

ಮೈಸೂರು: ಮೈಸೂರು ಅರಮನೆ ಆವರಣದಲ್ಲಿ ಶ್ರೀಗಂಧದ ವಸ್ತುಸಂಗ್ರಹಾಲಯ ಸ್ಥಾಪನೆಗೆ ಚಿಂತಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ನಗರದ ಅಶೋಕಪುರಂನ ಅರಣ್ಯಭವನ ಆವರಣದ ಸರ್ಕಾರಿ ಶ್ರೀಗಂಧದ ಕೋಠಿಯಲ್ಲಿರುವ ಶ್ರೀಗಂಧದ ವಸ್ತುಸಂಗ್ರಹಾಲಯವನ್ನು ಸೋಮವಾರ ವೀಕ್ಷಿಸಿ ಮಾತನಾಡಿದರು.
ಅರಣ್ಯಭವನದಲ್ಲಿರುವ ನೂತನ ಮ್ಯೂಸಿಯಂ ಉದ್ಘಾಟನೆ ಮಾಡಲು ಮುಖ್ಯಮಂತ್ರಿಯೊಂದಿಗೆ ಈಗಾಗಲೇ ಸಮಾಲೋಚಿಸಲಾಗಿದೆ. ಅವರೂ ಒಪ್ಪಿಗೆ ನೀಡಿದ್ದಾರೆ. ಆದರೆ, ಅರಣ್ಯ ಭವನದಲ್ಲಿ ಜಾಗ ಚಿಕ್ಕದು ಹಾಗೂ ಹೆಚ್ಚು ಜನರನ್ನು ಸೆಳೆಯುವ ಪ್ರದೇಶದಲ್ಲಿ ಇಲ್ಲ. ಇಲ್ಲಿಗೆ ದೊಡ್ಡ ವಾಹನದಲ್ಲಿ ಭೇಟಿ ನೀಡಲೂ ಕಷ್ಟ. ಹೀಗಾಗಿ, ಇದನ್ನು ಅರಮನೆ ಆವರಣದಲ್ಲಿ ಸ್ಥಾಪಿಸುವ ಬಗ್ಗೆ ಚಿಂತಿಸಲಾಗುತ್ತಿದ್ದು, ಇದರಿಂದ ಹೆಚ್ಚಿನ ಆದಾಯವೂ ಬರಲಿದೆ. ಈ ಬಗ್ಗೆ ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳಲಾಗುವುದು. ಬಳಿಕ ಮುಖ್ಯಮಂತ್ರಿಯ ದಿನಾಂಕವನ್ನು ಗೊತ್ತುಪಡಿಸಿಕೊಂಡು ಉದ್ಘಾಟನೆ ದಿನವನ್ನು ಪ್ರಕಟಿಸಲಾಗುವುದು ಎಂದು ತಿಳಿಸಿದರು.