ಅರಣ್ಯೀಕರಣಕ್ಕೆ ಭರ್ಜರಿ ಸಿದ್ಧತೆ

16 lxr 1 (1)
Published on

ಲಕ್ಷ್ಮೇಶ್ವರ: ತಾಲೂಕು ವ್ಯಾಪ್ತಿಯ ಶೆಟ್ಟಿಕೆರಿ ಸಸ್ಯಪಾಲನಾ ಕೇಂದ್ರದಲ್ಲಿ ಪ್ರತಿವರ್ಷ ಅರಣ್ಯೀಕರಣಕ್ಕೆ ಲಕ್ಷಾಂತರ ಸಸಿಗಳು ಸಿದ್ಧಗೊಳ್ಳುತ್ತಿವೆ. 30 ಎಕರೆ ವಿಸ್ತೀರ್ಣದ ಶೆಟ್ಟಿಕೇರಿಯ ಅಂಚಿನ ಅರಣ್ಯದಲ್ಲಿ ಸಾಮಾಜಿಕ ಮತ್ತು ಪ್ರಾದೇಶಿಕ ಅರಣ್ಯ ಇಲಾಖೆಯ 2 ಪ್ರತ್ಯೇಕ ಸಸ್ಯಪಾಲನಾ ಕೇಂದ್ರಗಳಿವೆ. ಇಲ್ಲಿನ ಅಧಿಕಾರಿಗಳು, ಸಿಬ್ಬಂದಿ, ದಿನಗೂಲಿ ಕೆಲಸಗಾರರು ಸಸಿಗಳ ಪಾಲನೆ, ಪೋಷಣೆ ಮೂಲಕ ಹಸಿರೀಕರಣಕ್ಕಾಗಿ ಶ್ರಮಿಸುತ್ತಿದ್ದಾರೆ.

ಶೆಟ್ಟಿಕೇರಿ ಸಸ್ಯಪಾಲನಾ ಕೇಂದ್ರದಲ್ಲಿ ಜಮೀನುಗಳು, ರಸ್ತೆ ಬದಿ, ಶಾಲೆ-ಕಾಲೇಜ್ ಮೈದಾನ ಗಳಲ್ಲಿ ತಪ್ಪಸಿ, ಹಲಗಲ, ಗುಲ್ ಮೊಹರ್, ಅಶೋಕ, ಹುಣಸಿ, ಮಹಾ ಗನಿ, ಶ್ರೀಗಂಧ, ಕಾಡು ಬಾದಾಮಿ, ಬಂಗಾಳಿ, ಕರಿಬೇವು, ನೆಲ್ಲಿ, ಸಾಗವಾನಿ, ನುಗ್ಗಿ, ರೆಂಟ್ರಿ, ಇಲಾತಿ ಹುಣಸಿ, ಬನ್ನಿ, ಪೇರಲ, ಮಾವು ಮತ್ತಿತರ ಸಸಿಗಳು ಲಭ್ಯ ಇವೆ. ಸಾಮಾಜಿಕ ಅರಣ್ಯ ವಲಯ ವಿಭಾಗದಿಂದ 1,31,732 ಸಸಿಗಳು ಮತ್ತು ಪ್ರಾದೇಶಿಕ ವಲಯದಿಂದ 1,18,981 ಸಸಿಗಳು ಸಿದ್ಧಗೊಂಡಿವೆ. ಈಗಾಗಲೇ ರೈತರು, ಸಾರ್ವಜನಿಕರು, ವಿವಿಧ ಇಲಾಖೆ, ಗ್ರಾಪಂ, ತಾಪಂ, ಶಾಲೆ- ಕಾಲೇಜ್, ಸಂಘ- ಸಂಸ್ಥೆಯವರು ಇಲ್ಲಿಂದ ಉಚಿತವಾಗಿ ಸಸಿಗಳನ್ನು ಒಯ್ದು ನೆಟ್ಟಿದ್ದಾರೆ. ಈಗಲೂ ಸಸಿಗಳನ್ನು ನೆಡುವ ಕಾರ್ಯ ಪ್ರಗತಿಯಲ್ಲಿದೆ.

ಕಳೆದ ವರ್ಷ ಸಾಮಾಜಿಕ ಅರಣ್ಯ ವಲಯದಿಂದ 1.14 ಲಕ್ಷ ಸಸಿಗಳು ಮತ್ತು ಪ್ರಾದೇಶಿಕ ಅರಣ್ಯ ವಲಯದಿಂದ 94 ಸಾವಿರ ಸಸಿಗಳು ಸಿದ್ಧವಾಗಿ ಅರಣ್ಯೀಕರಣಗೊಂಡಿದ್ದವು.

ಹೆಗ್ಗಳಿಕೆ: ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ನಡೆಸಿದ ಸಮೀಕ್ಷೆಯಲ್ಲಿ ದೇಶದಲ್ಲಿಯೇ ಗದಗ ಜಿಲ್ಲೆ ಉತ್ತಮ ಗಾಳಿ ಹೊಂದಿರುವ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದಕ್ಕೆ ತಾಲೂಕಿನ ವಲಯ ಅರಣ್ಯ ಇಲಾಖೆ ಕಾಣಿಕೆಯೂ ಬಹಳಷ್ಟಿದೆ. ಲಕ್ಷ್ಮೇಶ್ವರ, ಶಿರಹಟ್ಟಿ ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 11,665 ಹೆಕ್ಟೇರ್ ಅರಣ್ಯ ಪ್ರದೇಶವಿದೆ.

ಸಸಿಗಳು ಬೇಕಾದಲ್ಲಿ ಅರಣ್ಯ ರಕ್ಷಕ ರಮೇಶ ಕೆ. ಪೂಜಾರಿ (ಮೊ.ಸಂ. 89700 14109) ಅವರನ್ನು ಸಂರ್ಪಸಬಹುದು.

ಅರಣ್ಯ ಇಲಾಖೆಯು ಪ್ರತಿವರ್ಷ ಅರಣ್ಯ ಭೂಮಿ, ರಸ್ತೆ ಬದಿ, ಶಾಲೆ-ಕಾಲೇಜ್ ಸೇರಿ ಎಲ್ಲೆಡೆ ಸಸಿಗಳನ್ನು ನೆಟ್ಟು ಪೋಷಣೆ ಮಾಡುತ್ತದೆ. ಕೃಷಿ ಜಮೀನುಗಳಲ್ಲಿ ನೆಡಲು ರೈತರಿಗೆ ಉಚಿತವಾಗಿ ಮತ್ತು ಸಾರ್ವಜನಿಕರಿಗೆ 2ರಿಂದ 3 ರೂಪಾಯಿ ಸಹಾಯಧನದಲ್ಲಿ ಕರಿಬೇವು, ಹಬ್ಬೇವು, ನಿಂಬೆ, ನುಗ್ಗಿ, ಸಾಗವಾನಿ, ನೆಲ್ಲಿ ಸಸಿಗಳನ್ನು ಕೊಡಲಾಗುವುದು.| ಎ.ಎಚ್. ಮುಲ್ಲಾಪ್ರಾದೇಶಿಕ ವಲಯ ಅರಣ್ಯಾಧಿಕಾರಿ

ಶೆಟ್ಟಿಕೇರಿ ಸಸ್ಯಪಾಲನಾ ಕೇಂದ್ರಗಳಲ್ಲಿ ಸಿದ್ಧಪಡಿಸಿದ 1200 ಜಾತಿಯ ಸಸಿಗಳನ್ನು ಉಚಿತವಾಗಿ ತರಲಾಗಿದೆ. ಅವುಗಳನ್ನು ಪಟ್ಟಣದ 23 ವಾರ್ಡ್​ಗಳ ವ್ಯಾಪ್ತಿಯ ರಸ್ತೆಬದಿ, ಶಾಲೆ, ದೇವಸ್ಥಾನ ಪ್ರಾಂಗಣ, ಸಾರ್ವಜನಿಕ ಸ್ಥಳ, ಉದ್ಯಾನಗಳಲ್ಲಿ ನೆಡಲಾಗಿದೆ. ಅವುಗಳ ಪಾಲನೆ-ಪೋಷಣೆಯ ಜವಾಬ್ದಾರಿಯನ್ನು ಸಾರ್ವಜನಿಕರ ಸಹಭಾಗಿತ್ವದಲ್ಲಿ ನಿರ್ವಹಿಸಲಾಗುತ್ತಿದೆ.| ಶಂಕರ ಬ್ಯಾಡಗಿಪರಿಸರ ಪ್ರೇಮಿ, ಲಕ್ಷ್ಮೇಶ್ವರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net