

ಮೈಸೂರು: ಮಲ್ಲಿಗೆ ಚೆಲುವೆ, ಮೈಸೂರಿನ ಕುವರಿ ಅನನ್ಯಾ ಭಟ್ ಜಾನಪದ ಗಾನ ವೈಭವದ ಝೇಂಕಾರ ರಿಂಗಣಿಸಿತು.
ನಾಡಹಬ್ಬ ದಸರಾ ಮಹೋತ್ಸವ ಅಂಗವಾಗಿ ದೀಪಾಲಂಕಾರದಿಂದ ಮಿನುಗುತ್ತಿದ್ದ ಅರಮನೆ ವೇದಿಕೆಯಲ್ಲಿ ಬುಧವಾರ ಸಂಜೆ ನಡೆದ ಮೂರನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಾನಪದ ಸೊಗಡಿನ ಗೀತೆಗಳನ್ನು ಸಭಿಕರಿಗೆ ಉಣಬಿಡಿಸಿ ಮನಗೆದ್ದರು.
ಕೆಜಿಎಫ್ ಚಿತ್ರದ ಧೀರ...ಧೀರ ಈ ಸುಲ್ತಾನ..’ ಹಾಡಿನೊಂದಿಗೆ ವೇದಿಕೆ ಏರಿ ಸಭಿಕರಿಗೆ ಜೋಶ್ ತುಂಬಿದರು. ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿರುವ ‘ಮೇಲೆ ನೀಲಿ ಅಂಬರ ಅಲ್ಲಿ ತೇಲೋ ಚಂದಿರ ಅದಕ್ಕೆ ಕಾತುರ ಕೆರೆಯ ಮೇಲೆ ನೆರಳಿದೆ ಕಿರಣಗಳು...’ ಗೀತೆಯೊಂದಿಗೆ ಮನರಂಜಿಸಿದರು.
‘ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ...’ ಹಾಡಿನೊಂದಿಗೆ ಕನ್ನಡ ಕಂಪನ್ನೂ ಸಹ ಹರಿಸಿದರು. ಮೈಸೂರು ಅನಂತಸ್ವಾಮಿ ಸಂಗೀತ ನಿರ್ದೇಶನದ ‘ನನ್ ಗಂಗೆ ರೂಪಾ...’ ಗಾಯನ ಸಭಿಕರನ್ನು ಭಾವಗೀತೆಯ ಲೋಕಕ್ಕೆ ಕರೆದುಕೊಂಡು ಹೋಯಿತು.
ರಾಗಲಹರಿಯ ಉೇ...ಹಾಡಿಗೆ ಸಂಗೀತ ರಸಿಕರು ತಲೆದೂಗಿದರು. ‘ಮಹದೇವ ಮಹದೇವ..’ ಹಾಡಿನೊಂದಿಗೆ ಮಲೆ ಮಹದೇಶ್ವರ ದೇವರನ್ನು ಸ್ಮರಿಸಿದರು. ಬಳಿಕ ‘ಸೋಜುಗಾದ ಸೂಜುಮಲ್ಲಿಗೆ ಮಾದೇವ, ನಿಮ್ಮ ಮಂಡೆ ಮ್ಯಾಲೆ ದುಂಡು ಮಲ್ಲಿಗೆ... ’ ಹಾಡಿನ ಗಾಯನಕ್ಕೆ ಜನಸಮೂಹ ಕುಣಿದು ಕುಪ್ಪಳಿಸಿತು. ‘ಕೇಳೋ ಮಾದೇವ ಮನಸ್ಸುನಾ ಜೀವ....’ ಸೇರಿದಂತೆ ವಿವಿಧ ಗೀತೆಗಳನ್ನು ಹಾಡಿ ನೆರೆದವರನ್ನು ಮನಸೂರೆಗೊಳಿಸಿದರು.
ಅನೂಪ್ ಸೀಳಿನ್ ಅವರ ಸಂಗೀತ ನಿರ್ದೇಶನದ ಡಾ.ವಿ ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯವುಳ್ಳ ‘ವೀರಂ’ ಚಿತ್ರದ ಎಲ್ಲರ ಮೆಚ್ಚುಗೆ ಗಳಿಸಿರುವಂತಹ ಕೇಳೋ ಮಾದೇವ... ಶಿವಾ..ಶಿವಾ.. ಹರ..ಹರ.. ಹಾಡಿನ ಮೋಡಿಗೆ ಪ್ರೇಕ್ಷಕರು ಮಂತ್ರ ಮುಗ್ಧರಾದರು.
ಸಾಹಿತಿ ಬಿ.ಆರ್.ಲಕ್ಷ್ಮಣರಾವ್ ಅವರ ಮೃತ್ಯುಂಜಯ ದೊಡ್ಡವಾಡ ಅವರ ಸಂಗೀತ ಸಂಯೋಜನೆಯುಳ್ಳ ಜಾನಪದ ಗೀತೆಯಾದ ಬಾಳ ಕಡಲಿನಲ್ಲಿ ಎರಡು ಪ್ರೀತಿಯ ದೋಣಿ ಗೀತೆಯೊಂದಿಗೆ ರಸದೌತಣ ಬಡಿಸಿದರು.
ಅನನ್ಯಾ ಭಟ್ ಗಾಯನಕ್ಕೆ ಸಹ ಗಾಯಕರಾದ ವಿಸ್ಮಯ, ಪ್ರಕೃತಿ, ಅನಿರುದ್ಧ, ಗಿರೀಶ್ ಧ್ವನಿಗೂಡಿಸಿದರು. ಪಕ್ಕವಾದ್ಯಗಳಲ್ಲಿ ವೇಣು, ಆಕಾಶ್ ಪರ್ವ, ರವಿಶಂಕರ್, ಅಭಿಷೇಕ್, ಮಂಜುನಾಥ್ ಇನ್ನಿತರರು ಉತ್ತಮ ಸಾಥ್ ಕೊಟ್ಟರು.
ಇದಕ್ಕೂ ಮುನ್ನ, ಚಂದನ ಕಲಾತಂಡದಿಂದ ಸುಗಮ ಸಂಗೀತ ರಂಜಿಸಿದರೆ, ವಿದ್ವಾನ್ ಸಾಗರ ಸಿಂಗ್ ಮತ್ತು ತಂಡದವರ ಭರತನಾಟ್ಯ ಗಮನ ಸೆಳೆಯಿತು. ಸಾಯಿಶಿವ ಲಕ್ಷ್ಮೀ ಕೇಶವ ಅವರು ಕರ್ನಾಟಕ ಫ್ಯೂಷನ್ ವಾದ್ಯ ಸಂಗೀತ ನಡೆಸಿಕೊಟ್ಟರು.
ಡಾ.ಆರ್.ಎಸ್.ನಂದಕುಮಾರ್ ಅವರು ಗಾಯನಕ್ಕೆ ಚಿತ್ರಕಲಾವಿದ ರಘುಪತಿ ಭಟ್ ಅವರು ವಿಷ್ಣುವಿನ ವಿಶ್ವರೂಪ ಬಿಡಿಸುವುದರೊಂದಿಗೆ ಗೀತಚಿತ್ರ ಕಾರ್ಯಕ್ರಮ ಪ್ರಸ್ತುತಗೊಂಡಿತು. ಡಾ.ಮೈಸೂರು ಮಂಜುನಾಥ, ಸುಮಂತ್ ಮಂಜುನಾಥ, ಮಾಳವಿ ಅವರಿಂದ ವಯೋಲಿನ್ ಟ್ರಯೋ ಕಾರ್ಯಕ್ರಮ ನಡೆಯಿತು.