

ಬೀದರ್: ‘ಬೀದರ್ ಉತ್ಸವ'ದ ಅಂಗವಾಗಿ ಜಿಲ್ಲಾ ಆಡಳಿತ ಹಾಗೂ ಜಿಲ್ಲಾ ಅಮೆಚೂರ ಸೈಕ್ಲಿಂಗ್ ಅಸೋಸಿಯೇಷನ್ ವತಿಯಿಂದ ನಗರದಲ್ಲಿ ಭಾನುವಾರ ನಡೆದ ಜಿಲ್ಲಾಮಟ್ಟದ ಮುಕ್ತ ಸೈಕ್ಲಿಂಗ್ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಅರವಿಂದ ಮಾಳಗೆ ಹಾಗೂ ಮಹಿಳೆಯರ ವಿಭಾಗದಲ್ಲಿ ಲತಿಕಾ ಪ್ರಥಮ ಸ್ಥಾನ ಗಳಿಸಿದರು.
ಪುರುಷರ ವಿಭಾಗದಲ್ಲಿ ಅರುಣ ಮಾಳಗೆ ದ್ವಿತೀಯ ಹಾಗೂ ಶಾಹೀದ್ ಖಾನ್ ತೃತೀಯ ಸ್ಥಾನ ಪಡೆದರೆ, ಮಹಿಳೆಯರ ವಿಭಾಗದಲ್ಲಿ ಶಿವಕುಮಾರಿ ದ್ವಿತೀಯ ಮತ್ತು ಸಂಚಿತಾ ತೃತೀಯ ಸ್ಥಾನ ಗಳಿಸಿದರು.
ಪ್ರತ್ಯೇಕ ವಿಭಾಗಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವರಿಗೆ ಕ್ರಮವಾಗಿ ತಲಾ ರೂ. 5,000, ರೂ. 2,500 ಹಾಗೂ ರೂ. 1,500 ನಗದು, ಟ್ರೋಫಿ ಮತ್ತು ಪ್ರಮಾಣ ಪತ್ರ ವಿತರಿಸಲಾಯಿತು.
ಸೈಕ್ಲಿಂಗ್ ಕ್ರೀಡೆಯಲ್ಲಿ ಸಾಧನೆಗೆ ಬಹಳ ಅವಕಾಶ ಇದೆ. ಹೀಗಾಗಿ ಜಿಲ್ಲೆಯ ವಿದ್ಯಾರ್ಥಿಗಳು ಹಾಗೂ ಯುವಕರಲ್ಲಿ ಸೈಕ್ಲಿಂಗ್ ಬಗ್ಗೆ ಒಲವು ಮೂಡಿಸಲು ಬೀದರ್ ಉತ್ಸವ ಅಂಗವಾಗಿ ಸೈಕ್ಲಿಂಗ್ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಸ್ಪರ್ಧೆಗೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಾಗಿ ಅಸೋಸಿಯೇಷನ್ ಶ್ರಮ ಸಾರ್ಥಕವಾಗಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಮುರಳಿಧರ ಎಕಲಾರಕರ್ ಹೇಳಿದರು.
ಅಂಬೇಡ್ಕರ್ ವೃತ್ತದಿಂದ ಬಸವೇಶ್ವರ ವೃತ್ತ, ಫತೇ ದರ್ವಾಜಾ, ಚೌಬಾರಾ, ಗವಾನ್ ಚೌಕ್, ಮಹಮೂದ್ ಗವಾನ್ ಮದರಸಾ, ಕೋಟೆ ಮಾರ್ಗ, ಅಗ್ನಶಾಮಕ ದಳ ಕಚೇರಿ, ಸಿದ್ಧಾರ್ಥ ಕಾಲೇಜು ಮಾರ್ಗವಾಗಿ ಮರಳಿ ಅಂಬೇಡ್ಕರ್ ವೃತ್ತದ ವರೆಗೆ ಸೈಕ್ಲಿಂಗ್ ಸ್ಪರ್ಧೆ ನಡೆಯಿತು.
ಗೇರ್ ರಹಿತ ಸೈಕಲ್‍ಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಸ್ಪರ್ಧಾಳುಗಳಿಗೆ ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು. 12 ವರ್ಷ ಮೇಲ್ಪಟ್ಟ ಬಹುತೇಕರು ಮುಂಚಿತವಾಗಿಯೇ ಸ್ಪರ್ಧೆಗೆ ಹೆಸರು ನೋಂದಾಯಿಸಿಕೊಂಡಿದ್ದರು. ಅನೇಕರು ನೇರವಾಗಿ ಬಂದು, ಹೆಸರು ನೋಂದಾಯಿಸಿ ಸ್ಪರ್ಧೆಯಲ್ಲಿ ಪಾಲ್ಗೊಂಡರು. 47 ವರ್ಷದ ಅಬ್ದುಲ್ ಲೈಕ್ ಸಹ ಸ್ಪರ್ಧೆಯಲ್ಲಿ ಭಾಗವಹಿಸಿ ಗಮನ ಸೆಳೆದರು.
ಸ್ಪರ್ಧೆಗೆ ಚಾಲನೆ: ಅಂಬೇಡ್ಕರ್ ವೃತ್ತದ ಬಳಿ ಶಾಸಕ ರಹೀಂಖಾನ್ ಹಾಗೂ ಜಿಲ್ಲಾ ಅಮೆಚೂರ ಸೈಕ್ಲಿಂಗ್ ಅಸೋಸಿಯೇಷನ್ ಅಧ್ಯಕ್ಷ ಮುರಳಿಧರ ಎಕಲಾರಕರ್ ಜಂಟಿಯಾಗಿ ಹಸಿರು ನಿಶಾನೆ ತೋರಿಸಿ
ಸ್ಪರ್ಧೆಗೆ ಚಾಲನೆ ನೀಡಿದರು. ಅಸೋಸಿಯೇಷನ್ ಕಾರ್ಯದರ್ಶಿ ವಿನೋದ ಸಿನ್ಹಾ, ಡಾ. ಗೌರಮ ಅರಳಿ, ಸೈಕ್ಲಿಂಗ್ ತರಬೇತುದಾರ ವಿಶಾಲ್ ಮಾಳಗೆ, ತಾಂತ್ರಿಕ ಸಲಹೆಗಾರ ಅರುಣಕುಮಾರ, ಯುವ ಮುಖಂಡ ಅಭಿ ಕಾಳೆ, ಏಜಾಜ್ ಸೌದಾಗರ್, ಎಂ.ಎ ಗಫಾರ್, ರಾಜಶೇಖರ ಗಾಯತೊಂಡ, ಮೌಲಪ್ಪ ಮಾಳಗೆ, ಫಯಾಜ್ ಸೌದಾಗರ್, ಅಭಿಜೀತ್ ವರ್ಮಾ ಮೊದಲಾದವರು ಇದ್ದರು.