ಅರಮನೆ ನಗರಿಯಲ್ಲಿ ಮಾವಿನ ಘಮಲು

9
Published on

ಮೈಸೂರು: ಅರಮನೆ ನಗರಿ ಮೈಸೂರಿನಲ್ಲಿ ‘ಹಣ್ಣುಗಳ ರಾಜ’ನ ಘಮಲು ಆರಂಭವಾಗಿದ್ದು, ಮೊದಲ ದಿನವೇ ನಾನಾ ರುಚಿಯ ಮಾವು ಸವಿಯಲು ಜನ ಮುಗಿಬಿದ್ದರು…!
ನಗರದ ಹಾರ್ಡಿಂಜ್ ವೃತ್ತದ ಬಳಿ ಇರುವ ಕುಪ್ಪಣ್ಣ ಪಾರ್ಕ್‌ನಲ್ಲಿ ಮೂರು ದಿನಗಳ ಕಾಲ ಆಯೋಜಿಸಿರುವ ಮಾವು ಮೇಳಕ್ಕೆ ಶುಕ್ರವಾರ ಚಾಲನೆ ದೊರೆಯಿತು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ, ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಸಹಯೋಗದಲ್ಲಿ ಆಯೋಜಿಸಿರುವ ಮೇಳದಲ್ಲಿ ಒಟ್ಟು 28 ಮಳಿಗೆಗಳನ್ನು ಹಾಕಲಾಗಿದ್ದು, ಒಂದೇ ಸೂರಿನ ಅಡಿ 40ಕ್ಕೂ ಹೆಚ್ಚು ತಳಿಯ ಮಾವಿನ ಹಣ್ಣುಗಳನ್ನು ಜನರು ಸವಿಯಬಹುದು. ಮೇ 28ರವರೆಗೂ ‘ಮಾವು ಪ್ರಿಯ’ರಿಗೆ ಭರ್ಜರಿ ಅವಕಾಶ ಕಲ್ಪಿಸಲಾಗಿದೆ.
ಮೈಸೂರು, ಮಂಡ್ಯ, ರಾಮನಗರ, ಹಾಸನ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿರುವ ರೈತರು, ಚೈತ್ರಾ ಪೈರಿ, ಸೇಲಂ, ಶಿರಸಿ ಲೋಕಲ್, ರತ್ನಗಿರಿ(ಆಲ್ಫನ್ಸ್), ಬಾದಾಮಿ, ರಸಪುರಿ, ಮಲಗೋವ, ಮಲ್ಲಿಕಾ, ಸೇಂದೂರಾ, ತೋತಾಪುರಿ, ಬಾಗನಪಲ್ಲಿ, ದಶೇರಿ, ಕಾಲಾಪ ಹಾಡ್, ಕೇಶರ್, ಸಕ್ಕರೆ ಗುತ್ತಿ, ಅಮ್ರಪಾಲಿ, ದಿಲ್‌ಪಸಂದ್ ಇನ್ನಿತರ ಮಾವಿನ ತಳಿಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಇಟ್ಟಿದ್ದಾರೆ.
ಮೇಳಕ್ಕೆ ಚಾಲನೆ ನೀಡಿದ ಶಾಸಕ ಕೆ.ಹರೀಶ್‌ಗೌಡ ಮಾತನಾಡಿ, ಮಾವು ಎಲ್ಲರಿಗೂ ಪ್ರಿಯವಾದ ಹಣ್ಣು. ಉತ್ಪಾದಕರಿಂದ ನೇರವಾಗಿ ಗ್ರಾಹಕರಿಗೆ ತಲುಪಿಸುವ ಸಲುವಾಗಿ ಪ್ರತಿವರ್ಷದಂತೆ ಈ ವರ್ಷವೂ ಮಾವು ಮೇಳ ಆಯೋಜಿಸಿರುವುದು ಉತ್ತಮ ಕಾರ್ಯ ಎಂದರು.
ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಾತನಾಡಿ, ರೈತರಿಗೆ ಸೂಕ್ತ ಮಾರುಕಟ್ಟೆ ಒದಗಿಸುವುದು ಹಾಗೂ ಗ್ರಾಹಕರಿಗೆ ಉತ್ತಮವಾದ ಮಾವು ದೊರೆಯುವಂತೆ ಮಾಡುವುದು ಈ ಮೇಳದ ಉದ್ದೇಶವಾಗಿದೆ. ಇದರಿಂದ ರೈತರು, ಗ್ರಾಹಕರಿಗೂ ಲಾಭವಾಗಲಿದೆ ಎಂದು ಹೇಳಿದರು.
ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಎಂ.ರುದ್ರೇಶ್ ಮಾತನಾಡಿ, ನೈಸರ್ಗಿಕವಾಗಿ ಮಾಗಿಸಿದ ವಿವಿಧ ತಳಿಯ ಮಾವಿನ ಹಣ್ಣುಗಳು ಮೇಳದಲ್ಲಿ ದೊರೆಯಲಿವೆ. ಪ್ರತಿ ರೈತರಿಂದ 3 ರಿಂದ 4 ಟನ್ ಮಾವು ಮಾರಾಟ ಮಾಡುವ ನಿರೀಕ್ಷೆಯನ್ನು ಹೊಂದಿದ್ದೇವೆ ಎಂದು ಹೇಳಿದರು.
ಉಪ ಮೇಯರ್ ರೂಪಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಗಾಯತ್ರಿ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಶಶಿಧರ್, ಸಹಾಯಕ ನಿರ್ದೇಶಕರಾದ ಅಶ್ವಿನಿ, ಶಬೀನಾ ಇತರರು ಇದ್ದರು.

ಮೊದಲ ದಿನವೇ ಉತ್ತಮ ಸ್ಪಂದನೆ
ಮಾವು ಮೇಳದಲ್ಲಿ ಮೊದಲ ದಿನವೇ ಮಾವು ಪ್ರಿಯರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು. ಮೇಳ ಉದ್ಘಾಟನೆಗೂ ಮುನ್ನವೇ ಆಗಮಿಸಿದ್ದ ಸಾರ್ವಜನಿಕರು, ತಮಗೆ ಇಷ್ಟವಾದ ಮಾವು ಖರೀದಿಸಿ ಖುಷಿಪಟ್ಟರು. ಗ್ರಾಹಕರು ಬೆಲೆ ಉತ್ತಮವಾಗಿದೆ ಎಂದು ಹೇಳಿದರೆ, ಬೆಳೆಗಾರರು ಸ್ವಲ್ಪ ಬೆಲೆ ಏರಿಕೆ ಮಾಡುವಂತೆ ಅಧಿಕಾರಿಗಳಲ್ಲಿ ಮನವಿ ಮಾಡುತ್ತಿದ್ದರು. ರೈತರನ್ನು ಉತ್ತೇಜಿಸಲು ತೋಟಗಾರಿಕೆ ಇಲಾಖೆಯಿಂದ ಉಚಿತವಾಗಿ ಮಳಿಗೆಗಳನ್ನು ನೀಡಲಾಗಿದೆ.

ಮೇಳದಲ್ಲಿ ಸಸ್ಯ ಸಂತೆ
ಮಾವು ಮೇಳದ ಜತೆಗೆ ತೋಟಗಾರಿಕೆ ಬೆಳೆಗಳನ್ನು ಪ್ರೋತ್ಸಾಹಿಸಲು ಸಸ್ಯ ಸಂತೆಯನ್ನೂ ಆಯೋಜಿಸಲಾಗಿದೆ. ತೋಟಗಾರಿಕಾ ಕ್ಷೇತ್ರ ನರ್ಸರಿಗಳ ಸಸ್ಯ ಸಂತೆಯಲ್ಲಿ ತೆಂಗು, ಸಪೋಟ, ಪಪ್ಪಾಯಿ, ಅಡಕೆ, ಮಾವು, ನುಗ್ಗೆ, ಸೀಬೆ, ನೇರಳೆ, ನಿಂಬೆ, ಕರಿಬೇವು, ಹಿರಳಿ, ಹುಣಸೆ, ಸೀತಾಫಲ, ಚಕ್ರಮುನಿ, ವೀಳ್ಯದೆಲೆ, ಬೆಟ್ಟದ ನೆಲ್ಲಿ, ಬೆಣ್ಣೆಹಣ್ಣು, ಹಲಸು ಸಸ್ಯಗಳನ್ನು ಪ್ರದರ್ಶಿಸಲಾಗಿದೆ. ಜತೆಗೆ ಯೂಕ, ಸ್ನೇಕ್ ಪ್ಲಾಂಟ್, ಫೈಕಸ್ ಸ್ಟಾರ್ ಲೈಟ್, ಡ್ರಸೀನಾ, ಕ್ರೋಟಾನ್, ಸಂಪಿಗೆ, ಕುಫಿಯಾ, ಲೆಮನ್ ಗ್ರಾಸ್ ಸೇರಿದಂತೆ ಹಲವು ಸಸ್ಯಗಳ ಪ್ರದರ್ಶನ ಹಾಗೂ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.

ಮಾವಿನ ಹಣ್ಣುಗಳ ದರ
ಬಾದಾಮಿ 80 ರೂ.
ರಸಪುರಿ 70 ರೂ.
ಮಲ್ಲಿಕಾ 70 ರೂ.
ಸೇಂದೂರ 50 ರೂ.
ಮಲಗೋವಾ 80 ರೂ.
ತೋತಾಪುರಿ 30 ರೂ.
ಬಾಗನಪಲ್ಲಿ 45 ರೂ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net