

ಮೈಸೂರು: ವಿಶ್ವವಿಖ್ಯಾತ ಮೈಸೂರು ಅರಮನೆ ಅಂಗಳದಲ್ಲಿ ಎಲ್ಲೆಡೆ ಕುಸುಮಗಳ ಪರಿಮಳ ಹರಡಿದೆ. ವೈವಿಧ್ಯ ಪುಷ್ಪಗಳು ಪ್ರವಾಸಿಗರನ್ನು ಆಕರ್ಷಿಸುತ್ತಿದೆ.
ಮೈಸೂರು ಅರಮನೆ ಮಂಡಳಿ ವತಿಯಿಂದ ಆಯೋಜಿಸಿರುವ 10 ದಿನಗಳ ಫಲಪುಷ್ಪ ಪ್ರದರ್ಶನ-2024ಕ್ಕೆ ಶನಿವಾರ ಸಂಜೆ ಚಾಲನೆ ದೊರೆಯುವ ಮೂಲಕ ಸಾರ್ವಜನಿಕರನ್ನು ಆಹ್ವಾನಿಸಲಾಯಿತು. ಈ ಅವಧಿಯಲ್ಲಿ ಬೆಳಗ್ಗೆ 10ರಿಂದ ರಾತ್ರಿ 9ರವರೆಗೆ ಇಲ್ಲಿಗೆ ಸಾರ್ವಜನಿಕರು, ಪ್ರವಾಸಿಗರು ಭೇಟಿ ನೀಡಿ ಹೂವಿನ ಚೆಲುವು ಕಣ್ತುಂಬಿಕೊಳ್ಳಬಹುದು.
ಈ ಸಲ ದೆಹಲಿಯ ಅಕ್ಷರಧಾಮ ದೇಗುಲ ಹೂವಿನಲ್ಲಿ ಅರಳಿದೆ. ಇದುವೇ ಈ ಸಲ ವಿಶೇಷ. ಸೇವಂತಿಗೆ, ಕೆಂಪು, ಬಿಳಿಗುಲಾಬಿ ಸೇರಿದಂತೆ ಇನ್ನಿತರ ಹೂವುಗಳಿಂದ ಅಲಕೃಂತವಾಗಿರುವ ಈ ದೇವಸ್ಥಾನದ ಆಕೃತಿ ಮನಮೋಹಕವಾಗಿದೆ. 50 ಅಡಿ ಅಗಲ, 16 ಅಡಿ ಉದ್ದ, 25 ಅಡಿ ಎತ್ತರದ ಈ ಬೃಹತ್ ಮಾದರಿ ವೀಕ್ಷಕರ ಮನ ಸೆಳೆಯುತ್ತಿದೆ.
ಅಕ್ಷರಧಾಮ ಆಕೃತಿಯ ಎದುರಿಗೆ ಜಿಲ್ಲೆಯ ಪ್ರಮುಖ ಯಾತ್ರಾ ಸ್ಥಳವಾದ ನಂಜನಗೂಡಿನ ಶ್ರೀಕಂಠೇಶ್ವರ ದೇಗುಲ ಮಾದರಿ ನೋಡುಗರಲ್ಲಿ ಭಕ್ತಿಭಾವ ಮೂಡಿಸುತ್ತಿದೆ.
10ನೇ ಫಲಪುಷ್ಪ ಪ್ರದರ್ಶನದ ನೆನಪಿಗಾಗಿ ಹೂವುಗಳಿಂದ ರಚಿಸಿರುವ ನಾಮಫಲಕವು ಸಾರ್ವಜನಿಕರಿಗೆ ಸ್ವಾಗತ ಕೋರುತ್ತಿದ್ದರೆ, ಪ್ರವೇಶ ದ್ವಾರಗಳಲ್ಲಿ ಎರಡು ನವಿಲು ಮಾದರಿ ದಾರಿ ತೋರಿಸುತ್ತಿವೆ. ಹಾಗೆ ಮುಂದೆ ಸಾಗಿ ಬಂದರೆ, 1799-1868ರಲ್ಲಿ ಮೈಸೂರು ಸಂಸ್ಥಾನದ ರಾಜರಾಗಿ ಆಳ್ವಿಕೆ ನಡೆಸಿದ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರ ಹೂವಿನ ಆಕೃತಿ ವಿಶೇಷ ಎನಿಸಿದೆ. ಸ್ವತಃ ಕವಿಯಾಗಿ ಕಲೆ-ಸಾಹಿತ್ಯ, ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡಿರುವ ಮುಮ್ಮಡಿಯವರ ಚರಿತ್ರೆಯನ್ನು ಪರಿಚಯಿಸಿ ಕೊಡಲಾಗುತ್ತಿದೆ.
ಕಾರ್ಗಿಲ್ ಯುದ್ಧ ಸ್ಮಾರಕದ ಮಾದರಿ ಸೈನಿಕರ ಸಾಹಸ ಯಶೋಗಾಥೆ ಸಾಕ್ಷೀಕರಿಸುತ್ತಿದೆ. 1999ರಲ್ಲಿ ನಡೆದ ಕಾರ್ಗಿಲ್ ಯುದ್ಧ ಹುತಾತ್ಮರಾದ ವೀರ ಯೋಧರಿಗೆ ಈ ಮೂಲಕ ನಮನ ಸಲ್ಲಿಸಲಾಗುತ್ತಿದೆ. ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆ ಬಿಂಬಿಸುವ ಮಾದರಿ ಆಕೃತಿಗಳೂ ಇಲ್ಲಿವೆ.
ಹೂವಿನ ಲೋಕದಲ್ಲಿ ಹದ್ದು, ಆನೆ ಮರಿ, ಆಮೆ, ನಂದಿ, ಚಿಂಕೆ, ರಾಜವಂಶದ ಲಾಂಛನ ಗಂಡು ಭೇರುಂಡ, 6 ಪ್ರಾಣಿ, 4 ಪಕ್ಷಿಗಳ ಕಲರವ ಸಹ ಮಕ್ಕಳನ್ನು ಸೆಳೆಯುತ್ತಿದೆ. ಸೆಲ್ಫಿ ಪಾಯಿಂಟ್‌ನಲ್ಲಿ ಹ್ಯಾಟ್ ಮಾದರಿಯ ಚಿತ್ರ ಎದುರು ಸಾರ್ವಜನಿಕರು ಫೋಟೋ ತೆಗೆಸಿಕೊಳ್ಳಲು ಮುಗಿಬಿದ್ದದ್ದು ಕಂಡು ಬಂತು. ಸಂವಿಧಾನದ ಪೀಠಿಕೆಯ ಮಾದರಿಯನ್ನು ಹೂವುಗಳಿಂದ ಅಲಂಕರಿಸಲಾಗಿದೆ.
ಇನ್ನಷ್ಟು ಆಕರ್ಷಣೀಯಗೊಳಿಸಲು ಗೊಂಬೆ ಮನೆಗೆ ಪ್ರವೇಶಿಸುವ ದ್ವಾರಕ್ಕೆ ಹೂವಿನ ಅಲಂಕಾರ ಮಾಡಲಾಗಿದೆ. ಊಟಿ ಕಟ್ ಫ್ಲವರ್‌ಗಳಿಂದ ಫಲಪುಷ್ಪ ಪ್ರದರ್ಶನದ ಆವರಣ ಸಿಂಗರಿಸಲಾಗಿದೆ. ಇಲ್ಲಿರುವ ವರಹ ದ್ವಾರ ಉದ್ಯಾನದಲ್ಲಿರುವ ವರ್ಟಿಕಲ್ ಗಾರ್ಡನ್ ಸೌಂದರ್ಯ ವೀಕ್ಷಕರ ಕಣ್ಣಿಗೆ ತಂಪನ್ನೆರೆಯುತ್ತ್ತಿದೆ.
ಇಲ್ಲಿಗೆ ಭೇಟಿ ನೀಡುವ ಜನಸಮೂಹವು 25 ಸಾವಿರ ವಿಭಿನ್ನ ಅಲಂಕಾರಿ ಹೂವುಗಳನ್ನು ಏಕಕಾಲದಲ್ಲೇ ಕಣ್ತುಂಬಿಕೊಳ್ಳಬಹುದು. ಹೂವಿನ ಕುಂದಗಳಲ್ಲಿ ಮೇರಿಗೋಲ್ಡ್, ಸಾಲ್ವಿಯ, ಡೇಲಿಯ, ಪಿಟೋನಿಯ, ಸೇವಂತಿಗೆ, ಕೋಲಿಯಸ್, ಸಿಲೋಷಿಯ, ನಸ್ಟರ್‌ಸಿಯಂ, ಆಂಟಿರೈನಂ, ವರ್ಬಿನ, ಜಿರೇನಿಯಂ, ಕಾಶಿಗೊಂಡೆ, ಆಸ್ಟರ್, ಗೈರಾಲ್ಡಿಯಾ, ಸ್ಪೈಡರ್, ಬೋನ್ಸಾಯ್ ಗಿಡಗಳು... ಹೀಗೆ ಬಗೆ ಬಗೆಯ ಹೂವಿನ ಗಿಡಗಳನ್ನು ವಿವಿಧ ಮಾದರಿಯಲ್ಲಿ ಜೋಡಿಸಲಾಗಿದೆ. 35 ಬಗೆಯ 25 ಸಾವಿರ ಹೂವಿನ ಕುಂದಗಳು ನೋಡಲು ಲಭ್ಯ ಇವೆ.
6 ಲಕ್ಷ ವಿವಿಧ ಬಣ್ಣದ ಗುಲಾಬಿಗಳು, ಕ್ರೈಸಾಂಥಿಮಮ್, ಪಿಂಗ್ ಪಾಂಗ್, ಕಾರ್ನೆಷನ್, ಆಸ್ಟ್ರಮೇರಿಯ, ಜರ್ಬೆರಾ, ಆಂಥೋರಿಯಮ್, ಆರ್ಕಿಡ್ಸ್, ಬ್ಲೂಡೈಸಿ ಹಾಗೂ ಇತರ ಅಲಂಕಾರಿಕ ಹೂವು, ಊಟಿ ಕಟ್ ಫ್ಲವರ್‌ಗಳಿಂದ ಅಲಂಕೃತ ವಿವಿಧ ಆಕೃತಿಗಳು ಕಳೆಗಟ್ಟಿವೆ.
ಫಲಪುಷ್ಪ ಪ್ರದರ್ಶನವನ್ನು ವೀಕ್ಷಿಸುವ ಸಮಯದಲ್ಲಿ ಜಯಚಾಮರಾಜ ಒಡೆಯರ್ ಅವರು ರಚಿಸಿರುವ ಕೀರ್ತನೆಗಳು ಸೇರಿದಂತೆ ಶಾಸ್ತ್ರೀಯ ಸಂಗೀತ ಆಲಿಸಬಹುದು. ಫಲಪುಷ್ಪ ಪ್ರದರ್ಶನದ 10 ದಿನ ಸಂಜೆ 7ರಿಂದ ರಾತ್ರಿ 9ರವರೆಗೆ ವಿದ್ಯುತ್ ದೀಪಾಲಂಕಾರದಿಂದ ಅರಮನೆ ಕಂಗೊಳಿಸಲಿದ್ದು, ಪ್ರದರ್ಶನದ ಮೆರುಗು ಹೆಚ್ಚಿಸಿದೆ.
ಪ್ರತಿ ವರ್ಷದಂತೆ ಮೈಸೂರು ಮಹಾರಾಜರ ಇತಿಹಾಸ ಹಾಗೂ ಸಂಸ್ಕೃತಿಗೆ ಸಂಬಂಧಿಸಿದಂತೆ ಛಾಯಾಚಿತ್ರಗಳ ಪ್ರದರ್ಶನ, ಬೊಂಬೆಗಳ ಪ್ರದರ್ಶನವೂ ಇದೆ.
ಉದ್ಘಾಟನೆ: ಫಲಪುಷ್ಪ ಪ್ರದರ್ಶನ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಉದ್ಘಾಟಿಸಿದರು. ಶಾಸಕರಾದ ಜಿ.ಟಿ.ದೇವೇಗೌಡ, ಟಿ.ಎಸ್.ಶ್ರೀವತ್ಸ, ಕೆ.ಹರೀಶ್‌ಗೌಡ, ಎಂಎಲ್‌ಸಿಗಳಾದ ಡಾ.ಡಿ.ತಿಮ್ಮಯ್ಯ, ಸಿ.ಎನ್.ಮಂಜೇಗೌಡ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್, ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯತ್ರಿ ಇನ್ನಿತರರಿದ್ದರು.
ಫಲಪುಷ್ಪ ಪ್ರದರ್ಶನಕ್ಕೆ ಮೊದಲ ಬಾರಿ ಪ್ರವೇಶ ಶುಲ್ಕ ನಿಗದಿಪಡಿಸಿರುವ ಮೈಸೂರು ಅರಮನೆ ಮಂಡಳಿ ಕ್ರಮಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಯಿತು. ಈ ಹಿಂದೆ ಉಚಿತ ಪ್ರವೇಶ ಇತ್ತು. ಈ ಸಲ ಭಾರತೀಯ ಹಾಗೂ ವಿದೇಶ ವಯಸ್ಕರಿಗೆ ತಲಾ 30 ರೂ., 10ರಿಂದ 16 ವರ್ಷದ ಮಕ್ಕಳಿಗೆ 10 ರೂ. ಟಿಕೆಟ್‌ಗೆ ನಿಗದಿಪಡಿಸಲಾಗಿದ್ದು, ಇಷ್ಟು ದುಡ್ಡು ತೆತ್ತು ಫ್ಲವರ್ ಷೋ ನೋಡಬೇಕಿದೆ. ಇದು ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿಸಿದೆ.
ಫಲಪುಷ್ಪ ಪ್ರದರ್ಶನ ಅಂಗವಾಗಿ ಅರಮನೆ ವೇದಿಕೆಯಲ್ಲಿ ಸಂಗೀತ ಕಾರ್ಯಕ್ರಮಕ್ಕೂ ಚಾಲನೆ ದೊರೆಯಿತು. ಸಿ.ಆರ್.ರಾಘವೇಂದ್ರ ಪ್ರಸಾದ್ ತಂಡದಿಂದ ವಾದ್ಯ ಸಂಗೀತ, ಮೈಸೂರು ಸಂಸ್ಥಾನದ ನಾಡಗೀತೆ ‘ಕಾಯೋ ಶ್ರೀಗೌರಿ ಕರುಣಾಲಹರಿ’.. ಗೀತೆ ಗಾಯನ, ಗಾಯಕ ಮಧುಬಾಲಕೃಷ್ಣನ್ ತಂಡದಿಂದ ಸಂಗೀತ ಸಂಜೆ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.