ್ತಿಸುವ ಸಂಪ್ರದಾಯ ನಮ್ಮ ನಾಡಿನಲ್ಲಿ ರೂಢಿಗತವಾಗಿ ಬಂದಿದೆ ಎಂದು ಹೇಳಿದರು.
ಬಳಪದ ಕಲ್ಲಿನ ಈ ವೀರಗಲ್ಲು ಹೊಯ್ಸಳರ ಕಾಲದಲ್ಲಿ ಕೆತ್ತಿಸಿದ್ದಾರೆ. ಇದು ಶಾಸನ ರಹಿತವಾಗಿದ್ದು ಮೂರು ಪಟ್ಟಿಗಳಿಂದ ಕೂಡಿದೆ. ವೀರಗಲ್ಲಿನ ಕೆಳ ಭಾಗದಲ್ಲಿ ವೀರರಿಬ್ಬರು ಹೆಣ್ಣಿನ ಮಾನ ರಕ್ಷಣೆಗಾಗಿ ಶತ್ರುಗಳ ವಿರುದ್ಧ ವೀರಾವೇಷದಿಂದ ಹೋರಾಡುತ್ತಿರುವ ದೃಶ್ಯವನ್ನು ಕೆತ್ತಲಾಗಿದೆ. ಎರಡನೇ ಭಾಗದಲ್ಲಿ ಮರಣವನ್ನಪ್ಪಿದ ವೀರರಿಬ್ಬರನ್ನು ಅಪ್ಸರೆಯರು ದೇವಲೋಕಕ್ಕೆ ಕರೆದೊಯ್ಯುತ್ತಿರುವ ದೃಶ್ಯವನ್ನು ಕೆತ್ತಲಾಗಿದೆ. ಮೂರನೆಯ ಮೇಲ್ಭಾಗದ ಪಟ್ಟಿಯಲ್ಲಿ ಆ ವೀರರಿಬ್ಬರು ಕೈಲಾಸದ ಶಿವನ ಬಳಿಗೆ ಹೋಗಿ ಲಿಂಗಾರ್ಚನೆಯಲ್ಲಿ ತೊಡಗಿರುವ ಸನ್ನಿವೇಶವನ್ನು ಕೆತ್ತಲಾಗಿದೆ ಎಂದು ಮಾಹಿತಿ ನೀಡಿದರು.
ವೀರಗಲ್ಲಿನ ಮೇಲಿನ ಭಾಗ ಮುರಿದಿದೆ. ಮುರಿದ ಭಾಗ ಲಭ್ಯವಾಗಿಲ್ಲ. ಸುಂದರವಾದ ಕೆತ್ತನೆಯ ಈ ವೀರಗಲ್ಲಿನ ಸಹಕಾರದಿಂದ ಏಳು ನೂರು ವರ್ಷ ಪುರಾತನವಾದ ಜನರ ಉಡುಪು, ಆಭರಣಗಳು, ಶಸ್ತ್ರಾಸ್ತ್ರಗಳು ಹಾಗೂ ಆ ಕಾಲದ ಸಂಸ್ಕೃತಿಯನ್ನು ತಿಳಿದುಕೂಳ್ಳಬಹುದಾಗಿದೆ ಎಂದರು.
ಜತೆಗೆ ಮಣ್ಣಿನಲ್ಲಿ ಹೂತು ಹೋಗಿದ್ದ ಸುಂದರವಾದ ಮಹೀಷ ಮರ್ದಿನಿಯ ವಿಗ್ರಹವೊಂದನು ಅಗ್ಗುಂದ ಗ್ರಾಮದ ದೀಪಕ್ ಅವರ ಸಹಕಾರದಿಂದ ಹೊರ ತೆಗೆಯಲಾಗಿದ್ದು ಗ್ರಾಮಸ್ಥರು ಈ ವಿಗ್ರಹ ಮತ್ತು ವೀರಗಲ್ಲುಗಳನ್ನು ಸಂರಕ್ಷಣೆ ಮಾಡಬೇಕೆಂದು ವಿನಂತಿಸಿಕೊಂಡರು.