ಅರಣ್ಯೀಕರಣಕ್ಕೆ ಸರ್ವ ಸಹಕಾರ

11 Dwd 1
Published on

ಧಾರವಾಡ: ಜಪಾನ್​ನ ಸಸ್ಯವಿಜ್ಞಾನಿ ಅಕಿರಾ ಮಿಯಾವಕಿ ಅವರು ನೈಸರ್ಗಿಕ ಕಾಡುಗಳನ್ನು ಬೆಳೆಸುವ ಮೂಲಕ ಜಗತ್ತಿನಾದ್ಯಂತ ಹೆಸರುವಾಸಿಯಾಗಿದ್ದಾರೆ. ಮಿಯಾವಕಿ ಹೆಸರಿನಲ್ಲಿ ನಗರದಲ್ಲಿ ದಟ್ಟ ಅರಣ್ಯೀಕರಣಕ್ಕೆ ಮುಂದಾಗಿರುವ ಹುಬ್ಬಳ್ಳಿಯ ವಿದ್ಯಾನಗರ ರೋಟರಿ ಕ್ಲಬ್ ಕಾರ್ಯ ಶ್ಲಾಘನೀಯ. ಮಿಯಾವಕಿಯಿಂದ ಹಸಿರೀಕರಣ ಸಾಧ್ಯ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.

ಹುಬ್ಬಳ್ಳಿಯ ವಿದ್ಯಾನಗರ ರೋಟರಿ ಕ್ಲಬ್​ನಿಂದ ನಗರದ ಕೆಲಗೇರಿಯ ಆರೊವಿಲ್ಲೆ ಫಾಮರ್್​ನಲ್ಲಿ ಭಾನುವಾರ ಆಯೋಜಿಸಿದ್ದ ಮಿಯಾವಕಿ ಫಾರೆಸ್ಟ್ ಡ್ರೖೆವ್​ಗೆ ಚಾಲನೆ ನೀಡಿ ಅವರು ಮಾತನಾಡಿದರು.

ಮಿಯಾವಕಿ ವಿಧಾನದ ಮೂಲಕ ನಗರದ ಕಡಿಮೆ ಜಾಗದಲ್ಲಿ ದಟ್ಟವಾಗಿ ಹಲವು ಬಗೆಯ ಸಸಿಗಳನ್ನು ಬೆಳೆಸಲಾಗುತ್ತದೆ. ಕಡಿಮೆ ಜಾಗದಲ್ಲಿ ಹೆಚ್ಚು ಸಸಿಗಳನ್ನು ಬೆಳೆಸುವುದರಿಂದ ಖರ್ಚು ತೀರ ಕಡಿಮೆ. 2- 3 ವರ್ಷಗಳಲ್ಲಿ ಸಸಿಗಳು ಮರಗಳಾಗಿ ಬೆಳೆಯುತ್ತವೆ. ಮಹಾನಗರ ಪಾಲಿಕೆಯಿಂದ ಈ ವಿಧಾನ ಅಳವಡಿಸಿಕೊಳ್ಳಲಾಗುತ್ತಿದೆ. ಹುಬ್ಬಳ್ಳಿ- ಧಾರವಾಡ ಹಸಿರಾಗಿದ್ದು, ಇನ್ನಷ್ಟು ಹಸಿರೀಕರಣಕ್ಕೆ ನಾಂದಿಯಾಗಲಿ ಎಂದು ಹಾರೈಸಿದರು.

ಅತಿಥಿಯಾಗಿ ಪಾಲ್ಗೊಂಡಿದ್ದ ಕೇಂದ್ರ ಹಣಕಾಸು ಸಚಿವಾಲಯದ ಜಾರಿ ನಿರ್ದೇಶನಾಲಯದ ಉಪ ನಿರ್ದೇಶಕ ಮಲ್ಲಿಕಾರ್ಜುನ ಮಾಮನಿ ಮಾತನಾಡಿ, ಮಿಯಾವಕಿ ವಿಧಾನ ಬಹಳ ಪ್ರಯೋಜನಕಾರಿ. ಸಂಘ- ಸಂಸ್ಥೆಗಳೊಂದಿಗೆ ಸಾರ್ವಜನಿಕರ ಸಹಭಾಗಿತ್ವ ಅತಿ ಮುಖ್ಯ ಎಂದರು.

ಸನ್ಮಾನ ಸ್ವೀಕರಿಸಿದ ಹುಬ್ಬಳ್ಳಿಯ ಖ್ಯಾತ ವೈದ್ಯ ಡಾ. ಮಹಾಂತೇಶ ತಪಶೆಟ್ಟಿ ಮಾತನಾಡಿ, ಈಗಿನ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರೂ ಪರಿಸರಕ್ಕೆ ಕೊಡುಗೆ ನೀಡಬೇಕಾಗಿದೆ. ಜನ್ಮದಿನ, ಶುಭ ಸಂದರ್ಭಗಳಲ್ಲಿ ಹಣ ಪೋಲು ಮಾಡದೆ ಒಬ್ಬೊಬ್ಬರು ಒಂದೊಂದು ಸಸಿ ನೆಡುವ ಮೂಲಕ ಪರಿಸರಕ್ಕೆ ಕೊಡುಗೆ ನೀಡಬೇಕು ಎಂದರು.

ಗೋ ಗ್ರೀನ್ ಪೆಡ್ಲರ್ಸ್ ಅಧ್ಯಕ್ಷ ಬಾಲಚಂದ್ರ ಡಂಗನವರ ಅವರನ್ನು ಸನ್ಮಾನಿಸಲಾಯಿತು. ಭೂಮಿ ಪ್ರತಿಷ್ಠಾನದ ಡಾ. ಶಿವಾನಂದ ಠವಳಿ ಹಾಗೂ ತಂಡ ಪೂರೈಸಿದ 17 ಬಗೆಯ 300 ಸಸಿಗಳನ್ನು ಮಿಯಾವಕಿ ವಿಧಾನದಲ್ಲಿ ನೆಡಲಾಯಿತು.

ಐಆರ್​ಎಸ್ ಅಧಿಕಾರಿ ಫಕ್ಕೀರೇಶ ಬಾದಾಮಿ, ರೋಟರಿ ಚೇರ್ಮನ್ ಅರವಿಂದ ಪಾಟೀಲ, ವಿನಯ ಜಾಧವ, ಆನಂದ ಪಾಟೀಲ, ಸಂಜೀವ ಮಜುಮದಾರ ಇತರರಿದ್ದರು. ಹುಬ್ಬಳ್ಳಿಯ ವಿದ್ಯಾನಗರ ರೋಟರಿ ಕ್ಲಬ್ ಅಧ್ಯಕ್ಷೆ ಡಾ. ಮಹಿಮಾ ದಂಡ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ಜಯಶ್ರೀ ಜಾಧವ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net