ಅರಬಾವಿಯಲ್ಲಿದೆ ಮಲ್ಲಸರ್ಜನ ಸಮಾಧಿ

web1
ಗೋಕಾಕದಲ್ಲಿ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಡಾ.ಸಿ.ಕೆ.ನಾವಲಗಿ, ಪ್ರೊ.ಎಂ.ಎಸ್.ಗಂಗಾಧರಯ್ಯ, ಡಾ.ಮಹೇಶ ಗಾಜಪ್ಪನವರ, ಕಾಡಯ್ಯ ದಡ್ಡಿ, ವಿನುತಾ ನಾವಲಗಿ ಇದ್ದರು.
Published on

ಗೋಕಾಕ: ಕಿತ್ತೂರು ಸಂಸ್ಥಾನದ 11ನೇ ದೊರೆ ಮಲ್ಲಸರ್ಜ ದೇಸಾಯಿ ಅವರ ಸಮಾಧಿಯ ಪದಕಟ್ಟಿ ಅರಬಾವಿ ದುರದುಂಡೀಶ್ವರ ಮಠದಲ್ಲಿದೆ ಎಂದು ಸಂಶೋಧಕ, ಜಾನಪದ ವಿದ್ವಾಂಸ ಡಾ.ಸಿ.ಕೆ.ನಾವಲಗಿ ಹೇಳಿದರು.

ನಗರದಲ್ಲಿ ಆರ್‌ಸಿಯು ರಾಣಿ ಚನ್ನಮ್ಮ ಅಧ್ಯಯನ ಪೀಠ ಹಾಗೂ ಮಹಾಂತ ಶಿವಯೋಗಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ, ಅರಬಾವಿ ಮಠದ ಸಂಯುಕ್ತಾಶ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ರಾಜಾ ಮಲ್ಲಸರ್ಜ ದೇಸಾಯಿ ಕೊನೆಯ ದಿನಗಳು’ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.

ಮಲ್ಲಸರ್ಜನ ಆಳ್ವಿಕೆ ಕಾಲ ಹೋರಾಟ, ದಂಗೆಗಳಲ್ಲೇ ಕಳೆದು ಹೋಯ್ತು. ಯುದ್ಧ ಕೌಶಲ, ಸಂಸ್ಥಾನದ ಏಳಿಗೆ ಸಹಿಸದ ಪೇಶ್ವೆ ದೊರೆ ಮೋಸದಿಂದ ಮಲ್ಲಸರ್ಜನನ್ನು ಬಂಧಿಸಿ ಪುಣೆಯ ಮುಧೋಳ್ಕರ ವಾಡೆಯಲ್ಲಿ ಮೂರು ವರ್ಷ ಬಂಧಿಸಿಟ್ಟ. ಈ ಸಂದರ್ಭದಲ್ಲಿ ಕ್ಷಯರೋಗ ಪೀಡಿತನಾದ ಮಲ್ಲಸರ್ಜನನ್ನು ಬಂಧನದಿಂದ ಬಿಡುಗಡೆಗೊಳಿಸಲಾಯಿತು.

ಜೀವಂತ ಶವವಾಗಿರುವ ದೊರೆ ಪಲ್ಲಕ್ಕಿಯಲ್ಲಿ ರಾಜಧಾನಿ ಕಿತ್ತೂರಿಗೆ ಬರುವ ದಾರಿ ಮಧ್ಯೆ ಅರಬಾವಿ ಮಠದಲ್ಲಿ 1816ರಲ್ಲಿ ಪ್ರಾಣಬಿಟ್ಟನು. ಅವರ ಪಾರ್ಥಿವ ಶರೀರವನ್ನು ಮಠದ ಪಕ್ಕದಲ್ಲಿ ಚನ್ನಮ್ಮ, ರುದ್ರಮ್ಮ ಅವರ ಮಕ್ಕಳು, ಸಂಸ್ಥಾನದ ವೀರರು, ಸಾರ್ವಜನಿಕರ ಸಮಕ್ಷಮದಲ್ಲಿ ಸಮಾಧಿ ಮಾಡಿದರು. ಅದರ ಕುರುಹಾಗಿ ಪದಕಟ್ಟಿ ಕಟ್ಟಲಾಗಿದೆ. ಕಿತ್ತೂರು, ವಣ್ಣೂರಿನಲ್ಲಿ ಮಲ್ಲಸರ್ಜನ ಸಮಾಧಿ ಇಲ್ಲ. ಅದು ಅರಬಾವಿಯಲ್ಲೇ ಇದೆ ಎಂದು ವಿವರಿಸಿದರು.

ಚನ್ನಮ್ಮ ಅಧ್ಯಯನ ಪೀಠದ ನಿರ್ದೇಶಕ ಪ್ರೊ. ಎಂ.ಎಸ್ ಗಂಗಾಧರಯ್ಯ ಉದ್ಘಾಟಿಸಿದರು. ಡಾ.ಮಹೇಶ ಗಾಜಪ್ಪನವರ, ಕಾಡಯ್ಯ ದಡ್ಡಿ, ವಿನೂತಾ ನಾವಲಗಿ, ಪ್ರಾಚಾರ್ಯ ಎಸ್.ಡಿ.ವಾಲಿಕಾರ, ಎಸ್.ಎ.ಸುಭಂಜಿ, ಆರ್.ಎಂ ಕಳಸದ, ಸಿರೀನ್ ಮೋಮಿನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net