

ಮೈಸೂರು: ವಿಶ್ವವಿಖ್ಯಾತ ಮೈಸೂರು ಅರಮನೆ ಆವರಣದಲ್ಲಿ ಮಂಗಳವಾರ ಬೆಳಗ್ಗೆ ಬಿಡಿಸಿದ ಚಿತ್ತಾಕರ್ಷಕ ವೈವಿಧ್ಯಮಯ ರಂಗೋಲಿಗಳು ಕಣ್ಮನ ಸೆಳೆದವು.
ದಸರಾ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಇಲಾಖೆ ಮತ್ತು ಮಹಿಳಾ ದಸರಾ ಉಪಸಮಿತಿ ಸಹಯೋಗದಲ್ಲಿ ಆಯೋಜಿಸಿದ್ದ ರಂಗೋಲಿ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ 180 ಮಹಿಳೆಯರು ಉತ್ಸಾಹದಿಂದ ಪಾಲ್ಗೊಂಡು ಸಂಭ್ರಮಿಸಿದರು. ಜತೆಗೆ, ತಮ್ಮದೇ ಆದ ವಿಭಿನ್ನ ಕಲ್ಪನೆಯಲ್ಲಿ ರಂಗವಲ್ಲಿ ಬಿಡಿಸುವ ಮೂಲಕ ಗಮನ ಸೆಳೆದರು.
ತೀವ್ರ ಪೈಪೋಟಿಯಲ್ಲಿ ಅಂತಿಮವಾಗಿ ಮೈಸೂರಿನ ಶಾರದಾದೇವಿನಗರದ ಲಕ್ಷ್ಮೀ ಪ್ರಥಮ, ಸಂಜನಾ ದ್ವಿತೀಯ ಮತ್ತು ದಿವ್ಯಶ್ರೀ ತೃತೀಯ ಸ್ಥಾನ ಪಡೆದರು. ಹುಲಿ ಮೇಲೆ ಕುಳಿತ ಚಾಮುಂಡೇಶ್ವರಿ ತಾಯಿಯನ್ನು ತುಮಕೂರಿನ ನಿರ್ಮಲಾ ಅವರು ಬಿಡಿಸಿದ್ದರು.
ದುರ್ಗಾ ದೇವಿ ಮತ್ತು ದೇವಿಗೆ ಕಾವಲಾಗಿರುವ ಆನೆಯ ಚಿತ್ರವನ್ನು ಸಿಂಧುಲಕ್ಷ್ಮೀ ಬಿಡಿಸಿದ್ದರೆ, ಹೆಣ್ಣಾಗಿ ಹುಟ್ಟಿರುವುದಕ್ಕೆ ನಾವೆಲ್ಲ ಹೆಮ್ಮೆಪಡೋಣ ಎಂಬ ಪರಿಕಲ್ಪನೆಯಲ್ಲಿ ದಾವಣಗೆರೆಯ ಲಕ್ಷ್ಮೀ ಅವರ ವಿಶಿಷ್ಟ ರಂಗೋಲಿ ನೋಡುಗರನ್ನು ಆಕರ್ಷಿಸಿತು. ನಂದಿ ಮತ್ತು ಶಿವಲಿಂಗವನ್ನು ವಿಜಯನಗರದ ಸುನಿತಾ ಅವರು ವಿವಿಧ ಬಣ್ಣಗಳನ್ನು ಬಳಸಿದ ರಂಗೋಲಿಯಲ್ಲಿ ಕಟ್ಟಿಕೊಟ್ಟರು.
ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಮಕ್ಕಳು ಮೊಬೈಲ್ ಗೀಳಿಗೆ ಪ್ರಭಾವಿತರಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮುಳುಗಿರುತ್ತಾರೆ. ಹೀಗಾಗಿ ಅದರ ಪರಿಕಲ್ಪನೆಯಲ್ಲಿ ‘ಡೋಂಟ್ ಬಿ ಅಡಿಕ್ಟೆಡ್’ ಶೀರ್ಷಿಕೆಯಲ್ಲಿ ನಂಜನಗೂಡು ತಾಲೂಕಿನ ಟಿ.ಡಿ.ಶ್ವೇತಾ ಅವರು ಬಿಡಿಸಿದ ರಂಗೋಲಿ ಜಾಗೃತಿ ಜ್ಯೋತಿ ಬೆಳಗಿಸಿತು. ಸರ್ಕಾರದ ಗೃಹಜ್ಯೋತಿ ಯೋಜನೆಯಿಂದ ಸಾಕಷ್ಟು ಮನೆಗಳಲ್ಲಿ ದೀಪ ಬೆಳಗಿದೆ ಎಂಬ ನಿಟ್ಟಿನಲ್ಲಿ ಮೈಸೂರಿನ ಸ್ಪಂದನಾ ಅವರು ಮಹಿಳೆ ಮತ್ತು ದೀಪದ ರಂಗೋಲಿ ಕುತೂಹಲ ಮೂಡಿಸಿತು.
ಹೀಗೆ ರಂಗೋಲಿಯ ಚುಕ್ಕಿ ಲೆಕ್ಕಾಚಾರ ಒಂದೆಡೆಯಾದರೆ ಯಾವ ಗೆರೆಗೆ ಎಲ್ಲಿಂದ ಗೆರೆ ಹಾಕಬೇಕು, ಯಾವ ಹೂವಿಗೆ ಯಾವ ಬಣ್ಣ ತುಂಬಬೇಕು ಎಂಬ ಸ್ಪರ್ಧಿಗಳು ತಲೆಕೆಡಿಸಿಕೊಂಡರು. ಜತೆಗೆ, ತಾವು ಬಿಡಿಸುವ ರಂಗವಲ್ಲಿ ಚೆಂದವನ್ನು ಹೆಚ್ಚಿಸುವಲ್ಲಿ ಮುಳುಗಿದ್ದರು.
ಅಂತೆಯೇ ಚಾಮುಂಡಿ ಬೆಟ್ಟದ ಗೋಪುರ, ‘ಓಂ’ನಲ್ಲಿ ಮೂಡಿರುವ ಗಣೇಶ, ಅರಸರ ಲಾಂಛನವಾದ ಗಂಡಭೇರುಂಡ, ನವಿಲಿನ ಚಿತ್ರ, ದಸರಾ ಆನೆ, ರಥ, ಬಾಲಕೃಷ್ಣ ಹೀಗೆ ವಿವಿಧ ಆಕೃತಿಯ ರಂಗೋಲಿ ಅರಮನೆ ಅಂಗಳದಲ್ಲಿ ಮೂಡಿದ್ದವು. ವಿಶಿಷ್ಟ, ವೈವಿಧ್ಯಮಯ ರಂಗೋಲಿಯನ್ನು ನೋಡುವ ಅವಕಾಶ ಒಂದೆಡೆ ದೊರೆಯಿತು.
ಇತ್ತೀಚಿನ ವರ್ಷದಲ್ಲಿ ಮೃತಪಟ್ಟ ಅಂಬಾರಿ ಆನೆ ‘ಅರ್ಜುನ’ ಸ್ಮರಣೆ ಸಹ ಮಾಡಲಾಯಿತು. ಕುರುಬಾರಹಳ್ಳಿಯ ಕಲಾವಿದ ಪುನೀತ್ ಅವರು ಅರ್ಜುನ ಆನೆಯ ಚಿತ್ರವನ್ನು ರಂಗೋಲಿಯಲ್ಲಿ ಕಟ್ಟಿಕೊಟ್ಟರು.
ರಂಗೋಲಿಯಲ್ಲಿ ಮೂಡಿದ ಅರ್ಜುನ ಆನೆಗೆ ಪುಷ್ಪಾರ್ಚನೆ ಸಲ್ಲಿಸಿ ರಂಗೋಲಿ ಸ್ಪರ್ಧಾ ಕಾರ್ಯಕ್ರಮವನ್ನು ಶಾಸಕ ಟಿ.ಎಸ್.ಶ್ರೀವತ್ಸ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ದಸರಾ ಮಹೋತ್ಸವದ ಅಂಗವಾಗಿ ವೈವಿಧ್ಯಮಯ ಕಾರ್ಯಕ್ರಮ ಆಯೋಜಿಸಲಾಗಿದ್ದು, ರಂಗೋಲಿ ಸ್ಪರ್ಧೆಯಿಂದ ನಾಡಹಬ್ಬ ದಸರಾಗೆ ಮತ್ತಷ್ಟು ಕಳೆಕಟ್ಟಿದೆ ಎಂದು ತಿಳಿಸಿದರು.
ಸಮಿತಿ ಉಪ ವಿಶೇಷಾಧಿಕಾರಿ ಬಿ.ಎಂ.ಸವಿತಾ, ಕಾರ್ಯಾಧ್ಯಕ್ಷ ಬಿ.ಬಸವರಾಜು, ತೀರ್ಪುಗಾರರಾದ ಮೀನಾಕ್ಷಿ ರವಿಕುಮಾರ್, ಸ್ತ್ರೀಶಕ್ತಿ ಒಕ್ಕೂಟದ ಜಿಲ್ಲಾಧ್ಯಕ್ಷೆ ಪ್ರೇಮಕುಮಾರಿ, ದಸರಾ ಉಪಸಮಿತಿ ಕಾರ್ಯದರ್ಶಿ ಚರಿತಾ ಇನ್ನಿತರರಿದ್ದರು.