ಅರಮನೆಯಲ್ಲಿ ಗಜಪಡೆಗೆ ವಿಶೇಷ ಪೂಜೆ

5
Published on

ಮೈಸೂರು: ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ಅರಮನೆ ಆವರಣದಲ್ಲಿ ಗಜಪಡೆಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಹಬ್ಬದ ಸಂಭ್ರಮದ ನಡುವೆ ತುಂತುರು ಮಳೆಯಲ್ಲಿಯೇ ಡಿಸಿಎಫ್‌ಗಳಾದ ಸೌರಭ್ ಕುಮಾರ್, ಬಸವರಾಜು ನೇತೃತ್ವದಲ್ಲಿ ಅರಣ್ಯ ಇಲಾಖೆ ಹಾಗೂ ಅರಮನೆ ಮಂಡಳಿ ಅಧಿಕಾರಿಗಳು, ಮಾವುತರು, ಕಾವಾಡಿಗಳು ಹಾಗೂ ಸಿಬ್ಬಂದಿ ಆನೆಗಳಿಗೆ ಪೂಜೆ ಸಲ್ಲಿಸಿದರು.
ಅರಮನೆ ಅರ್ಚಕ ಪ್ರಹ್ಲಾದರಾವ್ ಅವರು ಆನೆಗಳ ಪಾದಗಳಿಗೆ ಅರಿಶಿಣ, ಕುಂಕುಮ ಹಾಗೂ ಗಂಧವನ್ನು ಹಚ್ಚಿ ಸೇವಂತಿಗೆ ಹೂಗಳಿಂದ ಅಲಂಕರಿಸಲಾಯಿತು. ಚಾಮರವನ್ನು ಬೀಸಲಾಯಿತು. ಪಂಚಫಲ, ಕೋಡುಬಳೆ ಒಬ್ಬಟ್ಟು, ರವೆ ಉಂಡೆ, ಸಿಹಿಗಡುಬು, ಕರ್ಜಿಕಾಯಿ, ಲಾಡು, ಚಕ್ಕುಲಿ, ನಿಪ್ಪಟ್ಟು, ಹೋಳಿಗೆ, ಬೆಲ್ಲ, ಕಬ್ಬು, ಕಲ್ಲು ಸಕ್ಕರೆ, ಮೋದಕ ಮೊದಲಾದ ಗಣೇಶನ ಇಷ್ಟದ ತಿನಿಸುಗಳನ್ನು ನೀಡಲಾಯಿತು. ಆನೆಗಳ ಹಣೆ, ಸೊಂಡಿಲು, ಅಧಿಕಾರಿಗಳು, ಮಾವುತರು, ಕಾವಾಡಿಗರಿಗೆ ಅರ್ಚಕರು ಗಣಪತಿ ಸ್ತೋತ್ರ ಹೇಳಿಸಿದರು. ಆನೆಗಳಿಗೆ ಬಿಲ್ವಪತ್ರೆ, ಪುಷ್ಪನಮನ ಸಲ್ಲಿಸುತ್ತಿದ್ದಂತೆ ನೆರೆದಿದ್ದ ಎಲ್ಲರೂ ಹೂ ಮಳೆಗರೆದರು. ಡಿಸಿಎಫ್ ಬಸವರಾಜ್ ಆನೆಗಳಿಗೆ ಆರತಿ ಬೆಳಗಿದರು.
ಆರ್‌ಎಫ್‌ಒ ಸಂತೋಷ್ ಹೂಗಾರ್, ವೈದ್ಯ ಮುಜೀಬ್ ರೆಹಮಾನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net