ಅರಮನೆಯಲ್ಲಿ ರತ್ನಖಚಿತ ಸಿಂಹಾಸನ ಜೋಡಣೆ

1 - Copy
Published on

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿರುವಂತೆಯೇ ಮಂಗಳವಾರ ಅಂಬಾವಿಲಾಸ ಅರಮನೆಯಲ್ಲಿ ರತ್ನಖಚಿತ ಸಿಂಹಾಸನ ಜೋಡಣೆ ಕಾರ್ಯ ಸಂಪ್ರದಾಯಬದ್ಧವಾಗಿ ನೆರವೇರಿತು.
ಅರಮನೆಯ ನೆಲಮಾಳಿಗೆಯ ಖಜಾನೆಯಲ್ಲಿ ಭದ್ರವಾಗಿ ಇಡಲಾಗಿದ್ದ ಸಿಂಹಾಸನವನ್ನು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಸಮ್ಮುಖದಲ್ಲಿ ಹೊರ ತೆಗೆಯಲಾಯಿತು. ಬಿಡಿಬಿಡಿಯಾಗಿದ್ದ ಸಿಂಹಾಸನದ ಭಾಗಗಳನ್ನು ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ದರ್ಬಾರ್ ಹಾಲ್ಗೆ ತರಲಾಯಿತು. ಸಂಪ್ರದಾಯದಂತೆ ಈ ಹಿಂದಿನಿಂದಲೂ ಸಿಂಹಾಸನ ಜೋಡಣೆ ಕಾರ್ಯ ಮಾಡಿಕೊಂಡು ಬರುತ್ತಿರುವ ಗೆಜ್ಜಗಹಳ್ಳಿ ಗ್ರಾಮಸ್ಥರು ಈ ಬಾರಿಯೂ ರತ್ನಖಚಿತ ಸಿಂಹಾಸನದ ಜೋಡಣೆ ಕಾರ್ಯ ನೆರವೇರಿಸಿದರು.
ಅರಮನೆಯ ದರ್ಬಾರ್ ಹಾಲ್ನಲ್ಲಿ ಮಂಗಳವಾರ ಬೆಳಗ್ಗೆ 10.45 ರಿಂದ 11.05 ರವರೆಗಿನ ಶುಭ ವೃಶ್ಚಿಕ ಲಗ್ನದಲ್ಲಿ ರತ್ನಖಚಿತ ಸಿಂಹಾಸನವನ್ನು ಜೋಡಿಸುವ ಧಾರ್ಮಿಕ ಕೈಂಕರ್ಯಕ್ಕೆ ಚಾಲನೆ ನೀಡಲಾಯಿತು. ಅರಮನೆ ಪುರೋಹಿತರು ಗಣಪತಿ ಹೋಮ, ಚಾಮುಂಡಿಪೂಜೆ, ಶಾಂತಿ ಹೋಮ ನೆರವೇರಿಸಿ ಪೂರ್ಣಾಹುತಿ ನೀಡಿದ ಬಳಿಕ ಧಾರ್ಮಿಕ ಕಾರ್ಯ ಮುಕ್ತಾಯಗೊಂಡಿತು.
ದರ್ಬಾರ್ ಹಾಲ್‌ನಲ್ಲಿ ಪೂಜಾ ಕೈಂಕರ್ಯ ನೆರವೇರಿದರೆ, ಕನ್ನಡಿ ತೊಟ್ಟಿಯಲ್ಲಿ ಭದ್ರಾಸನ ಜೋಡಣೆ, ಅರಮನೆಯ ಪುರೋಹಿತರ ನೇತೃತ್ವದಲ್ಲಿ ಗಣಪತಿ ಹೋಮ, ಚಾಮುಂಡಿ ಪೂಜೆ, ಶಾಂತಿ ಹೋಮ ಮಾಡಲಾಯಿತು.
ರಾಜಪರಂಪರೆಯ ಸಂಪ್ರದಾಯದಂತೆ ನವರಾತ್ರಿಯಲ್ಲಿ ಖಾಸಗಿ ದರ್ಬಾರ್ ನಡೆಸುವ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಈ ಧಾರ್ಮಿಕ ಕಾರ್ಯದಲ್ಲಿ ಭಾಗಿಯಾದರು. ಧಾರ್ಮಿಕ ವಿಧಿ ವಿಧಾನಗಳು ಪೂರ್ಣಗೊಂಡ ಬಳಿಕ ರತ್ನಖಚಿತ ಸಿಂಹಾಸನವನ್ನು ಬಿಳಿ ವಸ್ತ್ರದಲ್ಲಿ ಸಂಪೂರ್ಣ ಮುಚ್ಚಲಾಯಿತು.
ಸಿಂಹಾಸನ ಜೋಡಣಾ ಕಾರ್ಯದ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ 7ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಅರಮನೆಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿತ್ತು.

26ರಿಂದ ಖಾಸಗಿ ದರ್ಬಾರ್
ದಸರಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಖಾಸಗಿ ದರ್ಬಾರ್ ಸೆ.26ರಿಂದ 9 ದಿನಗಳವರೆಗೆ ಅರಮನೆಯಲ್ಲಿ ನಡೆಯಲಿದೆ. ಈಗ ಸಜ್ಜುಗೊಂಡಿರುವ ಸಿಂಹಾಸನದ ಕಾಲುಗಳಿಗೆ ಸಿಂಹದ ಮುಖಗಳನ್ನು ನವರಾತ್ರಿ ಆರಂಭದ ದಿನ ಶಾಸ್ತ್ರೋಕ್ತವಾಗಿ ಜೋಡಣೆ ಮಾಡಲಾಗುತ್ತಿದೆ. ಬಳಿಕ ರತ್ನ ಖಚಿತ ಸಿಂಹಾಸನಾರೂಢರಾಗಿ ರಾಜವಶಂಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಖಾಸಗಿ ದರ್ಬಾರ್ ನಡೆಸಲಿದ್ದಾರೆ.
ದಸರಾ ಮುಗಿದ ಬಳಿಕವೂ ಕೆಲ ದಿನಗಳು ಸಾರ್ವಜನಿಕ ವೀಕ್ಷಣೆಗೆ ರತ್ನಖಚಿತ ಸಿಂಹಾಸನ ದರ್ಬಾರ್ ಹಾಲ್‌ನಲ್ಲಿ ಇರಲಿದ್ದು, ಅ.20 ರಂದು ತೆರವು (ವಿಸರ್ಜನೆ) ಮಾಡಲಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net