

ರಿಪ್ಪನ್‌ಪೇಟೆ: ಅರಸಾಳಿನಲ್ಲಿ ರೈಲು ನಿಲುಗಡೆಗೆ ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಅರಸಾಳು ರೈಲ್ವೆ ನಿಲ್ದಾಣದಲ್ಲಿರುವ ಮಾಲ್ಗುಡಿ ಮ್ಯೂಸಿಯಂಗೆ ಸೋಮವಾರ ಭೇಟಿ ನೀಡಿದ್ದ ವೇಳೆ ಸ್ಥಳೀಯರು ನೀಡಿದ ಮನವಿ ಸ್ವೀಕರಿಸಿ ಮಾತನಾಡಿದ ಅವರು, ರೈಲು ಸಂಚಾರ ಮತ್ತು ನಿಲುಗಡೆಗೆ ದೆಹಲಿಯ ಕೇಂದ್ರ ರೈಲ್ವೆ ಮಂಡಳಿಯಲ್ಲಿ ನಿರ್ಧಾರ ಆಗಬೇಕಾಗಿರುವುದರಿಂದ ಅವರ ಗಮನಕ್ಕೆ ತರುತ್ತೇನೆ ಎಂದು ಭರವಸೆ ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಉಮಾಕರ ನೇತೃತ್ವದಲ್ಲಿ ಗ್ರಾಮಸ್ಥರು, ವಿವಿಧ ಸಂಘಸಂಸ್ಥೆಗಳ ಮುಖಂಡರು ಮನವಿ ಸಲ್ಲಿಸಿದರು. ಹರಿಹರ-ಬೈಂದೂರು ರಾಜ್ಯ ಹೆದ್ದಾರಿ ಪಕ್ಕದಲ್ಲಿರುವ ಅರಸಾಳು ನಿಲ್ದಾಣದಲ್ಲಿ ರೈಲು ನಿಲುಗಡೆಗಾಗಿ 4 ಕೋಟಿ ರೂ. ಅನುದಾನದಲ್ಲಿ ಪ್ಲಾಟ್‌ಫಾರ್ಮ್ ಜತೆಗೆ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದೆ. ಬ್ರಿಟಿಷರ ಕಾಲದಿಂದಲೂ ಜನನಿಬಿಡ ಪ್ರದೇಶವಾಗಿದ್ದ ನಿಲ್ದಾಣದಲ್ಲಿ ಪ್ರತಿ ರೈಲುಗಳೂ ನಿಲುಗಡೆಗೊಂಡು ಸಂಚರಿಸುತ್ತಿದ್ದವು. ಇತ್ತೀಚಿನ ವರ್ಷಗಳಲ್ಲಿ ಬ್ರಾಡ್‌ಗೇಜ್ ಆಗಿ ಪರಿವರ್ತನೆಗೊಂಡಿದೆ. ರೈಲು ನಿಲುಗಡೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಸಿದ್ದರೂ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ರೈಲುಗಳು ನಿಲುಗಡೆಗೊಳ್ಳದೆ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ನೀವಾದರೂ ಗಮನ ಹರಿಸಿ ಎಂದು ಮನವಿ ಮಾಡಿದರು.
ಡಿಆರ್‌ಎಂ ರಾಹುಲ್ ಅಗರವಾಲ್, ಹಿರಿಯ ರೈಲ್ವೆ ಅಧಿಕಾರಿಗಳು ಹಾಗೂ ಭದ್ರತಾ ಸಿಬ್ಬಂದಿ, ಮುಖಂಡರಾದ ಪಿಯೂಷ್ ರೋಡ್ರಿಗಸ್, ಗಾಯತ್ರಿ ವಿನಾಯಕ, ಉಂಡುಗೋಡು ನಾಗಪ್ಪ, ಗೋಪಾಲಕೃಷ್ಣ, ಗೋನ್ಸಾಲೀಸ್ ಇತರರಿದ್ದರು.
ಕೆಂಚನಾಲದಲ್ಲೂ ಪ್ರತ್ಯೇಕ ಮನವಿ: ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕರು ಕೆಂಚನಾಲ ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿದ ವೇಳೆ ಗ್ರಾಪಂ ಅಧ್ಯಕ್ಷ ಉಬೇದುಲ್ಲಾ ಷರೀಫ್ ಹಾಗೂ ತಾಪಂ ಮಾಜಿ ಅಧ್ಯಕ್ಷ ವೀರೇಶ ಆಲುವಳ್ಳಿ ನೇತೃತ್ವದಲ್ಲಿ ಗ್ರಾಮಸ್ಥರು ಪ್ರತ್ಯೇಕ ಮನವಿ ಸಲ್ಲಿಸಿದರು. ಮೊದಲಿದ್ದ ರೈಲ್ವೆ ಗೇಟ್ ರದ್ದುಪಡಿಸಿ ಕೆಳಸೇತುವೆ ನಿರ್ಮಾಣ ಮಾಡಿರುವುದು ಅವೈಜ್ಞಾನಿಕವಾಗಿದೆ. ಮಳೆಗಾಲದಲ್ಲಿ ನೀರು ನಿಂತು ಸಂಚಾರಕ್ಕೆ ತೊಡಕಾಗುತ್ತಿದೆ ಹಾಗೂ ಭಾರಿ ವಾಹನಗಳ ಓಡಾಟ ಸಾಧ್ಯವಾಗುತ್ತಿಲ್ಲ. ಇದರಿಂದ ಹತ್ತಾರು ಗ್ರಾಮದ ಜನರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಮೊದಲಿದ್ದ ರೈಲ್ವೆ ಗೇಟಿನ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕೆಂದು ಮನವಿ ಸಲ್ಲಿಸಿದರು. ಮನವಿ ಪಡೆದ ಅಧಿಕಾರಿ ಮೇಲ್ಸೇತುವೆ ನಿರ್ಮಿಸುವ ಕುರಿತು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.