ಅರಮನೆ ಅಂಗಳದಲ್ಲಿ ಯೋಗ ಸಂಸ್ಕೃತಿ ಅನಾವರಣ

dasara
Published on

ಮೈಸೂರು: ವಿಶ್ವವಿಖ್ಯಾತ ಮೈಸೂರು ಅರಮನೆ ಅಂಗಳದಲ್ಲಿ ವಿದೇಶಿಯರಿಂದ ಯೋಗ ಕಲರವ ಮೇಳೈಸಿತು. ದಸರಾದೊಂದಿಗೆ ಯೋಗ ಸಂಸ್ಕೃತಿ ಅನಾವರಣಗೊಂಡಿತು.


ತಂಗಾಳಿಯ ಚೆಲ್ಲಾಟ, ಮೈಮನ ತಣಿಸಿದ ಮೋಡಗಳ ಮೇಲಾಟ, ಬಿಸಿಯಾದ ದೇಹವನ್ನು ತಂಪೆರೆಸಿದ ಇಬ್ಬನಿಯ ಸೊಬಗಿನ ಪ್ರಕೃತಿ ವಿಸ್ಮಯ ನಡುವೆ ವಿದೇಶಿ ಯೋಗಪಟುಗಳು ಸಾಮೂಹಿಕವಾಗಿ ಯೋಗ ಪ್ರದರ್ಶನ ಮಾಡಿ ಗಮನ ಸೆಳೆದರು.


ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ಯೋಗ ದಸರಾ ಉಪಸಮಿತಿ ಆಯೋಜಿಸಿದ್ದ ಯೋಗಾಭ್ಯಾಸ ಕಾರ್ಯಕ್ರಮದಲ್ಲಿ ಅಂದಾಜು 500 ವಿದೇಶಿಯರು ಪಾಲ್ಗೊಂಡರು. ಇವರೆಲ್ಲ ಯೋಗ ತರಬೇತಿ ಪಡೆಯಲು ನಗರಕ್ಕೆ ಬಂದವರು. ಯೋಗಗುರು ಶರತ್ ಜೋಯಿಸ್ ಮತ್ತು ಅವರ ವಿದೇಶಿ ಶಿಷ್ಯ ವೃಂದದವರು ಅಷ್ಟಾಂಗ ಯೋಗಾಭ್ಯಾಸ ಮಾಡಿದರು.


ಯೋಗದ ಕನವರಿಕೆಯಲ್ಲೇ ಇವರೆಲ್ಲ ನಸುಮುಂಜಾನೆ ಎದ್ದು ಟಿ-ಶರ್ಟ್ ಧರಿಸಿಕೊಂಡು ಅರಮನೆ ಕಡೆ ಮುಖ ಮಾಡಿದ್ದರು. ನೆಲದ ಮೇಲೆ ಮ್ಯಾಟ್ ಹಾಕಿಕೊಂಡು ಆಸೀನರಾಗಿ ಯೋಗ ಮಾಡಲು ಅಣಿಯಾದರು.


ಸಭಾ ಕಾರ್ಯಕ್ರಮ ಮುಗಿದ ಬಳಿಕ 4 ನಿಮಿಷ ಮೊದಲು ಚಲನಕ್ರಿಯೆ ಅಭ್ಯಾಸದೊಂದಿಗೆ ದೇಹವನ್ನು ಸಡಿಲಗೊಳಿಸಿಕೊಂಡು ವಿವಿಧ ಯೋಗ ಭಂಗಿಗಳನ್ನು ಪ್ರದರ್ಶಿಸಿದರು. ಕೊನೆಗೆ ಪ್ರಾಣಾಯಾಮ, ಧ್ಯಾನ ಮತ್ತು ಸಂಕಲ್ಪ, ಓಂಕಾರ ಝೇಂಕರಿಸಿತು.


ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮಾತನಾಡಿ, ಯೋಗ ಮತ್ತು ನ್ಯಾಚುರೋಪಥಿ ಆರೋಗ್ಯವನ್ನು ಸಂರಕ್ಷಣೆ ಮಾಡುವಂತಹ ಅಸ್ತ್ರಗಳು. ಹೆಚ್ಚು ಹಣ ಖರ್ಚು ಮಾಡದೆ ರೋಗವನ್ನು ನಿಯಂತ್ರಣ ಮಾಡಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದರು.


ಹಣ, ಆಸ್ತಿ, ಸಂಪತ್ತು ಕಳೆದುಕೊಂಡರೆ ಮರಳಿ ಪಡೆದುಕೊಳ್ಳಬಹುದು. ಆದರೆ, ಆರೋಗ್ಯ ಕೆಟ್ಟರೆ ಅದು ತುಂಬಲಾರದ ನಷ್ಟ. ನಿತ್ಯ ನಿಯಮಿತವಾದ ವ್ಯಾಯಾಮ, ನಡಿಗೆ, ಕ್ರೀಡಾಭ್ಯಾಸದ ಜತೆಗೆ ಮನಸ್ಸನ್ನು ಉಲ್ಲಾಸದತ್ತ ಕೊಂಡೊಯ್ಯುವ ಯೋಗಾಭ್ಯಾಸವೂ ರೋಗಕ್ಕೆ ಉತ್ತಮವಾದ ಚಿಕಿತ್ಸಾ ವಿಧಾನವಾಗಿದೆ ಎಂದು ತಿಳಿಸಿದರು.


ಮಾನಸಿಕ ಆರೋಗ್ಯ, ದೈಹಿಕ ಸದೃಢತೆಗೆ ಯೋಗ ಉಪಯುಕ್ತ. ಆರೋಗ್ಯದಲ್ಲಿ ಸಮತೋಲನ ಕಾಯ್ದುಕೊಳ್ಳಲು ನಿರಂತರ ಯೋಗಾಭ್ಯಾಸ ಸಹಕಾರಿ. ವಿಶ್ವದ ಎಲ್ಲ ಜನರು ಒಂದೇ ಕುಟುಂಬದವರು ಎಂಬ ಸಂದೇಶವನ್ನು ಯೋಗ ಸಾರುತ್ತದೆ ಎಂದರು.


ಮೈಸೂರು ಸಾಂಸ್ಕೃತಿಕ ನಗರ ಮಾತ್ರವಲ್ಲದೆ, ಯೋಗ ನಗರಿ ಎಂದೂ ಪ್ರಸಿದ್ಧಿ ಪಡೆದಿದೆ. ರಾಜರ ಕಾಲದಿಂದಲೂ ಯೋಗವನ್ನು ಪ್ರೋತ್ಸಾಹಿಸಲಾಗುತ್ತಿದೆ. ದೇಶಕ್ಕೆ ಮಾದರಿ ಆಡಳಿತ ನೀಡಿದ ನಾಲ್ವಡಿ ಕೃಷ್ಣರಾಜ ಒಡೆಯರ ದೂರದೃಷ್ಟಿಯನ್ನು ಆಧರಿಸಿ ಈ ಬಾರಿಯ ದಸರಾವನ್ನು ಆಯೋಜನೆ ಮಾಡಲಾಗಿದೆ ಎಂದರು.


ಆರೋಗ್ಯ ಸಚಿವನಾಗಿದ್ದ ಕಾಲದಿಂದಲೂ ಯೋಗಭ್ಯಾಸಕ್ಕೆ ಪ್ರೋತ್ಸಾಹ ನೀಡುತ್ತಾ ಬಂದಿದ್ದು, 2017ರಲ್ಲಿ 50 ಸಾವಿರಕ್ಕೂ ಹೆಚ್ಚು ಯೋಗಪಟುಗಳೊಂದಿಗೆ ಅಂತಾರಾಷ್ಟ್ರೀಯ ಯೋಗದಿನವನ್ನು ಚಾಮುಂಡಿಬೆಟ್ಟದ ತಪ್ಪಲಿನ ರೇಸ್ ಕೋರ್ಸ್ ಮೈದಾನದಲ್ಲಿ ಆಚರಿಸಿ ಗಿನ್ನೆಸ್ ದಾಖಲೆ ಮಾಡಲಾಗಿತ್ತು ಎಂದು ಮೆಲುಕು ಹಾಕಿದರು.


ಮೇಯರ್ ಶಿವಕುಮಾರ್, ಉಪ ಮೇಯರ್ ಡಾ.ಜಿ.ರೂಪಾ, ಯೋಗ ದಸರಾ ಉಪ ಸಮಿತಿ ಅಧ್ಯಕ್ಷ ದೇವರಾಜು, ಉಪಾಧ್ಯಕ್ಷರಾದ ಹೇಮಂತ್, ಮಹೇಶ್, ಉಪ ವಿಶೇಷಾಧಿಕಾರಿ ಕೆ.ರಮ್ಯಾ, ಕಾರ್ಯಾಧ್ಯಕ್ಷೆ ಡಿ.ಎಂ.ರಾಣಿ, ಕಾರ್ಯದರ್ಶಿ ಡಾ.ಪುಷ್ಪಾ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net