

ಭದ್ರಾವತಿ: ಕಳೆದೆರಡು ದಿನಗಳಿಂದ ಅರಬಿಳಚಿ ಗ್ರಾಪಂ ಕಚೇರಿ ಎದುರು ಡಿಎಸ್‌ಎಸ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಅರಬಿಳಚಿ ಗ್ರಾಮಸ್ಥರು ಶನಿವಾರ ಪ್ರತಿಭಟನೆಯನ್ನು ಹಿಂಪಡೆದರು.
ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಪಿಡಿಒ ಹನುಮಂತಪ್ಪ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿ ಆದೇಶ ಮಾಡಿದ ಹಿನ್ನೆಲೆಯಲ್ಲಿ ಹೋರಾಟಗಾರರು ತಮ್ಮ ಹೋರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದರು.
ನರೇಗಾ ಕೂಲಿ ಸೃಷ್ಟಿ ಸೇರಿದಂತೆ ಗ್ರಾಮಕ್ಕೆ ಮೂಲ ಸೌಕರ್ಯ ಒದಗಿಸುವಲ್ಲಿ ಸಾಕಷ್ಟು ಅವ್ಯವಹಾರ ನಡೆಸಿರುವ ಅರಬಿಳಚಿ ಪಿಡಿಒ ಅಮಾನತು ಮಾಡದೆ ಇದ್ದಲ್ಲಿ ಮತದಾನ ಬಹಿಷ್ಕರಿಸಲಾಗುವುದು ಎಂದು ಪಟ್ಟು ಹಿಡಿದು ಗ್ರಾಪಂ ಕಚೇರಿ ಮುಂದೆ ಕಳೆದ ಎರಡು ದಿನಗಳಿಂದ ಪ್ರತಿಭಟನೆ ಕುಳಿತಿದ್ದ ಅರಬಿಳಚಿ ಗ್ರಾಮಸ್ಥರು ಶನಿವಾರ ತಾಲೂಕು ಪಂಚಾಯಿತಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಬಿಸಿಲಿನಲ್ಲಿಯೆ ಕುಳಿತು ಪ್ರತಿಭಟನೆ ನಡೆಸುತ್ತಿದ್ದ ಗ್ರಾಮಸ್ಥರು ಹಾಗೂ ಮುಖಂಡರಿಗೆ ತಾಪಂ ಇಒ ರಮೇಶ್ ಮನಪರಿವರ್ತನೆ ಮಾಡುವ ಕೆಲಸ ಮಾಡಿದರು. ಆದರೆ ಪಿಡಿಒ ಅಮಾನತುಗೊಳಿಸುವ ಆದೇಶ ಬರುವವರೆಗೂ ನಾವು ಸ್ಥಳದಿಂದ ಕದಲುವುದಿಲ್ಲ ಎಂದು ಆಗ್ರಹಿಸಿ ಹೋರಾಟ ಮುಂದುವರಿಸಿದರು. ಅವರ ಹೋರಾಟ ಕುರಿತು ಜಿಪಂ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ರಮೇಶ್ ಅವರಿಗೆ ಮೊಬೈಲ್ ಮೆಸೇಜ್ ಮೂಲಕ ಹನುಮಂತಪ್ಪ ಅವರನ್ನು ಅರಬಿಳಚಿ ಗ್ರಾಪಂ ಕರ್ತವ್ಯದಿಂದ ಬಿಡುಗಡೆಗೊಳಿಸಿರುವ ಹಾಗೂ ಮುಂದಿನ ಕ್ರಮ ಕೈಗೊಳ್ಳುವ ಆದೇಶವನ್ನು ತಿಳಿಸಿದರು. ಇಒ ರಮೇಶ್ ಅಧಿಕೃತವಾಗಿ ಹೋರಾಟಗಾರರಿಗೆ ಮಾಹಿತಿ ನೀಡಿದ್ದು ಈ ಆದೇಶದ ಹಿನ್ನೆಲೆಯಲ್ಲಿ ಪ್ರತಿಭಟನೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.