ಅರಮನೆಯಿಂದ ಗುರುಮನೆಗೆ ಸಂಗೀತ ತಂದ ಶ್ರೇಯಸ್ಸು

HNL SANGEETOSTVA
Published on

ಹಾನಗಲ್ಲ: ಮಾನವ ಜನ್ಮ ದೊಡ್ಡದು ಎಂಬ ಅರಿವು ನಮಗಿದ್ದರೆ ಸ್ವಚ್ಛ ಮನಸಿನ ಧರ್ಮ ಸಂಸ್ಕಾರದೊಂದಿಗೆ ಸಹಬಾಳ್ವೆ ನಡೆಸಲು ಸಾಧ್ಯವಿದೆ ಎಂದು ಅಕ್ಕಿಆಲೂರು ಮುತ್ತಿನಕಂತಿಮಠದ ಚಂದ್ರಶೇಖರ ಶಿವಾಚಾಯರ್åರು ಹೇಳಿದರು.

ತಾಲೂಕಿನ ಕಾಡಶೆಟ್ಟಿಹಳ್ಳಿಯಲ್ಲಿ ಗುರುವಾರ ಆಯೋಜಿಸಿದ್ದ ಗಾನಯೋಗಿ ಪಂ.ಪಂಚಾಕ್ಷರಿ ಗವಾಯಿಗಳವರ 134ನೇ ಜಯಂತ್ಯುತ್ಸವ ಹಾಗೂ ಸಂಗೀತೋತ್ಸವ, ಶ್ರೀ ಹಕ್ಕಲ ಬಸವೇಶ್ವರ, ನೀಲಾಂಬಿಕೆ ಜಾತ್ರೋತ್ಸವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಅಂಧ-ಅನಾಥ ಬಡ ಮಕ್ಕಳಿಗೆ ಜೀವನ ಮಾರ್ಗ ಕಲ್ಪಿಸಿದ, ಸಮಾಜಮುಖಿ ಕಾರ್ಯ ಮಾಡಿದ ಮಹಾ ಶಿವಯೋಗಿ ಪಂ.ಪಂಚಾಕ್ಷರ ಗವಾಯಿಗಳಾಗಿದ್ದರು. ಅರಮನೆಯಲ್ಲಿದ್ದ ಸಂಗೀತವನ್ನು ಗುರುಮನೆಗೆ ತಂದ ಶ್ರೇಯಸ್ಸು ಪಂ.ಪಂಚಾಕ್ಷರ ಗವಾಯಿಗಳವರಿಗೆ ಸಲ್ಲುತ್ತದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಗದುಗಿನ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು, ಜಾತಿ ಮತ ಬಿಟ್ಟು ಭಾವೈಕ್ಯ ಬಿತ್ತಿ ಬೆಳೆಯಬೇಕು. ಸಂಸ್ಕಾರ, ಸಂಸ್ಕೃತಿ ಮೊದಲ ಆದ್ಯತೆಯಾಗಲಿ. ಭಿಕ್ಷೆ ಬೇಡುವ ಕೈಗೆ ಸಂಗೀತ ವಾದ್ಯಗಳನ್ನು ನೀಡಿ ಗೌರವದಿಂದ ಬದುಕುವುದು ಮಾತ್ರವಲ್ಲ, ತಮ್ಮ ಪ್ರತಿಭೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವ ಹಾಗೆ ಬೆಳಕು ಚೆಲ್ಲಿದ ಶ್ರೇಯಸ್ಸು ಪಂ.ಪಂಚಾಕ್ಷರ ಗವಾಯಿಗಳವರಿಗೆ ಸಲ್ಲುತ್ತದೆ. ಪಂಚಾಕ್ಷರ ಗವಾಯಿಗಳವರು ಶಿವನ ಸೃಷ್ಟಿಯಾಗಿ ಭೂಲೋಕಕ್ಕೆ ಬಂದವರು. ಸಂಗೀತ ಲೋಕವನ್ನು ಪಾವನಗೊಳಿಸಿದ ಪುಣ್ಯಾತ್ಮರು ಎಂದರು.

ಶ್ರೀಕುಮಾರ ಪಂಚಾಕ್ಷರೇಶ್ವರ ರಾಜ್ಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವೇ.ಮೂ. ಶಿವಬಸಯ್ಯ ಚರಂತಿಮಠ, ಪಂಚಾಕ್ಷರ ಗವಾಯಿಗಳು ಹಾಗೂ ಪುಟ್ಟರಾಜ ಕವಿ ಗವಾಯಿಗಳವವರು ಅಂಧ ಅನಾಥರಿಗೆ ಜೀವನ ದೀಕ್ಷೆ ನೀಡಿ, ಸಂಗೀತ ಸಾಹಿತ್ಯ ಪುರಾಣ ಪ್ರವಚನದ ಜ್ಞಾನ ನೀಡಿ ಇಂಥವರ ಪಾಲಿನ ತಂದೆಯಾಗಿ ಬೆಳಗಿದ್ದಾರೆ. ಶತಶತಮಾನಗಳು ಕಳೆದರೂ ಪಂ.ಪಂಚಾಕ್ಷರ ಗವಾಯಿಗಳವರು ಹಾಗೂ ಪುಟ್ಟರಾಜ ಕವಿ ಗವಾಯಿಗಳವರು ಜನಮಾನಸದಲ್ಲಿ ಶಾಶ್ವತವಾಗಿರುತ್ತಾರೆ ಎಂದರು.

ಗ್ರಾಪಂ ಅಧ್ಯಕ್ಷೆ ರೇಣುಕಾ ಅಜಗುಂಡಿ, ಗಾನಯೋಗಿ ಪಂಚಾಕ್ಷರಿ ಕಲಾ ಸಂಘದ ಅಧ್ಯಕ್ಷ ಡಿ.ಎಸ್. ಪಾಟೀಲ, ಶಸಾಪ ಜಿಲ್ಲಾಧ್ಯಕ್ಷ ಮಾರುತಿ ಶಿಡ್ಲಾಪೂರ, ವಕೀಲ ಎಸ್.ಎಂ. ಕೋತಂಬರಿ, ಜಾತ್ರಾ ಸಮಿತಿ ಅಧ್ಯಕ್ಷ ವಿಜಯಕುಮಾರ ದೊಡ್ಡಮನಿ, ಎಚ್.ಪಿ. ವೆಂಕಟೇಶ, ಶಿವಕುಮಾರ ಪಾಟೀಲ, ಧಾರವಾಡ ಆಕಾಶವಾಣಿ ಕಲಾವಿದ ಸದಾಶಿವ ಐಹೊಳೆ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net