ಅರಮನೆ ಅಂಗಳ ಪ್ರವೇಶಿಸಿದ ಅಭಿಮನ್ಯು ನೇತೃತ್ವದ ದಸರಾ ಗಜಪಡೆ

15
Published on

ಮೈಸೂರು: ನಾಡಹಬ್ಬ ದಸರಾದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಮೊದಲ ತಂಡದ ಗಜಪಡೆಯನ್ನು ಅರಮನೆ ಮುಖ್ಯದ್ವಾರದಲ್ಲಿ ಮಂಗಳವಾರ ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು.
ಅರಮನೆಯ ಜಯಮಾರ್ತಾಂಡ ದ್ವಾರದಲ್ಲಿ ಮಧ್ಯಾಹ್ನ 12.01 ರಿಂದ 12.51ರೊಳಗೆ ಅಭಿಜಿತ್ ಲಗ್ನದಲ್ಲಿ ಅಂಬಾರಿ ಆನೆ ಅಭಿಮನ್ಯು ನೇತೃತ್ವದ ವಿಜಯ, ವರಲಕ್ಷ್ಮೀ, ಧನಂಜಯ, ಮಹೇಂದ್ರ, ಭೀಮ, ಗೋಪಿ ಹಾಗೂ ಪ್ರಥಮ ಬಾರಿಗೆ ದಸರೆಯಲ್ಲಿ ಭಾಗವಹಿಸುತ್ತಿರುವ ಕಂಜನ್ ಆನೆಗಳಿಗೆ ಪಾದಪೂಜೆ, ದ್ವಾರಪಾಲಕ ಪೂಜೆ, ಚಾಮರಸೇವೆ ಮಾಡಿ ಪುಷ್ಪಾರ್ಚನೆ ಮಾಡಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿ ಗಜಪಡೆಯನ್ನು ಜಿಲ್ಲಾಡಳಿತ, ಅರಮನೆ ಆಡಳಿತ ಮಂಡಳಿ ಪರವಾಗಿ ಸ್ವಾಗತಿಸಿದರು.
ಜಾನಪದ ಕಲಾತಂಡಗಳ ನೃತ್ಯ, ಪೂರ್ಣಕುಂಭ ಸ್ವಾಗತ ಮತ್ತು ಮಂಗಳವಾದ್ಯ, ಪೊಲೀಸ್ ಬ್ಯಾಂಡ್ ನಿನಾದದೊಂದಿಗೆ ಜಯಮಾರ್ತಾಂಡ ದ್ವಾರದಿಂದ ಅರಮನೆಯ ಅಂಗಳಕ್ಕೆ ಬರಮಾಡಿಕೊಳ್ಳಲಾಯಿತು. ಅಭಿಮನ್ಯು ನೇತೃತ್ವದ ಗಜಪಡೆ ಗಾಂಭೀರ್ಯದಿಂದ ಹೆಜ್ಜೆ ಹಾಕಿದವು. ಮಹಿಳಾ ತಂಡದ ಡೊಳ್ಳುಕುಣಿತ ಗಮನ ಸೆಳೆಯಿತು.
ಅಗತ್ಯ ಸಾಮಗ್ರಿ ವಿತರಣೆ:
ಆನೆಗಳಿಗೆ ಗರಿಕೆ, ಬೆಲ್ಲ, ಕಬ್ಬು, ಮೋದಕ, ಕಡುಬು, ಪಂಚಕಜ್ಜಾಯವನ್ನು ತಿನ್ನಿಸಲಾಯಿತು. ಗಜಪಡೆಯೊಂದಿಗೆ ಆಗಮಿಸಿರುವ ಮಾವುತರು, ಕಾವಾಡಿಗಳಿಗೆ ಅಡುಗೆ ವಸ್ತುಗಳು ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ವಿತರಿಸಲಾಯಿತು. ಅಲ್ಲದೆ, ದಸರಾ ಯಶಸ್ವಿಗೊಳಿಸಲು ಸಹಕಾರ ನೀಡುವಂತೆ ಕೋರಿ ದಸರಾ ವಿಶೇಷ ಕರ್ತವ್ಯ ಅಧಿಕಾರಿಗಳಿಗೂ ತಾಂಬೂಲ ನೀಡಲಾಯಿತು.
ಅರ್ಥಪೂರ್ಣ ಆಚರಣೆ:
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಮೈಸೂರಿನ ಪರಂಪರೆ ಮತ್ತು ವಿಜಯನಗರದ ವೈಭವವನ್ನು ಪ್ರತಿಬಿಂಬಿಸುವಂತೆ ನಾಡಹಬ್ಬ ದಸರಾವನ್ನು ಅತ್ಯಂತ ಶಿಸ್ತುಬದ್ಧ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಗುವುದು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಅರಮನೆ ಮಂಡಳಿ ಹಾಗೂ ಪೊಲೀಸ್ ಇಲಾಖೆಗೆ ವಿಶೇಷ ಜವಾಬ್ದಾರಿ ನೀಡಲಾಗಿದೆ ಎಂದು ಹೇಳಿದರು.
ಪ್ರತಿನಿತ್ಯ ಪೊಲೀಸ್ ಬಂದೋಬಸ್ತ್‌ನಲ್ಲಿ ಗಜಪಡೆಯ ತಾಲೀಮು ನಡೆಯಲಿದೆ. ದಸರಾ ಮಹೋತ್ಸವದಲ್ಲಿ ಭಾಗವಹಿಸುವ ಆನೆಗಳ ಮಾವುತರು, ಕಾವಾಡಿಗಳು ಮತ್ತವರ ಕುಟುಂಬಗಳ ವಾಸ್ತವ್ಯಕ್ಕೆ ಮೂಲಸೌಕರ್ಯಗಳನ್ನು ಒದಗಿಸಲಾಗಿದೆ. ಅರಮನೆ ಅಂಗಳದಲ್ಲಿ 30ಕ್ಕೂ ಹೆಚ್ಚು ಸುಸಜ್ಜಿತ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಲಾಗಿದೆ ಎಂದರು.
ಆನೆಗಳ ಜತೆ ಸುಮಾರು ಎರಡು ತಿಂಗಳ ಕಾಲ ಅರಮನೆ ಆವರಣದಲ್ಲಿ ಮಾವುತರು ಮತ್ತು ಕಾವಾಡಿಗರ ಕುಟುಂಬ ಬೀಡು ಬಿಡುವುದರಿಂದ ಮೂಲಸೌಲಭ್ಯದ ಜತೆಗೆ, ಅವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ತಾತ್ಕಾಲಿಕ ಶಾಲೆ ಆರಂಭಿಸಲಾಗುವುದು. ಈ ಅವಧಿಯಲ್ಲಿ ಶಿಕ್ಷಕರನ್ನು ನೇಮಿಸಿ ಮಕ್ಕಳಿಗೆ ವಿದ್ಯಾಭ್ಯಾಸ ನಿಲ್ಲದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಕಾಮಗಾರಿ ಅನುದಾನ ಬಿಡುಗಡೆ:
ದಸರಾ ಸಂಬಂಧ ನಗರದಲ್ಲಿ ಕಾಮಗಾರಿ ಕೈಗೊಳ್ಳಲು ಅಗತ್ಯ ಅನುದಾನ ಬಿಡುಗಡೆಗೊಳಿಸುವಂತೆ ಮುಖ್ಯಮಂತ್ರಿ ಈಗಾಗಲೇ ಆರ್ಥಿಕ ಇಲಾಖೆಗೆ ಸೂಚನೆ ನೀಡಿದ್ದಾರೆ. ಈ ಹಿಂದೆ ನಾನು ಲೋಕೋಪಯೋಗಿ ಸಚಿವನಾಗಿದ್ದಾಗಲೇ ಮೈಸೂರಿನಲ್ಲಿ ಅನೇಕ ಗುಣಾತ್ಮಕ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲಾಗಿದೆ. ಅಂತೆಯೆ, ದಸರಾಗೆ ಅಗತ್ಯವಿರುವ ಕಾಮಗಾರಿಯನ್ನು ಈ ಬಾರಿಯೂ ಕೈಗೊಳ್ಳಲಾಗುವುದು ಎಂದು ಡಾ.ಎಚ್.ಸಿ.ಮಹದೇವಪ್ಪ ಮಾಹಿತಿ ನೀಡಿದರು.
ಬರಪೀಡಿತ ತಾಲೂಕು ಘೋಷಣೆ:
ಜಿಲ್ಲೆಯಲ್ಲಿ ಬರಪೀಡಿತ ತಾಲೂಕುಗಳ ಘೋಷಣೆಗೆ ಸಂಬಂಧಿಸಿದಂತೆ ಮಾನದಂಡಗಳ ಮುಖೇನ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು. ಸದ್ಯ ಎಚ್.ಡಿ.ಕೋಟೆ ಮತ್ತು ತಿ.ನರಸೀಪುರ ಬರಪೀಡಿತ ತಾಲೂಕುಗಳು ಎಂಬ ವರದಿ ಇದೆ. ಮಳೆ ಪ್ರಮಾಣವನ್ನು ಗಮನಿಸಿ ಸಚಿವ ಸಂಪುಟ ಸಭೆಯಲ್ಲಿ ಎಲ್ಲವನ್ನೂ ಕೂಲಂಕಷವಾಗಿ ಚರ್ಚೆ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.
ಮೇಯರ್ ಶಿವಕುಮಾರ್, ಉಪ ಮೇಯರ್ ರೂಪಾ, ಸಂಸದ ಪ್ರತಾಪಸಿಂಹ, ಶಾಸಕರಾದ ಕೆ.ಹರೀಶ್‌ಗೌಡ, ಟಿ.ಎಸ್.ಶ್ರೀವತ್ಸ, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಗಾಯತ್ರಿ, ನಗರಪಾಲಿಕೆ ಆಯುಕ್ತ ಅಸಾದ್ ಉರ್ ರೆಹಮಾನ್ ಷರೀಫ್, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್, ಅರಣ್ಯ ಸಂರಕ್ಷಣಾಧಿಕಾರಿ ಮಾಲತಿಪ್ರಿಯಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್‌ಕುಮಾರ್, ಅರಮನೆ ಮಂಡಳಿ ಉಪನಿರ್ದೇಶಕ ಸುಬ್ರಹ್ಮಣ್ಯ ಇತರರು ಉಪಸ್ಥಿತರಿದ್ದರು.

ಎಚ್.ಡಿ.ಕೋಟೆಯಲ್ಲಿ ಹುಲಿ ಸೆರೆ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಕಾಡಂಚಿನ ಜನರಿಗೆ ರಕ್ಷಣೆ ನೀಡುವ, ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು. ಜಿಲ್ಲೆಯಲ್ಲಿ ಮಾನವ-ಪ್ರಾಣಿ ಸಂಘರ್ಷ ಹೆಚ್ಚಾಗಿದ್ದು, ಸಂಘರ್ಷ ತಡೆಗೆ ಈ ಹಿಂದೆಯೇ ಟಾಸ್ಕ್‌ಫೋರ್ಸ್ ರಚನೆ ಮಾಡಲಾಗಿದೆ.
ಡಾ.ಎಚ್.ಸಿ.ಮಹದೇವಪ್ಪ, ಜಿಲ್ಲಾ ಉಸ್ತುವಾರಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net