

ಸಿದ್ದಾಪುರ: ತಾಲೂಕಿನ ಅಣಲೇಬೈಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಣಗಾರ ರಸ್ತೆ ಒಂದೆರಡು ಮಳೆಗೆ ಅರಲು ಗದ್ದೆಯಂತಾಗಿದ್ದು, ಸಂಚಾರ ದುಸ್ಥರವಾಗಿದೆ.
ಪ್ರತಿವರ್ಷ ಮಳೆಗಾಲ ಆರಂಭವಾಯಿತೆಂದರೆ ರಸ್ತೆ ದುರವಸ್ಥೆಯಿಂದ ಸಂಕಟ ಪಡುತ್ತಿದ್ದ ಗ್ರಾಮಸ್ಥರು ಬೇಸಿಗೆಯಲ್ಲಿ ರಸ್ತೆ ಕಾಮಗಾರಿ ಆರಂಭಿಸಿದ್ದರಿಂದ ಸಂತಸ ಪಟ್ಟಿದ್ದರು. ಆದರೆ, ಸದ್ಯ ರಸ್ತೆಯ ಅವ್ಯವಸ್ಥೆ ಕಂಡು ಮೊದಲಿದ್ದ ರಸ್ತೆಯೇ ಚೆನ್ನಾಗಿತ್ತು ಎಂದು ರಸ್ತೆ ಅಭಿವೃದ್ಧಿ ಕಾಮಗಾರಿ ಕುರಿತು ಜನತೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
ಕಳೆದ ಬೇಸಿಗೆಯಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ 50 ಸಾವಿರ ರೂ.ನಲ್ಲಿ ರಸ್ತೆ ಉದ್ದಕ್ಕೂ ಮಣ್ಣನ್ನು ಹಾಕಿ ಬರಾವ್ ಮಾಡಿದೆ. ಆದರೆ, ಒಂದೆರಡು ಮಳೆಗೆ ರಸ್ತೆ ಅರಲು ಗದ್ದೆಯಂತಾಗಿರುವುದರಿಂದ ದ್ವಿಚಕ್ರ ವಾಹನವಿರಲಿ ಪಾದಚಾರಿಗಳು ಓಡಾಡುವುದೂ ಕಷ್ಟವಾಗಿದೆ.
ಊರಿಗೆ ಯಾವುದೇ ವಾಹನ ಬರದ ಕಾರಣ ಯಾರಾದರೂ ಅನಾರೋಗ್ಯಕ್ಕೆ ಒಳಗಾದರೆ ಅಥವಾ ಪೇಟೆ, ಪಟ್ಟಣಕ್ಕೆ ಹೋಗಿ ಬರಬೇಕೆಂದರೆ ಮೂರ್ನಾಲ್ಕು ಕಿ.ಮೀ. ನಡೆದುಕೊಂಡೇ ಮುಖ್ಯರಸ್ತೆಗೆ ಬರಬೇಕಾಗಿದೆ. ಮಳೆಗಾಲ ಆರಂಭವಾಯಿತೆಂದರೆ ಪ್ರತಿ ವರ್ಷ ಸಂಕಟಪಡುವ ಸ್ಥಿತಿ ನಮ್ಮದು. ಸ್ಥಳೀಯ ಗ್ರಾ.ಪಂ. ಹಾಗೂ ಜನಪ್ರತಿನಿಧಿಗಳು ಶೀಘ್ರ ರಸ್ತೆ ನಿರ್ವಿುಸಲು ಮುಂದಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಬಣಗಾರ ರಸ್ತೆಯ ಮೂರು ಕಡೆಗಳಲ್ಲಿ ಕೆಸರಿನಿಂದ ಕೂಡಿರುವುದು ಕಂಡು ಬಂದಿದೆ. ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಅರಲು ಮಣ್ಣನ್ನು ತೆಗೆದು ಇಲ್ಲಿ ಹೊಳೆಗೊಚ್ಚನ್ನು ಹಾಕಿ ಎರಡು ದಿನದಲ್ಲಿ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗವುದು.| ಸುಬ್ರಹ್ಮಣ್ಯ ಹೆಗಡೆ, ಪಿಡಿಒ, ಅಣಲೇಬೈಲ್ ಗ್ರಾ.ಪಂ.