ಅರಮನೆ ಅಂಗಳದಲ್ಲಿ ವಾದ್ಯ ಸಂಗೀತದ ನಿನಾದ

mysore
Published on

ಮೈಸೂರು: ವಿಶ್ವವಿಖ್ಯಾತ ಅರಮನೆ ಅಂಗಳದಲ್ಲಿ ವಿವಿಧ ವಾದ್ಯ ಸಂಗೀತದ ನಿನಾದ ರಿಂಗಣಿಸಿತು.

ಫಲಪುಷ್ಪಪ್ರದರ್ಶನ-2024ರ ಅಂಗವಾಗಿ ಮೈಸೂರು ಅರಮನೆ ಆಡಳಿತ ಮಂಡಳಿಯ ವತಿಯಿಂದ ಸೋಮವಾರ ಸಂಜೆ ನಡೆದ ಸಂಗೀತ ಕಾರ್ಯಕ್ರಮದಲ್ಲಿ ವಾದ್ಯಮೇಳ ಸಭಿಕರನ್ನು ರಂಜಿಸಿತು.

ಮನೋ ಮ್ಯೂಸಿಕ್ ಲೈನ್ಸ್ ತಂಡದಿಂದ ‘ಟ್ರೆಂಡ್ ಬೀಟ್ಸ್’ ಸಂಗೀತ ಗಮನ ಸೆಳೆಯಿತು. ಗಾಯನ ಇರಲಿಲ್ಲ. ಬರೀ ವಾದ್ಯಗಳ ರಾಗಲಹರಿಯೇ ಇಂಪು ನೀಡಿತು.

ಚಾಮುಂಡೇಶ್ವರಿ ದೇವಿಯ ಮಹಿಷ ಮರ್ಧಿನಿ ಕಥೆಯನ್ನು ಕಟ್ಟಿಕೊಡುವ ‘ಐಗಿರಿ ನಂದಿನಿ’ ಹಾಡಿಗೆ ವಾದ್ಯ ನುಡಿಸುವ ಮೂಲಕ ವಾದ್ಯಗೋಷ್ಠಿ ಶುರುವಾಯಿತು. ಕಾಂತಾರಾ ಸಿನಿಮಾದ ‘ವರಹ ರೂಪಂ’, ‘ಸಿಂಗಾರ ಸಿರಿಯೇ’, ವಿಭಿನ್ನ ರಾಗ ಸಂಯೋಜನೆಯ ಅರೇಬಿಕ್ ಥೀಮ್ ಪ್ರಸ್ತುತ ಪಡಿಸಿದರು. ವಯಲಿನ್ ಥೀಮ್, ಪ್ರಸಿದ್ಧ ಜಾನಪದ ಗೀತ ‘ಸೋಜುಗದ ಸೂಜಿ ಮಲ್ಲಿಗೆ’...ಹೀಗೆ ವಿವಿಧ ಹಾಡುಗಳನ್ನು ಪ್ರಸ್ತುತಪಡಿಸಿದರು.

ರಾಗಲಹರಿಯ ನಡುವೆ ವಿವಿಧ ವಾದ್ಯಗಳ ಜುಗಲ್ ಬಂದಿ ಸಭಿಕರಿಗೆ ರಸದೌತಣವನ್ನೇ ಉಣಬಡಿಸಿತು.

ಕೀ ಬೋರ್ಡ್‌ನಲ್ಲಿ ವೇಣುಗೋಪಾಲ್ ವೆಂಕಿ, ವಯಲಿನ್‌ನಲ್ಲಿ ರಂಜನ್, ಕೊಳಲಿನಲ್ಲಿ ಸುದರ್ಶನ್, ಡ್ರಮ್ಸ್‌ನಲ್ಲಿ ಸುಜಿತ್, ಗೀಟಾರ್‌ನಲ್ಲಿ ರೋನಿ, ಚೆಂಡೆಯಲ್ಲಿ ಭಟ್ಕಳದ ಸುಬ್ರಹ್ಮಣ್ಯ ತಂಡದವರು ಉತ್ತಮ ಸಾಥ್ ನೀಡಿದರು.

ಆಯುಷ್ ಎಂ.ಡಿ. ಮತ್ತು ತಂಡದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಪ್ರಸ್ತುತಪಡಿಸಲಾಯಿತು. ಕೊನೆಯಲ್ಲಿ ಮೃದಂಗ ವಿದ್ವಾನ್ ಆನೂರು ಅನಂತಕೃಷ್ಣ ಶರ್ಮ ಮತ್ತು ತಂಡದಿಂದ ಲಯ-ಲಾವಣ್ಯ ಕಾರ್ಯಕ್ರಮ ಉತ್ತಮವಾಗಿ ಮೂಡಿ ಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net