

ಅರಸೀಕೆರೆ: ತಾಲೂಕಿನಾದ್ಯಂತ ಭಾನುವಾರ ರಾತ್ರಿ ಸುರಿದ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ನಗರದ ಲಕ್ಷ್ಮೀಪುರ, ಸುಬ್ರಮಣ್ಯನಗರ, ಮಲ್ಲೇಶ್ವರ ಬಡಾವಣೆ, ಕಾಳನಕೊಪ್ಪಲು, ಹಾಸನ ರಸ್ತೆಯ ಎಡ ಮತ್ತು ಬಲಭಾಗದ ಹಲವು ಮನೆಗಳಿಗೆ ನೀರು ನುಗ್ಗಿದ್ದು ಜನರು ಪರದಾಡಿದರು.
ಚರಂಡಿ ವ್ಯವಸ್ಥೆ ಅವ್ಯವಸ್ಥೆಯ ಆಗರವಾಗಿದ್ದು ಅರಸೀಕೆರೆ, ಹಾಸನ, ಮೈಸೂರು ಸಂಪರ್ಕಿಸುವ ರಸ್ತೆಯ ರೈಲ್ವೆ ಕೆಳಸೇತುವೆ ಬಳಿ ಅಪಾರ ಪ್ರಮಾಣದ ನೀರು ಸಂಗ್ರಹಗೊಂಡಿದ್ದರಿಂದ ವಾಹನ ಸವಾರರು ಹಾಗೂ ಪಾದಚಾರಿಗಳು ತಾಸುಗಟ್ಟಲೆ ಕಾದು ನಿಲ್ಲುವಂತಾಗಿದ್ದು ಕಿರಿದಾದ ಜಲಪಾತಗಳೇ ಸೃಷ್ಟಿಯಾಗಿದ್ದವು. ಮತ್ತೊಂದೆಡೆ ಕಾಳನಕೊಪ್ಪಲು ಕೆರೆ ಕೋಡಿ ಒಡೆದಿರುವ ಹಿನ್ನೆಲೆಯಲ್ಲಿ ಭಾರಿ ಪ್ರಮಾಣದ ನೀರು ಹರಿದುಬಂದಿದ್ದು ರೈಲ್ವೆ ಕೆಳಸೇತುವೆ ಮಾರ್ಗ ಸಂಪೂರ್ಣ ಮುಚ್ಚಿಹೋಗಿತ್ತು. ಇದರಿಂದಾಗಿ ಭೈರಾಂಬುಧಿ, ಸಿಂಗನಹಳ್ಳಿ, ಜಾವಗಲ್ ಮೊದಲಾದ ಊರುಗಳಿಗೆ ತೆರಳುವ ಪ್ರಯಾಣಿಕರಿಗೆ ಜಲಾಸುರನ ಬಿಸಿ ತಟ್ಟಿತ್ತು. ಅಗ್ಗುಂದ ಗ್ರಾಮದ ಕೆರೆ ಏರಿ ಬಿರುಕು ಬಿಟ್ಟಿದೆ ಎನ್ನುವ ಮಾಹಿತಿ ದೊರೆತ ಹಿನ್ನಲೆಯಲ್ಲಿ ತಹಸೀಲ್ದಾರ್ ವಿಭಾ ವಿ.ರಾಥೋಡ್ ಕಂದಾಯ ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು.
ಭರ್ತಿ: ಹೊಯ್ಸಳರ ದೊರೆ ಮೂರನೇ ಬಲ್ಲಾಳನ ಮಡದಿ ಉಮಾದೇವಿ ಕಟ್ಟಿಸಿರುವ ಐತಿಹಾಸಿಕ ಕಂತೇನಹಳ್ಳಿ ದೊಡ್ಡಕೆರೆ ಸಂಪೂರ್ಣ ಭರ್ತಿಯಾಗಿದ್ದು ಸೋಮವಾರ ಮಧ್ಯಾಹ್ನ ಕೋಡಿ ಬಿದ್ದಿದೆ. ಮುರುಂಡಿ, ಹಾರನಹಳ್ಳಿ, ತಳಲೂರು ಕೆರೆಗಳಿಂದ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ. ಬರೋಬ್ಬರಿ ಒಂದೂವರೆ ದಶಕದ ಬಳಿಕ ಕೋಡಿ ಬಿದ್ದಿರುವ ಹಿನ್ನೆಲೆಯಲ್ಲಿ ನಗರ ನಿವಾಸಿಗಳ ದಂಡು ಕೋಡಿ ವೀಕ್ಷಣೆಗೆ ಆಗಮಿಸುತ್ತಿದ್ದ ದೃಶ್ಯ ಕಂಡುಬಂದಿತು.