ಅರಬೈಲ್ ಘಟ್ಟದಲ್ಲಿ ಲಾರಿ ಪಲ್ಟಿ

12sdp3
Published on

ಯಲ್ಲಾಪುರ: ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ತಾಲೂಕಿನ ಅರಬೈಲ್ ಘಟ್ಟದಲ್ಲಿ ನಡೆದಿದೆ. ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಕಟ್ಟಿಗೆಯ ಬಾಗಿಲು ಹಾಗೂ ಇತರ ವಸ್ತುಗಳನ್ನು ತುಂಬಿಕೊಂಡು ಹೊರಟಿದ್ದ ಲಾರಿ ಅರಬೈಲ್​ಗಿಂತ ಸ್ವಲ್ಪ ಹಿಂದಿನ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಲಾರಿಯಲ್ಲಿದ್ದ ಸಾಮಗ್ರಿಗಳೆಲ್ಲಾ ಚೆಲ್ಲಾಪಿಲ್ಲಿಯಾಗಿದ್ದು, ಲಾರಿ ಜಖಂಗೊಂಡಿದೆ. ಹೆದ್ದಾರಿಯ ಮಧ್ಯದಲ್ಲಿಯೇ ಲಾರಿ ಪಲ್ಟಿಯಾದ ಕಾರಣ ಕೆಲಕಾಲ ವಾಹನ ಸಂಚಾರಕ್ಕೆ ವ್ಯತ್ಯಯ ಉಂಟಾಯಿತು. ಪೊಲೀಸರು ಸ್ಥಳಕ್ಕಾಗಮಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಚಾಲಕ ಹರಿಯಾಣದ ಜಾವೇದ್ ಖಾನ್ ಮೆಹಮೂದ್ ಖಾನ್ ವಿರುದ್ಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಾರಿ ಪಲ್ಟಿಯಾಗಿ ಚಾಲಕ ಸಾವು
ಸಿದ್ದಾಪುರ
: ಲಾರಿ ಪಲ್ಟಿಯಾಗಿ ಚಾಲಕ ಮೃತಪಟ್ಟ ಘಟನೆ ತಾಲೂಕಿನ ಸಾಗರ- ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯ ಆಡುಕಟ್ಟಾ ಸಮೀಪ ಶನಿವಾರ ಸಂಜೆ ಸಂಭವಿಸಿದೆ. ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪಟರಪಲ್ಲಿಯ ಬಿಗಬಾಸ್ ಗಜೇಂದ್ರ ಮೃತಪಟ್ಟ ಚಾಲಕ ಎಂದು ಗುರುತಿಸಲಾಗಿದೆ. ಲಾರಿ ಪೈಪ್​ಗಳನ್ನು ತುಂಬಿಕೊಂಡು ತಿರುಪತಿಯಿಂದ ಕಾರವಾರಕ್ಕೆ ತೆರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ. ಕ್ಲೀನರ್ ವೆಂಟಕೇಶ ಚಿನ್ನಪ್ಪ ಎಂಬಾತನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಈತನನ್ನು ಸಿದ್ದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net